

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಸರ್ವಸದಸ್ಯರ ಸಭೆಯಲ್ಲಿ ಅನುಮೋದಿಸಲ್ಪಟ್ಟಿದ್ದ ಪರಿಷತ್ತಿನ ತಿದ್ದುಪಡಿಗೊಂಡ ನಿಬಂಧನೆಗಳನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ. ಕನ್ನಡ ಓದಲು, ಬರೆಯುವವರಿಗೆ ಮಾತ್ರ ಸದಸ್ಯತ್ವ, 1000 ರೂ. ನಿಂದ 250 ರೂ.ಗೆ ಸದಸ್ಯತ್ವ ಶುಲ್ಕ ಇಳಿಕೆ, ಸ್ಮಾರ್ಟ್ ಕಾರ್ಡ್ ವಿತರಣೆ ಸೇರಿ 18 ತಿದ್ದುಪಡಿ ಅಂಶಗಳನ್ನು ಸೇರ್ಪಡೆಗೆ ಅನುಮೋದನೆ ಸಿಕ್ಕಿದೆ.
ಪರಿಷತ್ತಿನ ತಿದ್ದುಪಡಿಗೊಂಡ ನಿಬಂಧನೆಗಳನ್ನು ಸಹಕಾರ ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಅಂಗೀಕರಿಸಿ ನೋಂದಾಯಿಸಿದ್ದಾರೆ. ಈ ಅನುಮೋದನೆಯನ್ನು ಬೆಂಗಳೂರು ಮಹಾನಗರ ಸಿಟಿ ಸೆಷನ್ಸ್ ನ್ಯಾಯಾಲಯದ ಮೂಲ ದಾವೆಗೆ(ಓಎಸ್ 3029/2022) ನೀಡಿರುವ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್ ಜೋಶಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳನ್ನು ಆಯಾ ಕಾಲಘಟ್ಟಕ್ಕೆ ತಕ್ಕಂತೆ ಈವರೆಗೆ 6 ಬಾರಿ ತಿದ್ದುಪಡಿ ಮಾಡಲಾಗಿದೆ. ನಾನು ಅಧ್ಯಕ್ಷನಾಗಿ ಚುನಾಯಿತನಾದ ಬಳಿಕ 7ನೇ ಬಾರಿಗೆ ಕಾನೂನು ಚೌಕಟ್ಟಿನಲ್ಲಿ ಬದಲಾವಣೆ ತರಲಾಗಿದೆ. ಪ್ರಸ್ತುತ ಕಾಲಘಟ್ಟಕ್ಕೆ ಪರಿಷತ್ತಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅವಳಡಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಜೂ. 30ರಂದು ಅನುಮೋದನೆ: ಸಮಿತಿಯು ಆರು ಬಾರಿ ಸಭೆ ಸೇರಿ ಪ್ರಸ್ತುತ ಧ್ಯೇಯೋದ್ದೇಶಗಳನ್ನು ಹಾಗೂ ನಿಯಮ, ನಿಬಂಧನೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ರ್ಚಚಿಸಿ, ಸರ್ವಾನುಮತದಿಂದ ನಿರ್ಣಯ ಕೈಗೊಂಡು ತಿದ್ದುಪಡಿಗಳ ಕರಡನ್ನು ಸಿದ್ದಪಡಿಸಿ ಕೊಟ್ಟಿತ್ತು. ನಂತರ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಪ್ರತ್ಯೇಕ ಸಭೆಗಳಲ್ಲಿ ಕರಡನ್ನು ಪರಿಶೀಲಿಸಿ, ರ್ಚಚಿಸಿ, ಸಣ್ಣಪುಟ್ಟ ಬದಲಾವಣೆ ಮಾಡಿ ಮೇ 1ರಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆಯ ಶ್ರೀ ಕನಕ ಕಲಾಭವನದಲ್ಲಿ ಪರಿಷತ್ತಿನ ಸಕಲ ಸದಸ್ಯರ ವಿಶೇಷ ಸಭೆ ನಡೆಸಿ ಶೇ.99 ಸದಸ್ಯರು ಉದ್ದೇಶಿತ ತಿದ್ದುಪಡಿಗೆ ಅನುಮೋದನೆ ನೀಡಿದ್ದರು. ಈ ಎಲ್ಲ ಪ್ರಕ್ರಿಯೆಗಳ ನಂತರ ಸಹಕಾರ ಇಲಾಖೆಯು ಸರ್ವಸದಸ್ಯರು ಜೂ.30ರಂದು ಅನುಮೋದಿಸಿದ ಪರಿಷತ್ತಿನ ತಿದ್ದುಪಡಿಯನ್ನು ಅಂಗೀಕರಿಸಿ, ನೋಂದಾಯಿಸಿ ಕೊಟ್ಟಿದೆ ಎಂದು ಡಾ.ಮಹೇಶ್ ಜೋಶಿ ಮಾಹಿತಿ ನೀಡಿದರು.
ಆ್ಯಪ್ಗೆ ಸಿಎಂ ಚಾಲನೆ: ಸದಸ್ಯತ್ವ ಆನ್ಲೈನ್ ನೋಂದಣಿಗಾಗಿ ಆ್ಯಪ್ ಸಿದ್ಧಗೊಂಡಿದ್ದು, ಈ ಆ್ಯಪ್ ಮತ್ತು ಪರಿಷ್ಕೃತ ಜಾಲತಾಣ (ವೆಬ್ ಸೈಟ್)ಗೆ ಸಿಎಂ ಬಸವರಾಜ ಬೊಮ್ಮಾಯಿ ಸದ್ಯದಲ್ಲೇ ಚಾಲನೆ ನೀಡಲಿದ್ದಾರೆ.
ನ್ಯಾ.ಅರಳಿ ನಾಗರಾಜ್ ಅಧ್ಯಕ್ಷತೆಯ ಸಮಿತಿ: ನಿಬಂಧನೆಗಳ ತಿದ್ದುಪಡಿಗಾಗಿ ರಾಜ್ಯ ಹೈಕೋರ್ಟ್ ವಿಶ್ರಾಂತ ನ್ಯಾ.ಅರಳಿ ನಾಗರಾಜ್ ಅಧ್ಯಕ್ಷತೆಯಲ್ಲಿ 11 ಸದಸ್ಯರ ಸಮಿತಿ ರಚಿಸಿದ್ದು, ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ. ಶಿವಲಿಂಗೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಚುನಾವಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಕೇಂದ್ರ ವಿಶೇಷ ಚುನಾವಣಾಧಿಕಾರಿ ಎಸ್.ಟಿ. ಮೋಹನ್ರಾಜು, ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅಶ್ವತ್ಥಯ್ಯ, ಮಂಡ್ಯ ಜಿಲ್ಲಾ ಮಾಜಿ ಕ.ಸಾ.ಪ. ಅಧ್ಯಕ್ಷ ಡಾ. ಹೆಚ್.ಎಸ್. ಮುದ್ದೇಗೌಡ ಹಾಗೂ ಕ.ಸಾ.ಪ. ಗ್ರಂಥ ಭಂಡಾರ ಸಲಹಾ ಸಮಿತಿಯ ಮಾಜಿ ಸದಸ್ಯ ಪಂಪಯ್ಯ ಸ್ವಾಮಿ ಸಾಲಿಮಠ, ಕಾನೂನು ತಜ್ಞ ಸಿ.ವಿ. ಸುಧೀಂದ್ರ, ಸಹಕಾರಿ ತಜ್ಞ ಆರ್.ಪಿ. ರವಿಶಂಕರ್, ಕಾರ್ಯಕಾರಿ ಸಮಿತಿಯ ಪ್ರತಿನಿಧಿಗಳಾಗಿ ಧಾರವಾಡ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಮಂಡ್ಯ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ರವಿಕುಮಾರ ಚಾಮಲಾಪುರ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.