

ನವದೆಹಲಿ: ಭಾರತದ ಇತರೆಡೆಗಳಂತೆ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಕೂಡ ಕೋವಿಡ್-ಪಿಡುಗಿನ ಹಾವಳಿ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಈ ರಾಜ್ಯದಲ್ಲಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲು ಕಾಶ್ಮೀರದ ದಿನಪತ್ರಿಕೆಯೊಂದು ವಿಶಿಷ್ಟ ಮಾದರಿ ಅನುಸರಿಸಿ ಜನಮಾನಸವನ್ನು ಗೆದ್ದಿದೆ.
ಡೈಲಿ ರೋಶ್ನಿ ಎಂಬ ಪತ್ರಿಕೆ ತನ್ನ ಮಂಗಳವಾರದ ದಿನಪತ್ರಿಕೆಗಳಿಗೆ ಮಾಸ್ಕ್ಗಳನ್ನು ಲಗತ್ತಿಸಿ, ಮಾಸ್ಕ್ನ ಬಳಕೆ ಅತ್ಯಗತ್ಯವಾಗಿದೆ ಎಂಬ ಸಂದೇಶದೊಂದಿಗೆ ತನ್ನ ಗ್ರಾಹಕರೆಲ್ಲರಲ್ಲೂ ಜಾಗೃತಿ ಮೂಡಿಸಲು ಪ್ರಯತ್ನಿಸಿದೆ.
ಮಾಸ್ಕ್ಗಳನ್ನು ಪ್ಯಾಕ್ ಮಾಡಿ, ಪತ್ರಿಕೆಗಳಿಗೆ ಅಂಟಿಸಲು ನಾವು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕಾಯಿತು. ಮಾಸ್ಕ್ಗಳನ್ನು ಲಗತ್ತಿಸಲಾದ ಪ್ರತಿಕೆಗಳನ್ನು ಸಕಾಲದಲ್ಲಿ ಮಾರುಕಟ್ಟೆಗೆ ತಲುಪಿಸುವಲ್ಲಿ ಈ ಸಿಬ್ಬಂದಿಯ ಶ್ರಮ ಶ್ಲಾಘನಾರ್ಹ ಎಂದು ಪತ್ರಿಕೆಯ ಮುಖ್ಯ ಸಂಪಾದಕ ಝಹೂರ್ ಅಹಮದ್ ಶೋರಾ ಹೇಳಿದ್ದಾರೆ.
ಪ್ರತಿಯೊಂದು ಪತ್ರಿಕೆಗೆ ಮಾಸ್ಕ್ಗಳನ್ನು ಲಗತ್ತಿಸಿ, ಅವುಗಳ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಐಡಿಯಾ ಜೆಹಾದ್ ಶೋರಾ ಅವರದ್ದಾಗಿತ್ತು. ಸಮಾಜದ ಒಳಿತಿಗಾಗಿ ಒಂದಷ್ಟು ಕ್ರಿಯಾಶೀಲತೆಯನ್ನು ಬೆರೆಸುವುದು ನಮ್ಮ ಉದ್ದೇಶವಾಗಿತ್ತು ಎಂದು ತಿಳಿಸಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಕರೊನಾ ವೈರಾಣು ಸೋಂಕು ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸರ್ಕಾರ ಕಣಿವೆ ರಾಜ್ಯದಲ್ಲಿ ಜು.12ರಿಂದ ಮತ್ತೊಮ್ಮೆ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸಿದೆ. ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ 14,650ಕ್ಕೆ ಹೆಚ್ಚಳವಾಗಿದ್ದು, ಇದುವರೆಗೆ 259 ಜನರ ಮರಣಿಸಿದ್ದಾರೆ.