ಪ್ರಗತಿ ಚಾಲನೆಗೆ ಮೋದಿ; ಪ್ರಧಾನಿಯಿಂದ ಕೆಂಪೇಗೌಡ ಪುತ್ಥಳಿ ಅನಾವರಣ ಇಂದು

Kempegowda 1111
Published on

ಬೆಂಗಳೂರು: ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿರುವಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳುತ್ತಿವೆ. ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರ ‘ಅಭಿವೃದ್ಧಿ ಅಜೆಂಡಾ’ ಹೊತ್ತ ರಾಜ್ಯ ಪ್ರವಾಸದ ಸರಣಿ ಮುಂದುವರಿದಿದೆ. ಕಳೆದ ಜೂನ್​ನಲ್ಲಿ ವಿವಿಧ ಯೋಜನೆಗೆ ಚಾಲನೆ, ಶಂಕುಸ್ಥಾಪನೆ, ಹಸಿರು ನಿಶಾನೆ ನೀಡಿದ್ದ ಪ್ರಧಾನಿ ಈಗ ಎರಡನೇ ಕಂತಿನ ರೂಪದಲ್ಲಿ ಮತ್ತಷ್ಟು ಕೊಡುಗೆಯನ್ನು ನಾಡಿಗೆ ಸಮರ್ಪಿಸಲು ಶುಕ್ರವಾರ ಆಗಮಿಸುತ್ತಿದ್ದಾರೆ.

ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ, ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ, ವಿಮಾನ ನಿಲ್ದಾಣದ ಟರ್ವಿುನಲ್-2 ಉದ್ಘಾಟನೆ ಪ್ರಧಾನಿ ಕಾರ್ಯಕ್ರಮದ ಪ್ರಮುಖ ಸಂಗತಿಗಳು. ರಾಜಕೀಯ ಪಕ್ಷಗಳು ಚುನಾವಣಾ ಮೂಡ್​ಸೆಟ್ ಮಾಡುವ ಸಂದರ್ಭದಲ್ಲಿ ಅಭಿವೃದ್ಧಿಯ ರುಚಿ ತೋರಿಸುವ ಲೆಕ್ಕಾಚಾರದಲ್ಲಿ ಮೋದಿ ಪ್ರವಾಸ ಮಹತ್ವ ಪಡೆದುಕೊಂಡಿದೆ. ಹೆಚ್ಚು ಜನರನ್ನು ತಲುಪುವ ಸೇವೆಗಳಿಗೆ ಚಾಲನೆ ಕೊಡುವುದು, ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡುವ ಮೂಲಕ ದೊಡ್ಡ ಸಮುದಾಯ ತಲುಪುವ ಪ್ರಯತ್ನ ಇದಾಗಿರಲಿದೆ.

ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಭೇಟಿ ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ನೀಡಿದ ಸಿಎಂ, 25 ಲಕ್ಷ ಪ್ರಯಾಣಿಕರ ಸಾಮರ್ಥ್ಯದ 2ನೇ ಟರ್ವಿುನಲ್​ನಿಂದ ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈಗಿರುವುದು 35 ಲಕ್ಷ ಸಾಮರ್ಥ್ಯವುಳ್ಳದ್ದು, ಇವೆರಡೂ ಸೇರಿದರೆ ದೇಶದ 2 ನೇ ಅತಿ ದೊಡ್ಡ ಮತ್ತು ಅತಿ ಹೆಚ್ಚು ಪ್ರಯಾಣಿಕ ಬಳಕೆಯ ವಿಮಾನ ನಿಲ್ದಾಣವಾಗಲಿದೆ. ದೆಹಲಿಯ ನಂತರ ಅತಿ ದೊಡ್ಡ ವಿಮಾನನಿಲ್ದಾಣವಾಗಲಿದೆ.ಎಂದರು.

ಶಿಲ್ಪಿಗೆ ಗೌರವ: ಕೆಂಪೇಗೌಡರ ಪ್ರಗತಿ ಪ್ರತಿಮೆ ನಿರ್ವಿುಸಿದ ರಾಮ್ ಸುತಾರ್ ಅಹಮದಾಬಾದ್​ನಲ್ಲಿರುವ ವಲ್ಲಭಭಾಯಿ ಪಟೇಲ್ ಅವರ ಐಕ್ಯತಾ ಮೂರ್ತಿ, ಅಂಬೇಡ್ಕರ್ ಅವರ ಅತಿ ಎತ್ತರದ ಮೂರ್ತಿಯನ್ನು ರೂಪಿಸಿದ್ದಾರೆ. ಶುಕ್ರವಾರ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಲಿದ್ದಾರೆ ಎಂದು ಸಿಎಂ ಹೇಳಿದರು.

ನಾಡಿಗೆ ಅರ್ಪಣೆ
  • 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ
  • ವಂದೇಭಾರತ್ ರೈಲಿಗೆ ಹಸಿರು ನಿಶಾನೆ
  • ಕೆಂಪೇಗೌಡ ಅಂ.ವಿಮಾನ ನಿಲ್ದಾಣದ ಟರ್ವಿುನಲ್ -2
  • ಧಾರ್ವಿುಕ ದತ್ತಿ ಇಲಾಖೆಯ ಗೌರವ್ ಕಾಶಿ ದರ್ಶನ ರೈಲು ಯಾತ್ರೆಗೆ ಚಾಲನೆ

ಪ್ರತಿಮೆಗಳಿಗೆ ಮಾಲಾರ್ಪಣೆ

ಕನಕದಾಸ ಜಯಂತಿ ಹಿನ್ನೆಲೆ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆ ಹಾಗೂ ವಾಲ್ಮೀಕಿ ಮೂರ್ತಿಗೆ ಗೆ ಪ್ರಧಾನಿ ಪುಷ್ಪ ನಮನ ಮಾಡಲಿದ್ದಾರೆ. ನಂತರ ರೈಲು ನಿಲ್ದಾಣಕ್ಕೆ ತೆರಳಿ ಚೆನ್ನೈ-ಮೈಸೂರು ವಂದೇ ಭಾರತ್​ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net