

ಬೆಂಗಳೂರು/ ಶಿವಮೊಗ್ಗ: ಬಿಸಿಲ ಪ್ರಖರತೆ ಹೆಚ್ಚಳದಿಂದಾಗಿ ಕರ್ನಾಟಕ ದಿನೇ ದಿನೆ ಕುದಿಯಲಾರಂಭಿಸಿದೆ. ಉತ್ತರ ಕರ್ನಾಟಕ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನ ವಾಡಿಕೆಗಿಂತ 2-4 ಡಿ.ಸೆ.ಉಷ್ಣಾಂಶ ಏರಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ರಾಜ್ಯದ ಶೇ. 75 ಭೌಗೋಳಿಕ ಪ್ರದೇಶಗಳಲ್ಲಿ 38 ಡಿ.ಸೆ.ನಿಂದ 42.8 ಡಿ.ಸೆ. ವರೆಗೆ ಉಷ್ಣಾಂಶ ದಾಖಲಾಗುತ್ತಿದೆ. ಇದರಿಂದ ಬಿಸಿಗಾಳಿ ಹೆಚ್ಚಾಗಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ತೀವ್ರಗೊಂಡಿದೆ. ಬೀದರ್, ಕಲಬುರಗಿ, ವಿಜಯಪುರ, ಬಳ್ಳಾರಿ, ಕೊಪ್ಪಳ,ಯಾದಗಿರಿ, ರಾಯಚೂರಿನಲ್ಲಿ ಪ್ರಸ್ತುತ 40-42 ಡಿ.ಸೆ. ತಾಪಮಾನ ವರದಿಯಾಗುತ್ತಿದೆ. ಈ ಎಲ್ಲ ಜಿಲ್ಲೆಗಳಲ್ಲಿ ಮಾ.19ರಿಂದ ಮಾ.21 ರವರೆಗೆ ಉಷ್ಣಅಲೆ (ಹೀಟ್ವೇವ್) ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ದಾವಣಗೆರೆ, ಮಂಡ್ಯ, ಚಿಂತಾಮಣಿ, 35-37 ಡಿ.ಸೆ. ದಾಖಲಾಗುತ್ತಿದೆ. ದಕ್ಷಿಣ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳ ಗರಿಷ್ಠ ತಾಪಮಾನದಲ್ಲಿ ಮುಂದಿನ 5 ದಿನ 2-3 ಡಿ.ಸೆ. ಉಷ್ಣಾಂಶ ಹೆಚ್ಚಳವಾಗಲಿದೆ. ಕರಾವಳಿ ಕರ್ನಾಟಕ ಭಾಗದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ. ರಾಜ್ಯದ ಹಲವು ಭಾಗಗಳಲ್ಲಿ ಪ್ರತಿ ಗಂಟೆಗೆ 30-40 ಕಿ.ಮೀ ಬಿರುಗಾಳಿ ಬೀಸುವ ಸಾಧ್ಯತೆ ಇದೆ.
ಜಾಗತಿಕ ತಾಪಮಾನ ಏರಿಕೆ, ತೇವಾಂಶ ಕೊರತೆ, ಶುಭ್ರ ಆಕಾಶ, ಒಣಗಾಳಿ ಬೀಸುವುದೂ ಸೇರಿ ವಿವಿಧ ಕಾರಣಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳ ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 3-4 ಡಿ. ಸೆ. ಉಷ್ಣಾಂಶ ಹೆಚ್ಚಳವಾಗಿದೆ. ಈ ಬಾರಿ ವಾಡಿಕೆಗಿಂತ ಮುನ್ನವೇ ಬೇಸಿಗೆ ಶುರುವಾಗಿದೆ. ಏಪ್ರಿಲ್ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ನಲ್ಲಿಯೇ ಅಧಿಕವಾಗಿದೆ.
ಕೇಂದ್ರ ಆರೋಗ್ಯ ಇಲಾಖೆ ಸೂಚನೆ ಮೇರೆಗೆ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಂದ ಹೀಟ್ ಸ್ಟ್ರೋಕ್ಗೆ ಸಂಬಂಧಿಸಿ ಪ್ರತಿದಿನ ದಾಖಲಾಗುತ್ತಿರುವ ಪ್ರಕರಣಗಳ ಮಾಹಿತಿಯನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹೀಟ್ಸ್ಟ್ರೋಕ್ ಅನಾರೋಗ್ಯದಿಂದ ದಾಖಲಾಗುವ ರೋಗಿಗಳ ಮಾಹಿತಿ ಮತ್ತು ಮೃತಪಟ್ಟಿದ್ದರೆ ಆ ಮಾಹಿತಿಯನ್ನೂ ಎನ್ಪಿಸಿಸಿಎಚ್ಎಚ್ (ರಾಷ್ಟ್ರೀಯ ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ಕಾರ್ಯಕ್ರಮ) ಅಡಿ ಸಂಗ್ರಹಿಸಲಾಗುತ್ತಿದೆ.
ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಬೀಳುವ ಆಗುಂಬೆಯಲ್ಲೂ ಈ ಬಾರಿ ಗರಿಷ್ಠ ತಾಪಮಾನ ದಾಖಲಾಗಿದೆ. ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ತೀರ್ಥಹಳ್ಳಿ ತಾಲೂಕಿನ ಆಗುಂಬೆಯೂ ಒಂದು. ಹಾಗಾಗಿ ಆಗುಂಬೆಯನ್ನು ದಕ್ಷಿಣದ ಚಿರಾಪುಂಜಿ ಎನ್ನಲಾಗುತ್ತದೆ. ಪಶ್ಚಿಮ ಘಟ್ಟದ ಸಹ್ಯಾದ್ರಿ ತಪ್ಪಲಿನಲ್ಲಿರುವ ಆಗುಂಬೆ ಸದಾ ಹಸಿರಿನಿಂದ ಕೂಡಿರುತ್ತದೆ. ಆದರೆ ಇಂತಹ ಸ್ಥಳದಲ್ಲೂ ಈಗಾಗಲೇ ಗರಿಷ್ಠ ತಾಪಮಾನ 36 ಡಿ. ಸೆ. ದಾಖಲಾಗಿದೆ.
ದಿನದಿಂದ ದಿನಕ್ಕೆ ಬಿಸಿಲಿನ ಝುಳ ಹೆಚ್ಚುತ್ತಿರುವುರಿಂದ ಹಗಲಿನ ವೇಳೆ ಸಾರ್ವಜನಿಕರು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು, ಬಾಯಾರಿಕೆ ಇಲ್ಲದಿದ್ದರೂ ಯಥೆಚ್ಛವಾಗಿ ನೀರು ಕುಡಿಯಬೇಕು. ರೈತರು ಟೋಪಿ ಅಥವಾ ಛತ್ರಿ ಬಳಸಬೇಕು, ತಲೆ, ಕುತ್ತಿಗೆ, ಮುಖ, ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆ ಬಳಸಬೇಕು. ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ, ಕುಡಿಯಲು ಸಾಕಷ್ಟು ನೀರು ನೀಡಬೇಕು, ಮಧ್ಯಾಹ್ನ 12ರಿಂದ ಸಂಜೆ 4 ಗಂಟೆವರೆಗೆ ಕಠಿಣ ಚಟುವಟಿಕೆಗಳನ್ನು ಕ್ರೀಡಾಪಟುಗಳು ನಡೆಸಬಾರದು ಮತ್ತು ಹೊರಗೆ ಕೆಲಸ ಮಾಡುವುದನ್ನು ತಪ್ಪಿಸಬೇಕು. ಪ್ರಯಾಣ ಮಾಡುವ ವೇಳೆ ನೀರು, ಜ್ಯೂಸ್, ಮಜ್ಜಿಗೆ ಕೊಂಡೊಯ್ಯಬೇಕೆಂದು ಇಲಾಖೆ ಸಲಹೆ ಕೊಟ್ಟಿದೆ.
ರಾಜ್ಯದಲ್ಲಿ ತಾಪಮಾನ ಹೆಚ್ಚಳವಾದಂತೆ ಮುಂಗಾರು ಪೂರ್ವ ಮಳೆಯೂ ಸುರಿಯಲಿದೆ. ಬೇಸಿಗೆ ಅವಧಿಯಲ್ಲಿ ಈ ಬಾರಿ ವಾಡಿಕೆಗಿಂತ ಅಧಿಕ ವರ್ಷಧಾರೆಯಾಗಲಿದೆ. ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿಯೂ ಉಷ್ಣಾಂಶ ಹೆಚ್ಚಳವಾಗುತ್ತಿದೆ. | ಸಿ.ಎಸ್. ಪಾಟೀಲ್ ಹವಾಮಾನ ಇಲಾಖೆ ನಿರ್ದೇಶಕ.