

ಬೆಂಗಳೂರು: ಪ್ರತಿಯೊಂದು ಜೀವಿಯು ಈ ಜಗತ್ತಿಗೆ ಜಲದ ರೂಪದಲ್ಲಿ ಬರುತ್ತವೆ. ಆ ಜಲತತ್ವದ ರಹಸ್ಯವನ್ನು ಬೋದಿಸುವ ಸೂತ್ರವೇ ವೃಷ್ಟಿಸೂತ್ರ ಎಂದು ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಿಳಿಸಿದ್ದಾರೆ.
ಬೆಂಗಳೂರಿನ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನದ ಆಶ್ರಯದಲ್ಲಿ ಧನುರ್ಮಾಸದ ಅಂಗವಾಗಿ ಹಮ್ಮಿಕೊಂಡಿರುವ ಮೂರನೇ ದಿನದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಜಗದ್ಗುರು ಪಂಚಾಚಾಚಾರ್ಯರು ಉಪದೇಶಿಸದ ಪಂಚಸೂತ್ರಗಳಲ್ಲಿ ಎರಡನೇಯದ್ದು ವೃಷ್ಟಿಸೂತ್ರ. ಜಗದ್ಗುರು ದಾರುಕಾಚಾರ್ಯರು ದಧೀಚಿ ಮುನಿಗೆ ಉಪದೇಶಿಸಿದ ಈ ಸೂತ್ರದಲ್ಲಿ ಜಗತ್ತಿನ ಜೀವರಾಶಿಗಳು ಹೇಗೆ ಬರುತ್ತವೆ ಎಂಬುದರ ರಹಸ್ಯ ಅಡಗಿದೆ.
ವೃಷ್ಟಿ ಎಂದರೆ ಮೇಘಗಳ ಹನಿ ಎಂದರ್ಥ. ಆಕಾಶದಲ್ಲಿರುವ ಜೀವರಾಶಿಗಳು ಭೂಮಿಗೆ ಬರುವುದೇ ಈ ಮೇಘಗಳಿಂದ. ಹಾಗೆ ಬಂದ ಜೀವಿಗಳ ವಿವಿಧ ರೂಪದಲ್ಲಿ ವಿವಿಧ ಯೋನಿಗಳಲ್ಲಿ ಪ್ರವೇಶ ಮಾಡಿ, ಪಿಂಡಸ್ವರೂಪವನ್ನು ಪಡೆದು ಜೀವಿಗಳಾಗಿ ಜನಿಸುತ್ತವೆ. ಸೃಷ್ಟಿ ಕಾರ್ಯದ ಈ ಅಪೂರ್ವ ರಹಸ್ಯವನ್ನು ಪ್ರಪ್ರಥಮವಾಗಿ ಬೋಧಿಸಿದ್ದು ವೃಷ್ಟಿಸೂತ್ರ ಎಂದು ಜಗದ್ಗುರುಗಳು ವಿವರಿಸಿದರು.
ಸಮಾರಂಭದ ಮೊದಲಿಗೆ ಲಿಂಗೈಕ್ಯರಾದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಸ್ಮರಣಾರ್ಹ ಮೌನಾಚರಣೆ ನಡೆಸಿ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಜಗದ್ಗುರುಗಳ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ವಿಭೂತಿಪುರ, ಶಿವಗಂಗೆ ಮಠದ ಶ್ರೀಗಳು ಹಾಗೂ ಬಿ.ಎಸ್.ಪರಮಶಿವಯ್ಯ, ಜಯಂತ ಕುಮಾರ್, ಚನ್ನಬಸವಾರಾಧ್ಯರು ಮತ್ತಿತರರು ಉಪಸ್ಥಿತರಿದ್ದರು.