ಪತ್ರಿಕಾ ವರದಿಗಳು ವಸ್ತುನಿಷ್ಠವಾಗಿರಲಿ

ಪತ್ರಿಕಾ ವರದಿಗಳು ವಸ್ತುನಿಷ್ಠವಾಗಿರಲಿ
Published on

ಸಾಲಿಗ್ರಾಮ: ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಮತ್ತು ಜನರ ಸಮಸ್ಯೆಯನ್ನು ಸರ್ಕಾರಕ್ಕೆ ತಲುಪಿಸಲು ಪತ್ರಿಕೋದ್ಯಮ ಪ್ರಮುಖ ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಠಕುಮಾರ್ ಅಭಿಪ್ರಾಯಪಟ್ಟರು.

ಸಾಲಿಗ್ರಾಮ ಪಟ್ಟಣದಲ್ಲಿ ಪತ್ರಿಕಾ ವಿತರಕರು ಹಮ್ಮಿಕೊಂಡಿದ್ದ, ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತ್ರಿಕೆಗಳಿಂದ ಸ್ಥಳೀಯ, ರಾಜ್ಯ, ಅಂತಾರಾಷ್ಟ್ರೀಯ ವಿಚಾರಗಳನ್ನು ತಿಳಿಯಬಹುದಾದ್ದರಿಂದ ಓದುಗರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪತ್ರಿಕೆಗಳನ್ನು ತಲುಪಿಸುವ ವಿತರಕರ ಶ್ರಮವನ್ನು ಪರಿಗಣಿಸಬೇಕಾಗಿದೆ.

ಪತ್ರಕರ್ತರು ಪಕ್ಷ, ಜಾತಿ, ವ್ಯಕ್ತಿಯ ಪರವಾಗಿ ಸುದ್ದಿಗಳನ್ನು ಪ್ರಕಟಿಸದೆ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ವಸ್ತು ನಿಷ್ಠ ಸುದ್ದಿಗಳಿಗೆ ಒತ್ತು ನೀಡಬೇಕು. ಸರ್ಕಾರ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.

ತಾಲೂಕು ಕಚೇರಿಯ ಶೀರಸ್ತೇದಾರ್ ಶಿವಕುಮಾರ್ ಮಾತನಾಡಿ, ಪತ್ರಿಕೆಗಳಲ್ಲಿ ಪ್ರಕಟವಾದ ಸಮಸ್ಯೆಗಳನ್ನು ಬಗೆಹರಿಸಲು ತಾಲೂಕು ಆಡಳಿತದಿಂದ ಪ್ರಯತ್ನಿಸಲಾಗುತ್ತಿದೆ. ಸಮಾಜದ ಅಂಟುಡೊಂಕುಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಪತ್ರಕರ್ತರು ಮಾಡಬೇಕು, ಸರ್ಕಾರ ಕೂಡ ಪತ್ರಕರ್ತರ ಬಗ್ಗೆ ಕಾಳಜಿ ವಹಿಸಲಿ ಎಂದರು. ಗ್ರಾಮ ಪಂಚಾಯಿತಿ ಸದಸ್ಯ ರಾಂಪುರ ಲೋಕೇಶ್ ಮಾತನಾಡಿದರು.

ಪತ್ರಿಕೋದ್ಯಮ ಕ್ಷೇತ್ರದ ಸಾಧಕರಾದ ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಭೇರ್ಯ ಸಿ.ಸಿ.ಮಹದೇವ್, ಕೆ.ಟಿ. ಮೋಹನ್ ಕುಮಾರ್, ಎಸ್.ಬಿ. ಹರೀಶ್, ಬಸವರಾಜು, ಬ್ರಿಜೇಶ್, ಅಮಿತ್, ಚೇತನ್ ಇತರರನ್ನು ಅಭಿನಂದಿಸಲಾಯಿತು.

ಸಿಡಿಸಿ ಉಪಾಧ್ಯಕ್ಷ ಪರೀಕ್ಷಿತ್, ಪತ್ರ ಬರಹಗಾರ ವಸಂತ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು, ಹರ್ಷವರ್ಧನ್, ಗಣೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net