

ಬೆಂಗಳೂರು: ರಾಜ್ಯದ ಕರಾವಳಿ ಭಾಗಕ್ಕೆ ವಾಡಿಕೆಗಿಂತ ತಡವಾಗಿ ಪ್ರವೇಶಿಸಿರುವ ನೈಋತ್ಯ ಮಾನ್ಸೂನ್ ಕ್ಷೀಣವಾಗಿದೆ.
ಬಿಪರ್‌ಜಾಯ್ ಚಂಡಮಾರುತವು ತೇವಾಂಶ ಭರಿತ ಮೋಡಗಳನ್ನು ಸೆಳೆದುಕೊಂಡ ಪರಿಣಾಮ ಮಾರುತಗಳ ದುರ್ಬಲಗೊಂಡಿದ್ದು, ರಾಜ್ಯಾದ್ಯಂತ ವ್ಯಾಪಿಸಲು ವಿಳಂಬವಾಗಲಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಾಗಿದೆ. ಮಾನ್ಸೂನ್ ಪ್ರಬಲವಾದರೆ ಕರಾವಳಿ,ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಭಾರೀ ಮಳೆ ಬರಬೇಕಿತ್ತು. ಆದರೆ, ಈ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುವ ಬದಲು ಈಗ ಸಾಧಾರಣವಾಗಿ ಸುರಿಯುತ್ತಿದೆ. ಮುಂಗಾರು ಚುರುಕುಗೊಳ್ಳಲು ತುಸು ಸಮಯಬೇಕಿದೆ. ಇದರಿಂದಾಗಿ ಮಳೆ ಕುಂಠಿತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೂರ್ನಾಲ್ಕು ವರ್ಷಗಳಿಂದ ಮಳೆ ದಿನಗಳು ಬದಲಾಗುತ್ತಿರುವ ಕಾರಣ 2020 ಮತ್ತು 2022ರ ಜೂನ್‌ನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿದೆ. 2021ರ ಜೂನ್‌ನಲ್ಲಿ ಮಾತ್ರ ವಾಡಿಕೆಯಷ್ಟೇ ಮಳೆ ಸುರಿದಿದೆ. ಆದರೆ, ಮೂರು ವರ್ಷಗಳಿಂದ ಕರಾವಳಿ,ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕುಂಠಿತವಾಗುತ್ತಿದೆ. ಹೀಗಾಗಿ, ಆ ಭಾಗದ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ತುಸು ಹೆಚ್ಚು ಮಳೆ ಸುರಿದಿದ್ದರೂ ಸರಿಯಾಗಿ ಸಮಯಕ್ಕೆ ಮಳೆ ಬರುತ್ತಿಲ್ಲ. ದಿನದಲ್ಲಿ ಬೀಳುವ ಮಳೆ ಗಂಟೆಗೆ, ವಾರಕ್ಕೆ ಬೀಳುವ ಮಳೆ ದಿನಕ್ಕೆ, ತಿಂಗಳಲ್ಲಿ ಬೀಳುವ ಮಳೆ ವಾರದಲ್ಲಿ ಬೀಳುವಂತಾಗಿದೆ. ಇದಕ್ಕೆ ಹವಾಮಾನ ವೈಪರಿತ್ಯವೇ ಪ್ರಮುಖ ಕಾರಣವಾಗಿದೆ.
ಸೋಮವಾರ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಹಗುರದಿಂದ ಕೂಡಿದ ಸಾಧಾರಣ ಮಳೆ ಸುರಿದಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಹಾಸನ, ಬೆಂಗಳೂರು, ಬೆಂ.ಗ್ರಾಮಾಂತರ, ಕೋಲಾರ, ಮಂಡ್ಯ, ಮೈಸೂರು, ತುಮಕೂರು, ವಿಜಯನಗರ, ಬಳ್ಳಾರಿ, ಚಾಮರಾಜನಗರ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಸಾಧಾರಣ ಮಳೆ ಸುರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.