ಕಾಶ್ಮೀರ ನಮ್ಮದು... ಯುದ್ಧಭೂಮಿಯಂತಾದ ಪಿಒಕೆ, ಪಾಕ್​ ಸೇನೆಯ ಗುಂಡೇಟಿಗೆ 12 ನಾಗರಿಕರ ಸಾವು! POK

POK
Published on

POK : ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಭದ್ರತಾ ಪಡೆಗಳು ಗುಂಡು ಹಾರಿಸಿದ ಪರಿಣಾಮ ಕನಿಷ್ಠ 12 ನಾಗರಿಕರು ಸಾವಿಗೀಡಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪಿಒಕೆಯಲ್ಲಿ ನಡೆದ ಅತಿದೊಡ್ಡ ಘರ್ಷಣೆಗಳಲ್ಲಿ ಇದು ಒಂದಾಗಿದೆ.

38 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಶುರುವಾಗಿರುವ ಈ ಪ್ರತಿಭಟನೆಗಳು, ಪಾಕ್​ ಸೇನೆಯ ಅತಿರೇಕದ ವರ್ತನೆಯ ವಿರುದ್ಧ ವ್ಯಾಪಕ ಆಂದೋಲನವಾಗಿ ಮಾರ್ಪಟ್ಟಿದೆ. ಇದರಿಂದ ಪಿಒಕೆ ಅಕ್ಷರಶಃ ಯುದ್ಧಭೂಮಿಯಾಗಿ ಬದಲಾಗಿದೆ.

ಪಿಒಕೆಯಲ್ಲಿ ನಡೆಯುತ್ತಿರುವ ಘರ್ಷಣೆ ಗುರುವಾರ (ಅ.02) ಮೂರನೇ ದಿನಕ್ಕೆ ಕಾಲಿಟ್ಟಿದೆ. ದಡಿಯಾಲ್‌ನಲ್ಲಿ ಪ್ರತಿಭಟನಾಕಾರರು ಸೇನೆಯೊಂದಿಗೆ ಸಂಘರ್ಷ ನಡೆಸಿದರು. ಇತ್ತ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸರ್ಕಾರವು ಪ್ರತಿಭಟನಾಕಾರರನ್ನು ಹತ್ತಿಕ್ಕಲು ಸಾವಿರಾರು ಹೆಚ್ಚುವರಿ ಸೈನಿಕರನ್ನು ಸ್ಥಳದಲ್ಲಿ ನಿಯೋಜಿಸಿದೆ. ಮುಜಫರಾಬಾದ್ ಹೊರತುಪಡಿಸಿ, ಹಿಂಸಾಚಾರವು ರಾವಲಕೋಟ್, ನೀಲಂ ಕಣಿವೆ ಮತ್ತು ಕೋಟ್ಲಿಗೂ ವ್ಯಾಪಿಸಿದೆ.

ವರದಿಗಳ ಪ್ರಕಾರ, ಮುಜಾಫರಾಬಾದ್‌ನಲ್ಲಿ ಐದು, ಧೀರ್‌ಕೋಟ್‌ನಲ್ಲಿ ಐದು ಮತ್ತು ದಡಿಯಾಲ್‌ನಲ್ಲಿ ಇಬ್ಬರು ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಕನಿಷ್ಠ ಮೂವರು ಪೊಲೀಸ್ ಸಿಬ್ಬಂದಿಯೂ ಈ ಘರ್ಷಣೆಯಲ್ಲಿ ಮೃತಪಟ್ಟಿದ್ದಾರೆ. ಇದಲ್ಲದೆ, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ, ಹೆಚ್ಚಿನವರಿಗೆ ಗುಂಡೇಟಿನಿಂದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಬೇಡಿಕೆಗಳೇನು?

ಜಮ್ಮು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ (ಎಎಸಿ) ನೇತೃತ್ವದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇದರಿಂದ ಪಿಒಕೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪಾಕಿಸ್ತಾನದಲ್ಲಿ ವಾಸಿಸುವ ಕಾಶ್ಮೀರಿ ನಿರಾಶ್ರಿತರಿಗೆ ಮೀಸಲಾಗಿರುವ ಪಿಒಕೆಯಲ್ಲಿನ 12 ವಿಧಾನಸಭಾ ಸ್ಥಾನಗಳನ್ನು ರದ್ದುಗೊಳಿಸುವ ಬೇಡಿಕೆಯು ಆಂದೋಲನದ ಮೂಲವಾಗಿದೆ. ಅಲ್ಲದೆ, ತೆರಿಗೆ ವಿನಾಯಿತಿ, ಹಿಟ್ಟು ಮತ್ತು ವಿದ್ಯುತ್ ಮೇಲಿನ ಸಬ್ಸಿಡಿಗಳು ಮತ್ತು ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸುವುದು ಕೂಡ ಇತರ ಬೇಡಿಕೆಗಳಾಗಿವೆ.

ಸೆಪ್ಟೆಂಬರ್ 29 ರಂದು ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಮಾರುಕಟ್ಟೆಗಳು, ಅಂಗಡಿಗಳು ಮತ್ತು ಸ್ಥಳೀಯ ವ್ಯವಹಾರಗಳು ಮುಚ್ಚಲ್ಪಟ್ಟಿವೆ. ಮೊಬೈಲ್, ಇಂಟರ್ನೆಟ್ ಮತ್ತು ಸ್ಥಿರ ದೂರವಾಣಿ ಸೇವೆಗಳನ್ನು ಸಹ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಮುಜಾಫರಾಬಾದ್‌ನಲ್ಲಿ ಸಾವಿರಾರು ಪ್ರತಿಭಟನಾಕಾರರು ಕಲ್ಲುಗಳನ್ನು ಎಸೆದು ಸೇತುವೆಗಳ ಮೇಲೆ ಇರಿಸಲಾಗಿದ್ದ ಕಂಟೈನರ್​ಗಳನ್ನು ನದಿಗೆ ಉರುಳಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಕಾಶ್ಮೀರ ನಮ್ಮದು

ಇತರ ಪಟ್ಟಣಗಳಲ್ಲಿ, ಬಿದಿ ಭದ್ರತೆಯ ಹೊರತಾಗಿಯೂ ಪ್ರತಿಭಟನಾಕಾರರು ಮೆರವಣಿಗೆಗಳನ್ನು ನಡೆಸಿದರು. ಸರ್ಕಾರದ ಆಡಳಿತಗಾರರೇ ಎಚ್ಚರದಿಂದಿರಿ... ನಾವು ನಿಮ್ಮ ನಾಶ ಮಾಡುತ್ತೇವೆ ಮತ್ತು ಕಾಶ್ಮೀರ ನಮ್ಮದು, ಅದರ ಭವಿಷ್ಯವನ್ನು ನಾವು ನಿರ್ಧರಿಸುತ್ತೇವೆ ಎಂಬ ಘೋಷಣೆಗಳು ಮೊಳಗಿವೆ. ಅಂದಹಾಗೆ, ಈ ಘೋಷಣೆಗಳು ತುಂಬಾ ಗಮನಾರ್ಹವಾಗಿವೆ. ಏಕೆಂದರೆ, ದಶಕಗಳಲ್ಲೇ ಪಿಒಕೆ ನಾಗರಿಕರು ನೇರವಾಗಿ ಪಾಕಿಸ್ತಾನಿ ಸರ್ಕಾರ ಮತ್ತು ಮಿಲಿಟರಿಯನ್ನು ಗುರಿಯಾಗಿಸಿಕೊಂಡಿರುವುದು ಬಹುಶಃ ಇದೇ ಮೊದಲಾಗಿದೆ. ಪಾಕ್​ ಸರ್ಕಾರದ ವಿರುದ್ಧ ಪಿಒಕೆ ಜನರೇ ದಂಗೆ ಏಳುತ್ತಿದ್ದಾರೆ.

ಸಂಧಾನ ಸಮಿತಿ

ಸದ್ಯದ ಪರಿಸ್ಥಿತಿ ಅಸ್ಥಿರವಾಗಿದ್ದು, ಈ ಬೆಳವಣಿಗೆಗಳ ನಡುವೆಯೂ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಸರ್ಕಾರವು ಸಮಸ್ಯೆಗಳನ್ನು ಪರಿಹರಿಸಲು ಮತ್ತು ಶಾಂತಿಯುತ ಪರಿಹಾರವನ್ನು ಕಂಡುಹಿಡಿಯಲು ಸಂಧಾನ ಸಮಿತಿಯನ್ನು ಸ್ಥಾಪಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಅಮೆರಿಕ ಭೇಟಿಯ ನಂತರ ಲಂಡನ್‌ನಲ್ಲಿ ರಜೆಯಲ್ಲಿರುವ ಷರೀಫ್, ಶಾಂತಿಗಾಗಿ ಮನವಿ ಮಾಡಿದ್ದು, ಪ್ರತಿಭಟನಾಕಾರರೊಂದಿಗೆ ಸಂಯಮ ಮತ್ತು ತಾಳ್ಮೆಯಿಂದ ವರ್ತಿಸುವಂತೆ ಭದ್ರತಾ ಪಡೆಗಳಿಗೆ ನಿರ್ದೇಶನ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಯುನೈಟೆಡ್ ಕಾಶ್ಮೀರ ಪೀಪಲ್ಸ್ ನ್ಯಾಷನಲ್ ಪಾರ್ಟಿ (ಯುಕೆಪಿಎನ್‌ಪಿ) ವಕ್ತಾರ ನಾಸಿರ್ ಅಜೀಜ್ ಖಾನ್ ಮಾತನಾಡಿದ್ದು, ತುರ್ತು ಹಸ್ತಕ್ಷೇಪಕ್ಕಾಗಿ ವಿಶ್ವಸಂಸ್ಥೆ (ಯುಎನ್) ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಜಿನೀವಾದಲ್ಲಿ ನಡೆದ ಯುಎನ್ ಮಾನವ ಹಕ್ಕುಗಳ ಮಂಡಳಿಯ 60ನೇ ಅಧಿವೇಶನದಲ್ಲಿ ಮಾತನಾಡಿದ ಖಾನ್, ಪಿಒಕೆಯಲ್ಲಿ ಮಾನವೀಯ ಬಿಕ್ಕಟ್ಟಿನ ಬಗ್ಗೆ ಎಚ್ಚರಿಸಿದ್ದಾರೆ ಮತ್ತು ಅಂತಾರಾಷ್ಟ್ರೀಯ ಒಪ್ಪಂದಗಳ ಅಡಿಯಲ್ಲಿ ಸದಸ್ಯ ರಾಷ್ಟ್ರಗಳು ತಮ್ಮ ಬಾಧ್ಯತೆಗಳನ್ನು ನೆನಪಿಸಿದ್ದಾರೆ.

ಅಂದಹಾಗೆ, ಕಳೆದ ವಾರ ಖೈಬರ್ ಪಖ್ತುನ್ಖ್ವಾದಲ್ಲಿ ನಡೆದ ದುರಂತದ ನಂತರ ಈ ಉಲ್ಬಣವು ಸಂಭವಿಸಿದೆ. ಖೈಬರ್ ಪಖ್ತುನ್ಖ್ವಾದಲ್ಲಿ ಪಾಕಿಸ್ತಾನ ವಾಯುಪಡೆಯ ವೈಮಾನಿಕ ದಾಳಿಯಲ್ಲಿ 30 ನಾಗರಿಕರು ಸಾವಿಗೀಡಾದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net