

Zodiac Signs : ಎಲ್ಲರು ಎಲ್ಲರಿಗೂ ಇಷ್ಟವಾಗುವುದಿಲ್ಲ ಎಂಬುದು ಜಾಗತಿಕ ಸತ್ಯ. ಪ್ರತಿಯೊಬ್ಬರಿಗೂ ಶತ್ರುಗಳು ಇರುವುದು ಸಾಮಾನ್ಯ. ಅದರಲ್ಲೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶತ್ರುಗಳ ಸಂಖ್ಯೆ ಅಧಿಕವಾಗಿಯೇ ಇರುತ್ತದೆ. ವೈಮನಸ್ಸುಗಳು, ಸೋಲು-ಗೆಲುವಿನ ವೈರುಧ್ಯ, ಭಿನ್ನಾಭಿಪ್ರಾಯಗಳು ಹಾಗೂ ಜಗಳಗಳು ಮುಂತಾದವು ಶತ್ರುತ್ವಕ್ಕೆ ದಾರಿ ಮಾಡಿಕೊಡುತ್ತವೆ. ಆದರೆ, ಇದೇ ಶತ್ರುತ್ವ ಕೆಲವೊಮ್ಮೆ ಪ್ರಾಣವನ್ನೂ ಕಸಿದುಕೊಂಡುಬಿಡುತ್ತದೆ.
ಅಂದಹಾಗೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲ ರಾಶಿಗಳಿಗಿಂತ ಕೆಲವು ರಾಶಿ ಚಿಹ್ನೆಗಳಲ್ಲಿ ಜನಿಸಿದ ಜನರಿಗೆ ಹೆಚ್ಚಿನ ಶತ್ರುಗಳು ಇರುತ್ತಾರಂತೆ. ಇದು ಅವರ ಗುಣಗಳು ಮತ್ತು ಸಂದರ್ಭಗಳಿಂದ ಸೃಷ್ಟಿಯಾಗಿರಬಹುದು. ಇದರೊಂದಿಗೆ ಮಾತಿನ ವಿವಾದಗಳು ಅಥವಾ ಬೆಳವಣಿಗೆಯೂ ಸೇರಿರಬಹುದು.
ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ತಮ್ಮ ಪ್ರಾಮಾಣಿಕ ಮಾತು ಮತ್ತು ಧೈರ್ಯಶಾಲಿ ನಡೆಯಿಂದಾಗಿಯೇ ಹೆಚ್ಚಿನ ಶತ್ರುಗಳನ್ನು ತಮ್ಮ ಜೀವನದಲ್ಲಿ ಹೊಂದಿರುತ್ತಾರಂತೆ. ಹಾಗಾದರೆ, ಆ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಮಿಥುನ ರಾಶಿಯಲ್ಲಿ ಜನಿಸಿದ ಜನರು ಬಹಳ ಬುದ್ಧಿವಂತರು. ಅವರು ಎರಡು ಮನಸ್ಸುಗಳನ್ನು ಹೊಂದಿರುತ್ತಾರೆ. ಅಲ್ಲದೆ, ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಅವರು ಕೆಲವೊಮ್ಮೆ ಶತ್ರುಗಳನ್ನು ಬೆಳೆಸಿಕೊಳ್ಳುತ್ತಾರೆ. ಅದಕ್ಕೆ ಕಾರಣ ಅವರ ಭಯವಿಲ್ಲದ ನಡೆ. ಮನಸ್ಸಿಗೆ ಏನೇ ಅನಿಸಿದರು ನೇರವಾಗಿ, ಮುಖಕ್ಕೆ ಹೊಡದಂತೆ ಹೇಳಿಬಿಡುತ್ತಾರೆ. ಆದರೂ, ಸಮಯ ಕಳೆದಂತೆ ಅವರು ತಮ್ಮ ಅಭಿಪ್ರಾಯಗಳನ್ನು ಬದಲಾಯಿಸುತ್ತಾರೆ. ಈ ನಿಲುವಿನಿಂದ ಅವರಿಗೆ ಸ್ವಾಭಾವಿಕವಾಗಿ ಹೆಚ್ಚಿನ ಶತ್ರುಗಳೂ ಇರುತ್ತಾರೆ.
ಸಿಂಹ ರಾಶಿಯಲ್ಲಿ ಜನಿಸಿದ ಜನರು ತುಂಬಾ ಆತ್ಮವಿಶ್ವಾಸ ಹೊಂದಿರುತ್ತಾರೆ. ಅವರು ಗಾಂಭೀರ್ಯದಿಂದ ಕೂಡಿರುತ್ತಾರೆ ಮತ್ತು ತಮ್ಮ ಆಸೆಗಳಿಗಾಗಿ ಯಾವುದೇ ಹಂತಕ್ಕೂ ಹೋಗುತ್ತಾರೆ. ಈ ಅಭ್ಯಾಸವು ಇತರರನ್ನು ಕೆರಳಿಸಬಹುದು. ಅವರು ತಮ್ಮ ಅಭಿಪ್ರಾಯಗಳನ್ನು ದೃಢವಾಗಿ ವ್ಯಕ್ತಪಡಿಸುವುದರಿಂದ ಅವರಿಗೆ ಅನೇಕ ಶತ್ರುಗಳಿರುತ್ತಾರೆ. ಅವರಿಗೆ ನಾಯಕತ್ವದ ಗುಣಗಳಿರುತ್ತವೆ. ಅಸೂಯೆಯಿಂದಾಗಿ ಅವರಿಗೆ ಅನೇಕ ಶತ್ರುಗಳಿರುತ್ತಾರೆ.
ವೃಶ್ಚಿಕ ರಾಶಿಯಲ್ಲಿ ಜನಿಸಿದ ಜನರು ಭಾವನಾತ್ಮಕರು. ಅವರು ಆಳವಾದ ಆಲೋಚನೆಗಳನ್ನು ಹೊಂದಿರುತ್ತಾರೆ ಮತ್ತು ಇತರರ ಭಾವನೆಗಳಿಗೆ ಒಳಪಟ್ಟಿರುತ್ತಾರೆ. ಈ ಅಭ್ಯಾಸವು ಕೆಲವರಿಗೆ ಬೆದರಿಕೆಯೊಡ್ಡಬಹುದು. ತಪ್ಪು ತಿಳುವಳಿಕೆ ಮತ್ತು ಸಂಘರ್ಷಗಳಿಂದಾಗಿ, ಅನೇಕ ಶತ್ರುಗಳು ಇರುತ್ತಾರೆ. ಅವರು ಬಲವಾದ ಮಾನಸಿಕ ಸ್ಥಿತಿಯನ್ನು ಹೊಂದಿರುತ್ತಾರೆ ಮತ್ತು ಸೇಡು ತೀರಿಸಿಕೊಳ್ಳುವ ಸ್ವಭಾವದವರಾಗಿದ್ದಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.