

ಮುಂಬೈ: ಪ್ರಧಾನಿ ಮೋದಿ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ಧಾರೆ ಎನ್ನಲಾದ ಪ್ರಕರಣಕ್ಕೆ ಸಂಬಂದಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಾಂಬೆ ಹೈಕೋರ್ಟ್ ರಿಲೀಫ್ ನೀಡಿದೆ. ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದಕ್ಕೆ ನೀಡಿದ್ದ ವಿನಾಯ್ತಿಯನ್ನು ಕೋರ್ಟ್ ಆಗಸ್ಟ್ 2ರವರೆಗೂ ವಿಸ್ತರಿಸಿ ಆದೇಶ ಹೊರಡಿಸಿದೆ.
ಬಿಜೆಪಿ ಮುಖಂಡ ಮಹೇಶ್ ಶ್ರೀಮಲ್ ಎಂಬುವವರು ರಫೇಲ್ ಯುದ್ದ ವಿಮಾನ ಖರೀದಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕೋರ್ಟಿನಲ್ಲಿ ದಾವೆ ಹೂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ 2021ರಲ್ಲಿ ಸ್ಥಳೀಯ ನ್ಯಾಯಾಲಯ ನೀಡಿದ್ದ, ಸಮನ್ಸ್ ಪ್ರಶ್ನಿಸಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿ ಕೊತ್ವಾಲ್ ಅವರಿದ್ದ ಏಕಸದಸ್ಯ ಪೀಠವು ಪ್ರಕರಣವನ್ನು ಮುಂದೂಡಿದೆ. ಅರ್ಜಿದಾರರ ಪರ ವಕೀಲರು ಸಮಯಾವಕಾಶ ಕೇಳಿದ ಕಾರಣ ವಿಚಾರಣೆಯನ್ನು ಮುಂದೂಡಲಾಗಿದೆ.
2021ರಲ್ಲಿ ರಾಹುಲ್ ಗಾಂಧಿಗೆ ಖುದ್ದು ಹಾಜರಾಗುವಂತೆ ಸ್ಥಳೀಯ ನ್ಯಾಯಾಲಯವು ನೋಟಿಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆಯನ್ನು ಮುಂದುಡೂವ ವೇಳೆ ರಾಹುಲ್ ಗಾಂಧಿ ಖುದ್ದು ಹಾಜರಾಗುವ ಅಗತ್ಯವಿಲ್ಲ ಎಂದು ಸ್ಥಳೀಯ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
2018ರ ಸೆಪ್ಟೆಂಬರ್ನಲ್ಲಿ ರಾಜಸ್ಥಾನದಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡುವ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದರೂ ಎಂದು ಆರೋಪಿಸಿ ದೂರುದಾರರು ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.