

Pakistani players : ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ವಿಚಿತ್ರ ರೀತಿಯಲ್ಲಿ ಔಟ್ ಆಗುವುದನ್ನು ನಾವು ಆಗಾಗ ನೋಡುತ್ತಿರುತ್ತೇವೆ. ಅದೇ ರೀತಿ 2025ರ ಮಹಿಳಾ ಏಕದಿನ ವಿಶ್ವಕಪ್‌ನ ಭಾಗವಾಗಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನಿ ಆಟಗಾರ್ತಿ ನಶ್ರಾ ಸಂಧು ಹಿಟ್ ವಿಕೆಟ್ ಆಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.
ಗುರುವಾರ (ಅ.02) ಶ್ರೀಲಂಕಾ ರಾಜಧಾನಿ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿತು. ಬಾಂಗ್ಲಾದೇಶದ ಬೌಲರ್ ಶೋರ್ನಾ ಅಖ್ತರ್ ಅವರು ಇನ್ನಿಂಗ್ಸ್‌ನ 35ನೇ ಓವರ್ ಎಸೆದರು. ಈ ಓವರ್‌ನ ಎರಡನೇ ಚೆಂಡು ಪುಲ್ ಲೆಂಗ್ತ್ ಆಗಿತ್ತು. ನಶ್ರಾ ಸಂಧು ಈ ಚೆಂಡನ್ನು ಆಡಲು ಪ್ರಯತ್ನಿಸಿದರು. ಆದಾಗ್ಯೂ, ಕೊನೆಯ ಕ್ಷಣದಲ್ಲಿ ಶಾಟ್ ಆಡದಿರಲು ನಿರ್ಧರಿಸಿ, ತಮ್ಮ ಬ್ಯಾಟ್ ಅನ್ನು ಹಿಂದಕ್ಕೆ ತೆಗೆದುಕೊಂಡರು. ಈ ವೇಳೆ ಬ್ಯಾಟ್ ವಿಕೆಟ್‌ಗಳನ್ನು ಮುಟ್ಟುತ್ತಿದ್ದಂತೆ ಬೇಲ್ಸ್ ಕೆಳಗೆ ಬಿದ್ದಿತು. ಇದರೊಂದಿಗೆ, ನಶ್ರಾ ಸಂಧು ಹಿಟ್ ವಿಕೆಟ್ ಆಗಿ ಔಟಾದರು.
ಇನ್ನು ಪುರುಷರ ಕ್ರಿಕೆಟ್ ವಿಚಾರಕ್ಕೆ ಬಂದರೆ, ಪಾಕಿಸ್ತಾನಿ ಆಟಗಾರರಾದ ಮಿಸ್ಬಾ-ಉಲ್-ಹಕ್ ಮತ್ತು ಇಮಾಮ್-ಉಲ್-ಹಕ್ ಅವರು ಈ ಹಿಂದೆ ಇದೇ ರೀತಿಯಲ್ಲಿ ಔಟ್ ಆಗಿದ್ದಾರೆ. ಹೀಗಾಗಿ, ಈ ರೀತಿ ಔಟ್ ಆಗಲು ಪಾಕಿಸ್ತಾನ ಕ್ರಿಕೆಟಿಗರಿಂದ ಮಾತ್ರ ಸಾಧ್ಯ ಎಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 38.3 ಓವರ್‌ಗಳಲ್ಲಿ 129 ರನ್‌ಗಳಿಗೆ ಪತನಗೊಂಡಿತು. ಪಾಕಿಸ್ತಾನ ಪರ ರಾಮಿನ್ ಶಮಿ (23) ಮತ್ತು ನಾಯಕಿ ಫಾತಿಮಾ ಸನಾ (22) ಗರಿಷ್ಠ ಸೋರರ್ ಎನಿಸಿಕೊಂಡರು. ಉಳಿದವರು ದಯನೀಯವಾಗಿ ವಿಫಲರಾದರು ಮತ್ತು ಪಾಕಿಸ್ತಾನ ಕಡಿಮೆ ಸ್ಕೋರ್‌ಗೆ ಸೀಮಿತವಾಯಿತು. ಬಾಂಗ್ಲಾದೇಶ ಬೌಲರ್‌ಗಳಲ್ಲಿ, ಶೋರ್ನಾ ಅಖ್ತರ್ ಮೂರು ವಿಕೆಟ್‌ಗಳನ್ನು ಪಡೆದರೆ, ನಹಿದಾ ಅಖ್ತರ್ ಮತ್ತು ಮರುಫಾ ಅಖ್ತರ್ ತಲಾ ಎರಡು ವಿಕೆಟ್‌ಗಳನ್ನು ಪಡೆದರು.
ನಂತರ ಗುರಿ ಬೆನ್ನತ್ತಿದ ಬಾಂಗ್ಲಾ ಪರ ರುಬಿಯಾ ಹೈದರ್ (ಔಟಾಗದೆ 54 ರನ್, 77 ಎಸೆತ, 8 ಬೌಂಡರಿ) ಅಮೋಘ ಅರ್ಧಶತಕ ಗಳಿಸಿದರು. ರುಬಿಯಾ ಜೊತೆಗೆ ನಿಗರ್ ಸುಲ್ತಾನ (23) ಮತ್ತು ಶೋಭನಾ ಮೊಸ್ತಾರಿ (ಔಟಾಗದೆ 24 ರನ್) ಅದ್ಭುತ ರನ್ ಗಳಿಸಿದರು. ಇದರ ಪರಿಣಾಮವಾಗಿ ಬಾಂಗ್ಲಾದೇಶ 31.1 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 130 ರನ್‌ಗಳ ಗುರಿಯನ್ನು ತಲುಪಿ, ಭರ್ಜರಿ ಗೆಲುವು ದಾಖಲಿಸಿತು. (ಏಜೆನ್ಸೀಸ್)