ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಗಾಳಿಸುದ್ದಿ: ಎಚ್​.ಡಿ. ಕುಮಾರಸ್ವಾಮಿ

HDK
Published on

ಚನ್ನಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಚರ್ಚೆ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಇದೆಲ್ಲಾ ಗಾಳಿ ಸುದ್ದಿ, ಆ ರೀತಿಯ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಚನ್ನಪಟ್ಟಣದಲ್ಲಿ ಸೋಮವಾರ ಈ ಕುರಿತು ಮಾತನಾಡಿದ ಎಚ್​ಡಿಕೆ ಈ ವಿಚಾರವನ್ನು ನನ್ನ ಬಳಿ ಯಾರೂ ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದ್ದಾರೆ.

ಊಹಾಪೋಹ ಮಾಮೂಲಿ

ರಾಜಕಾರಣದಲ್ಲಿ ಊಹಾಪೋಹ ಮಾಮೂಲಿ, ಈ ವಿಚಾರವನ್ನು ನನ್ನ ಮುಂದೆ ಯಾರೂ ಪ್ರಸ್ತಾಪ ಮಾಡಿಲ್ಲ. ಲೋಕಸಭಾ ಚುನಾವಣೆ ಬಗ್ಗೆ ನಾನು ಜಿಲ್ಲಾವಾರು ಸಭೆ ನಡೆಸಿ. ಗೆದ್ದ ಸೋತ ಅಭ್ಯರ್ಥಿಗಳ ಜತೆ ಮಾತನಾಡಿದ್ದೇನೆ. ಯಾವ ರೀತಿ ಚುನಾವಣೆ ಎದುರಿಸಬೇಕು ಎಂಬುದರ ಕುರಿತು ರೂಪುರೇಷೆ ಸಿದ್ಧ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

HDK

ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಸುದ್ದಿಯನ್ನು ಅಲ್ಲಗಳೆದಿರುವ ಎಚ್​ಡಿಕೆ ಕಳೆದ ಬಾರಿಯೂ ನನಗೆ ಚುನಾವಣೆ ಎದುರಿಸುವ ಆಸಕ್ತಿ ಇರಲಿಲ್ಲ. ಆದರೆ, ಕಾರ್ಯಕರ್ತರ ಒತ್ತಾಸೆಯಿಂದ ರಾಜಕಾರಣದಲ್ಲಿದ್ದೇನೆ. ನಂದುಬಿಡಿ, ಹಾಲಿ ಸಂಸದರ ಕಥೆಯೇ ಕೇಳಿ. ಭ್ರಷ್ಟಾಚಾರದ ಮಧ್ಯೆ ಚುನಾವಣೆ ಬೇಡ ಅಂತಿದ್ದಾರೆ. ಅಂತವರೇ ಚುನಾವಣೆ ಬೇಡ ಅಂತ ಹೇಳ್ತಿರುವಾಗ ನಮ್ದೆಲ್ಲ ಯಾವ ಲೆಕ್ಕ ಎಂದು ಸಂಸದ ಡಿ.ಕೆ. ಸುರೇಶ್​ಗೆ ಟಾಂಗ್​ ಕೊಟ್ಟಿದ್ದಾರೆ.

ಹೇಗೆ ತಲುಪಿಸುತ್ತಾರೆ

ಶಕ್ತಿ ಯೋಜನೆಗೆ ಭಾನುವಾರ ಚಾಲನೆ ನೀಡಿದ ಕುರಿತಾಗಿ ಪ್ರತಿಕ್ರಿಯಿಸಿ ಸರ್ಕಾರದ ಐದು ಗ್ಯಾರಂಟಿ ಯೋಜನೆ ಬಗ್ಗೆ ಚರ್ಚೆ ಮಾಡಲು ಇನ್ನೂ ಸಮಯ ಇದೆ. ಕೊಟ್ಟ ಮಾತನ್ನು ಉಳಿಸಿಕೊಳ್ತಿವಿ ಅಂತಿದ್ದಾರೆ. ಅದರೆ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಹೇಗೆ ತಲುಪಿಸುತ್ತಾರೆ ಅನ್ನೋದು ಮುಖ್ಯ.

ಈಗಾಗಲೇ ಬಾಡಿಗೆದಾರರಿಗೆ ಉಚಿತ ವಿದ್ಯುತ್ ಇಲ್ಲ ಅಂತಿದ್ದರು. ಆಮೇಲೆ ಕೊಡ್ತೀವಿ ಅಂದ್ರು, ಈಗ ಮನೆ ಮಾಲೀಕರು ಬಾಡಿಗೆದಾರರ ಜತೆ ಅಗ್ರಿಮೆಂಟ್ ಮಾಡಿಕೊಳ್ಳುತ್ತಿಲ್ಲ. ನಾನಾ ಸಮಸ್ಯೆಗಳು ಉದ್ಭವ ಆಗ್ತಿವೆ. ಘೋಷಣೆ ಮಾಡಿದಾಗ ನನಗೂ ಫ್ರೀ, ನಿನಗೂ ಫ್ರೀ ಅಂದರು. ಈಗ ಅದನ್ನೆಲ್ಲ ಯಾವ ರೀತಿ ನಿಬಾಯಿಸುತ್ತಾರೆ ನೋಡಬೇಕು ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net