

ಬೆಂಗಳೂರು: ಸಹದೇವ್ ಕೆಲವಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ `ಕೆಂಡ’ ಚಿತ್ರದ ಕಡೆಯಿಂದ ಹಂತ ಹಂತವಾಗಿ ಒಂದಷ್ಟು ಅಚ್ಚರಿಯ ಸುದ್ದಿಗಳು ಜಾಹೀರಾಗುತ್ತಲೇ ಬರುತ್ತಿವೆ. ಈ ಹಿಂದೆ ತೆರೆಗೆ ಬಂದ 'ಗಂಟುಮೂಟೆ' ಚಿತ್ರ ಸಿನಿಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇದೀಗ ಈ ಸಿನಿಮಾಗೆ ಕೆಲಸ ಮಾಡಿದ್ದ ತಂಡವೇ ಕೆಂಡ ಚಿತ್ರಕ್ಕೂ ಕೆಲಸ ಮಾಡುತ್ತಿದ್ದು, ರೂಪಾ ರಾವ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ಈ ಸಿನಿಮಾ ಎಲ್ಲ ರೀತಿಯತಿಂದಲೂ ಭಿನ್ನ ಜಾಡಿನದ್ದೆಂಬ ವಿಚಾರ ಈಗಾಗಲೇ ಪ್ರೇಕ್ಷಕ ವಲಯಕ್ಕೆ ದಾಟಿಕೊಂಡಿದೆ. ಇದೀಗ ಕೆಂಡದ ಆಡಿಯೋ ಹಕ್ಕುಗಳ ವಿಚಾರದಲ್ಲಿ ಖುಷಿಯ ಸಂಗತಿಯೊಂದನ್ನು ಚಿತ್ರತಂಡ ಹಂಚಿಕೊಂಡಿದೆ. ಹೆಸರಲ್ಲೇ ನಿಗಿನಿಗಿಸುವ ಆವೇಗವೊಂದನ್ನು ಬಚ್ಚಿಟ್ಟುಕೊಂಡಂತಿರೋ ಸಿನಿಮಾ `ಕೆಂಡ’. ಇದರ ಮೂಲಕ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಸಿನಿಮಾ ಮ್ಯೂಸಿಕ್ ವಲಯದಲ್ಲಿ ದೊಡ್ಡ ಹೆಸರು ಮಾಡಿರುವ ಸಂಸ್ಥೆ ಡಿ ಬೀಟ್ಸ್ ಪಾಲಾಗಿದೆ. ಖುದ್ದು ಸಂಗೀತ ನಿರ್ದೇಶಕ ಕಂ ಈ ಸಂಸ್ಥೆಯ ಮುಖ್ಯಸ್ಥರಾದ ವಿ. ಹರಿಕೃಷ್ಣ ಕೆಂಡದ ಹಾಡುಗಳನ್ನು ಕೇಳಿ, ಬಹುವಾಗಿ ಮೆಚ್ಚಿಕೊಂಡು ಆಡಿಯೋ ಹಕ್ಕುಗಳನ್ನು ಖರೀದಿಸಿದ್ದಾರೆ. ಈ ಸಂದರ್ಭದಲ್ಲಿ ಹರಿಕೃಷ್ಣ ಕಡೆಯಿಂದ ಬಂದಿರುವ ಮೆಚ್ಚುಗೆಯ ಮಾತುಗಳು ಚಿತ್ರತಂಡಕ್ಕೆ ಮತ್ತಷ್ಟು ಹುರುಪು ತುಂಬಿವೆ.
ಈ ಮೂಲಕ ಮೊದಲ ಹೆಜ್ಜೆಯಲ್ಲಿಯೇ ರಿತ್ವಿಕ್ ಕಾಯ್ಕಿಣಿ ಗಮನ ಸೆಳೆದಿದ್ದಾರೆ. ಅಂದಹಾಗೆ, ಕೆಂಡ ಹಾಡುಗಳಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಅದರಲ್ಲೊಂದು ಹಾಡನ್ನು ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಹಾಡಿರೋದು ವಿಶೇಷ. ಅದಿತಿ ಸಾಗರ್ ಕೂಡಾ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಸದ್ಯಕ್ಕೆ ಇದಿಷ್ಟು ಮಾಹಿತಿಯನ್ನಷ್ಟೇ ಚಿತ್ರತಂಡ ಹಂಚಿಕೊಂಡಿದ್ದು, ಮಿಕ್ಕುಳಿದ ಮಾಹಿತಿಗಳು ಇಷ್ಟರಲ್ಲಿಯೇ ಪ್ರೇಕ್ಷಕರಿಗೆ ತಿಳಿಸಲಿದೆ.