ಕರೂರು ಕಾಲ್ತುಳಿತ ದುರಂತ: ಟಿವಿಕೆ ಪಕ್ಷದ ನಾಯಕ, ನಟ ವಿಜಯ್​ ವಿರುದ್ಧ ಮದ್ರಾಸ್​ ಹೈಕೋರ್ಟ್​ ಆಕ್ರೋಶ! Karur Tragedy

Karur Tragedy
Published on

Karur Tragedy : ಕರೂರು ಕಾಲ್ತುಳಿತ ದುರಂತದ ವೇಳೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ನಿರ್ವಹಿಸಿದ ರೀತಿಗೆ ಮದ್ರಾಸ್ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಿಬಿಐ ತನಿಖೆ ನಡೆಸುವಂತೆ ಕೋರಿ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ತನಿಖೆ ಆರಂಭಿಕ ಹಂತದಲ್ಲಿರುವುದರಿಂದ ಅಂತಹ ಆದೇಶಗಳನ್ನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಆರಂಭಿಕ ಹಂತದಲ್ಲಿಯೇ ನೀವು ಸಿಬಿಐಗೆ ವರ್ಗಾವಣೆ ಕೇಳುವುದು ಹೇಗೆ? ನಡೆಯುತ್ತಿರುವ ತನಿಖೆಯಿಂದ ನೀವು ತೃಪ್ತರಾಗದಿದ್ದರೆ, ಆ ಬಳಿಕ ನೀವು ನ್ಯಾಯಾಲಯವನ್ನು ಸಂಪರ್ಕಿಸಿ ಎಂದು ಹೈಕೋರ್ಟ್​ ಹೇಳಿದೆ. ಪಕ್ಷ ಸಭೆ ನಡೆಸಿದಾಗ ನೀವು ಕುಡಿಯುವ ನೀರು ಮತ್ತು ಆಹಾರ ಸೌಲಭ್ಯಗಳನ್ನು ಏಕೆ ಒದಗಿಸಲು ಸಾಧ್ಯವಾಗಲಿಲ್ಲ? ದಯವಿಟ್ಟು ನ್ಯಾಯಾಲಯಗಳನ್ನು ರಾಜಕೀಯ ವೇದಿಕೆಗಳನ್ನಾಗಿ ಮಾಡಬೇಡಿ ಎಂದು ನ್ಯಾಯಾಲಯವು ತನ್ನ ಕೋಪವನ್ನು ವ್ಯಕ್ತಪಡಿಸಿ ಅರ್ಜಿಯನ್ನು ವಜಾಗೊಳಿಸಿತು.

ಮತ್ತೊಂದೆಡೆ, ರಾಜಕೀಯ ರ್ಯಾಲಿಗಳು ಮತ್ತು ಸಭೆಗಳಿಗೆ ಅನುಮತಿ ನೀಡುತ್ತಿರುವ ಬಗ್ಗೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರವನ್ನು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ವಕೀಲರು, ಸರ್ಕಾರ ಈ ನಿಟ್ಟಿನಲ್ಲಿ ಸರ್ವಪಕ್ಷ ಸಭೆ ನಡೆಸಿ ಸ್ಪಷ್ಟ ನಿಯಮಗಳನ್ನು ರೂಪಿಸಲಿದೆ ಮತ್ತು ಅಲ್ಲಿಯವರೆಗೆ ಯಾವುದೇ ರಾಜಕೀಯ ರ್ಯಾಲಿಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದರು.

ಅಲ್ಲದೆ, ರಸ್ತೆಯಲ್ಲಿ ಸಭೆ ನಡೆಸಲು ಹೇಗೆ ಅನುಮತಿ ನೀಡಲಾಗಿದೆ ಎಂದು ಹೈಕೋರ್ಟ್, ಪೊಲೀಸರನ್ನು ಪ್ರಶ್ನಿಸಿತು. ಈ ವೇಳೆ ಸರ್ಕಾರದ ವಕೀಲರು ವಿವರಣೆಗಾಗಿ ಸಮಯ ಕೇಳಿದರು ಮತ್ತು ಅದಕ್ಕೆ ನ್ಯಾಯಾಲಯ ಸಮ್ಮತಿಸಿತು. ಮತ್ತೊಂದೆಡೆ, ಸಂತ್ರಸ್ತರಿಗೆ ಪರಿಹಾರವನ್ನು ಹೆಚ್ಚಿಸುವ ಅರ್ಜಿಗೆ ಎರಡು ವಾರಗಳಲ್ಲಿ ಪ್ರತಿಕ್ರಿಯಿಸಲು ಕೋರ್ಟ್​ ಆದೇಶಗಳನ್ನು ಹೊರಡಿಸಿತು.

ಈ ದುರಂತದ ಹಿಂದೆ ಪಿತೂರಿ ಇದೆ ಎಂದು ಆರೋಪಿಸಿ ಟಿವಿಕೆ ಸ್ವತಂತ್ರ ತನಿಖೆ ಕೋರಿ ಅರ್ಜಿ ಸಲ್ಲಿಸಿದೆ. ತನ್ನ ಕಾರ್ಯದರ್ಶಿಗಳಿಗೆ ನಿರೀಕ್ಷಣಾ ಜಾಮೀನು ಕೋರಿ ಮತ್ತೊಂದು ಅರ್ಜಿಯನ್ನು ಸಹ ಸಲ್ಲಿಸಿದೆ. ಈ ಎರಡರ ಜೊತೆಗೆ, ಕರೂರಿನ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿ ಸೇರಿದಂತೆ ಒಟ್ಟು ಏಳು ಅರ್ಜಿಗಳನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net