ಕಾವೇರಿ ನೀರು ಕರ್ನಾಟಕದ ಪಾಲು ಎಷ್ಟೆಂದು ತಿಳಿಸದ ನ್ಯಾಯಮಂಡಳಿ; ರಾಜ್ಯದ ಹಕ್ಕು ಪ್ರಕಟಿಸಲು ಪಿಐಎಲ್

Hicourt
Published on

ಪವಿತ್ರಾ ಕುಂದಾಪುರ ಬೆಂಗಳೂರು
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕಕ್ಕೆ ಅನ್ಯಾಯವಾಗಿವೆ. ಪ್ರತಿ ತಿಂಗಳು ತಮಿಳುನಾಡಿಗೆ ಎಷ್ಟು ನೀರು ಹಂಚಿಕೆಯಾಗಬೇಕು ಎಂದು ಪ್ರಕಟಿಸಿರುವ ಕಾವೇರಿ ನ್ಯಾಯಮಂಡಳಿ, ಕರ್ನಾಟಕದ ಪಾಲು ಎಷ್ಟು? ಎಂಬುದನ್ನು ಪ್ರಕಟಿಸದೆ ಲೋಪ ಉಂಟಾಗಿರುವ ವಾದಕ್ಕೆ ಸಹಮತ ವ್ಯಕ್ತಪಡಿಸಿರುವ ಹೈಕೋರ್ಟ್, ನ್ಯಾಯಮಂಡಳಿ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದು, ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಪ್ರಸ್ತಾವನೆ ಮಂಡಿಸಲು ಅರ್ಜಿದಾರರಿಗೆ ಅವಕಾಶ ಕೊಟ್ಟಿದೆ.

ಕಾವೇರಿ ನ್ಯಾಯಮಂಡಳಿ ಅಧಿನಿಯಮ 9ರಲ್ಲಿ ಆಗಿರುವ ಲೋಪದೋಷ ಸರಿಪಡಿಸುವಂತೆ ಜಾಗೃತ ಕರ್ನಾಟಕದ ಕೆ.ಎನ್.ಮಂಜುನಾಥ್ ಎಂಬುವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಅರ್ಜಿ ಇತ್ಯರ್ಥಪಡಿಸಿದೆ.

ಕೆ.ಎನ್.ಮಂಜುನಾಥ್, ಖುದ್ದು ಪಾರ್ಟಿ ಇನ್ ಪರ್ಸನ್ ಆಗಿ ವಾದ ಮಂಡಿಸಿದರು. ಕರ್ನಾಟಕ ಹಾಗೂ ತಮಿಳುನಾಡಿಗೆ ನೀರು ಹಂಚಿಕೆಯ ಹಕ್ಕನ್ನು ಸ್ಪಷ್ಟಪಡಿಸುವ ಉದ್ದೇಶದಿಂದ ಕಾವೇರಿ ನ್ಯಾಯಮಂಡಳಿ ರಚಿಸಲಾಗಿದೆ. ನೀರು ಹಂಚಿಕೆ ಹಕ್ಕಿನ ಪಾಲುದಾರಿಕೆ ಅನ್ವಯ ತಮಿಳುನಾಡು ಎಷ್ಟು ಪಡೆಯಲು ಅರ್ಹವಾಗಿದೆ ಎನ್ನುವುದನ್ನು ಉಲ್ಲೇಖಿಸಲಾಗಿದೆ. ಆದರೆ, ಕರ್ನಾಟಕದ ಹಕ್ಕನ್ನು ಪ್ರಕಟಿಸಿಲ್ಲ. ಇದು ವಿಧಿ 14 ಮತ್ತು 21ರ ಉಲ್ಲಂಘನೆಯಾಗಿದೆ. ಈ ಲೋಪವನ್ನು 8 ವರ್ಷದಿಂದ ಯಾರೂ ಸರಿಪಡಿಸಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಈ ಪ್ರಮಾದದಿಂದಾಗಿ ಕನ್ನಡಿಗರ ಮೇಲೆ ನಿರಂತರ ಶೋಷಣೆಯಾಗುತ್ತಿದೆ. ಸಂಬಂಧಪಟ್ಟ ಪ್ರಾಧಿಕಾರದವರು 227 ವಿಧಿಯ ಅಡಿಯಲ್ಲಿ ಪ್ರಕಟಿಸಲಾಗದೆ ಉಳಿದಿರುವ ಕಾಲಂಗಳನ್ನು ಎರಡು ವಾರಗಳ ಒಳಗಾಗಿ ಪ್ರಕಟಿಸಬೇಕು. ಕಾವೇರಿ ನ್ಯಾಯಮಂಡಳಿ ಲೋಪದೋಷ ಸರಿಪಡಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಪ್ರತಿಕ್ರಿಯಿಸಿದ ಸರ್ಕಾರಿ ಪರ ಅಭಿಯೋಜಕರು, ವಿವರಣೆಯಲ್ಲಿ ಸತ್ಯವಿರಬಹದು. ಆದರೆ, ಈ ಸಂಬಂಧ ಹೈಕೋರ್ಟ್ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ ಎನ್ನುವ ವಿವರಣೆ ನೀಡಿದರು.

ವಾದ-ಪ್ರತಿವಾದ ಆಲಿಸಿದ ಸಿಜೆ ನೇತೃತ್ವದ ಪೀಠ, ಕಾವೇರಿ ನ್ಯಾಯಮಂಡಳಿ ರಚಿಸಿರುವ ಸಂಪುಟಗಳನ್ನು ಈಗಾಗಲೆ ಸುಪ್ರೀಂಕೋರ್ಟ್ ಪುರಸ್ಕರಿಸಿದೆ. ಹೀಗಿರುವಾಗ ನಾವು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ಆದರೆ, ಅರ್ಜಿಯಲ್ಲಿ ವಿವರಿಸಿರುವ ಲೋಪದೋಷಗಳ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದ ಜತೆಗೆ ಅರ್ಜಿದಾರರು ಪ್ರಸ್ತಾಪಿಸಲು ಅವಕಾಶವಿದೆ ಎಂದು ತಿಳಿಸಿದೆ.

ಅನ್ಯಾಯದ ಬಗ್ಗೆ ಅಧ್ಯಯನ

ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಹಿನ್ನಡೆಯಾಗುತ್ತಿರುವ ಕುರಿತು ಅರ್ಜಿದಾರರು ಅಧ್ಯಯನ ನಡೆಸಿದ್ದರು. ಕಾವೇರಿ ನ್ಯಾಯಮಂಡಳಿ ರಚಿಸಿರುವ ಐದು ಸಂಪುಟಗಳನ್ನು ಅಧ್ಯಯನ ನಡೆಸಿದಾಗ ಅಧಿನಿಯಮ 9ರಲ್ಲಿ ಲೋಪವಿರುವುದು ಗೊತ್ತಾಗಿ, ಇದನ್ನು ಸರಿಪಡಿಸಲು ಆದೇಶಿಸುವಂತೆ ಮನವಿ ಮಾಡಿ 2023ರ ಅ.30ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಎಲ್ಲರೂ ಸಮಾನರು ಎಂದಾದರೆ ಕರ್ನಾಟಕದ ನೀರಿನ ಪಾಲುದಾರಿಕೆ ಹಕ್ಕು ಪ್ರಕಟಿಸದೆ ಬಾಕಿ ಉಳಿಸಿಕೊಂಡಿರುವುದು ಅನ್ಯಾಯವಲ್ಲವೇ? 870 ಪುಟಗಳ ಐದು ಸಂಪುಟಗಳಲ್ಲಿ 860 ಪುಟಗಳಷ್ಟು ಮಾಹಿತಿ ಕರ್ನಾಟಕದ ಪರವಾಗಿದೆ. ಆದರೂ ನಮ್ಮ ಜನತೆ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಇದೆ. ಇದು ಪಕ್ಷ- ಪ್ರತಿಪಕ್ಷಗಳ ವಿಚಾರವಲ್ಲ. ಸರ್ವರೂ ದನಿ ಎತ್ತಬೇಕಾಗಿದೆ. ಸಂಬಂಧಪಟ್ಟ ಪ್ರಾಧಿಕಾರಗಳು ನಮ್ಮ ಬೇಡಿಕೆ ಈಡೇರಿಸುವಂತಾಗಲಿ.
-ಕೆ.ಎನ್ ಮಂಜುನಾಥ್, ಜಾಗೃತ ಕರ್ನಾಟಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net