

ಮಥುರಾ: 1985ರಲ್ಲಿ ರಾಜಸ್ಥಾನದ ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದ, ಅಂದಿನ ಮುಖ್ಯಮಂತ್ರಿಯ ರಾಜೀನಾಮೆಗೆ ಕಾರಣವಾಗಿದ್ದ ಕೊಲೆ ಪ್ರಕರಣವೊಂದರ ತೀರ್ಪನ್ನು ಇಂದು ಅಂದರೆ 35 ವರ್ಷಗಳ ಬಳಿಕ ಮಥುರಾ ಕೋರ್ಟ್ ಪ್ರಕಟಿಸಿದೆ.
1985ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಡೆದ ರಾಜಸ್ಥಾನದ ಭರತಪುರ್ ರಾಜಪ್ರಭುತ್ವದ ರಾಜಾ ಮಾನ್‌ಸಿಂಗ್ ಅವರ ಹತ್ಯೆ ಪ್ರಕರಣ ಇದಾಗಿದೆ. ಚುನಾವಣಾ ಸಮಯದಲ್ಲಿನ ವೈಷಮ್ಯದ ಹಿನ್ನೆಲೆಯಲ್ಲಿ ಈ ಹತ್ಯೆ ಮಾಡಲಾಗಿತ್ತು. ಈ ಕುರಿತು ಇಂದು ತೀರ್ಪು ಪ್ರಕಟಿಸಿರುವ ಮಥುರಾ ಸಿಬಿಐ ವಿಶೇಷ ನ್ಯಾಯಾಲಯ,11 ಪೊಲೀಸರನ್ನು ದೋಷಿಗಳೆಂದು ಘೋಷಿಸಿದೆ. ಶಿಕ್ಷೆಯ ಪ್ರಮಾಣ ನಾಳೆ ಪ್ರಕಟವಾಗಲಿದೆ.
ಅಂದು ನಡೆದಿದ್ದ ಚುನಾವಣೆಯಲ್ಲಿ ಡೀಗ್ ವಿಧಾನಸಭಾ ಕ್ಷೇತ್ರದಿಂದ ರಾಜಾ ಮಾನ್‌ಸಿಂಗ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ನಿವೃತ್ತ ಐಎಎಸ್ ಅಧಿಕಾರಿ ಬ್ರಿಜೇಂದ್ರ ಸಿಂಗ್ ಅವರನ್ನು ಕಣಕ್ಕೆ ಇಳಿಸಿತ್ತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭರತಪುರ್ ರಾಜಮನೆತನದ ಧ್ವಜಕ್ಕೆ ಅಪಮಾನ ಮಾಡಿದ್ದರು. ಇದಕ್ಕೆ ಆಕ್ರೋಶಗೊಂಡಿದ್ದ ಮಾನ್‌ಸಿಂಗ್ ಅವರು, 1985ರ ಫೆಬ್ರವರಿ 20ರಂದು ಅಂದಿನ ಮುಖ್ಯಮಂತ್ರಿ ಶಿವಚರಣ್ ಮಾಥುರ್ ಅವರ ಚುನಾವಣಾ ಪ್ರಚಾರ ಸಭೆಗೆ ತಮ್ಮ ಜೀಪ್ ನುಗ್ಗಿಸಿದ್ದರು, ಮಾತ್ರವಲ್ಲದೇ ಅವರ ಹೆಲಿಕಾಪ್ಟರ್‌ಗೆ ಹಾನಿ ಮಾಡಿದ್ದರು.
ಘಟನೆ ನಡೆದ ಮಾರನೆಯ ದಿನ (ಫೆಬ್ರವರಿ 21) ರಾಜಾ ಮಾನ್‌ಸಿಂಗ್ ತಾವು ಮಾಡಿದ ತಪ್ಪಿಗಾಗಿ ತಮ್ಮ ಬೆಂಬಲಿಗರೊಂದಿಗೆ ಪೊಲೀಸ್ ಠಾಣೆಗೆ ಶರಣಾಗಲು ತೆರಳಿದ್ದರು. ಆದರೆ ಉಪಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಖಾನ್ ಸಿಂಗ್ ಭಾಟಿ ನೇತೃತ್ವದ ಪೊಲೀಸ್ ತಂಡ ಗುಂಡು ಹಾರಿಸಿತ್ತು. ಇದರ ಪರಿಣಾಮ ರಾಜಾ ಮಾನ್‌ಸಿಂಗ್ ಮತ್ತು ಇಬ್ಬರು ಬೆಂಬಲಿಗರು ಸ್ಥಳದಲ್ಲೇ ಮೃತಪಟ್ಟಿದ್ದರು.
ಪ್ರತಿಭಟನೆ ಉಗ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಮುಖ್ಯಮಂತ್ರಿ ಶಿವಚರಣ್ ಮಾಥುರ್ ರಾಜೀನಾಮೆ ನೀಡಿದ್ದರು. ಪ್ರಕರಣದ ತನಿಖೆಯನ್ನು ಉತ್ತರಪ್ರದೇಶದ ಮಥುರಾದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು.
ಘಟನೆ ನಡೆದು 35 ವರ್ಷಗಳ ಬಳಿಕ ಇದೀಗ ಮಥುರಾ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಶರಣಾಗಲು ಬಂದಿದ್ದ ರಾಜಾ ಮಾನ್‌ಸಿಂಗ್ ಹಾಗೂ ಅವರ ಬೆಂಬಲಿಗರನ್ನು ಗುಂಡು ಹಾರಿಸಿ ಕೊಂದ ಆರೋಪದ ಮೇಲೆ ಉಪ ಪೊಲೀಸ್ ವರಿಷ್ಠಾಧಿಕಾರಿ ಖನ್ ಸಿಂಗ್ ಭಾಟಿ ಸೇರಿದಂತೆ ಒಟ್ಟು 11 ಪೊಲೀಸರು ದೋಷಿ ಎಂದು ತೀರ್ಪು ನೀಡಿದೆ.
ಇನ್ನು ಸದ್ಯ ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನಲ್ಲಿ ಸಚಿನ್ ಪೈಲಟ್ ಅವರಿಗೆ ಬೆಂಬಲ ಘೋಷಿಸಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಾಸಕ ವಿಶ್ವೇಂದ್ರ ಸಿಂಗ್, ರಾಜಾ ಮಾನ್‌ಸಿಂಗ್ ಅವರ ಸಂಬಂಧಿ ಎಂಬುದು ಉಲ್ಲೇಖಾರ್ಹ.