

ಮುಂಬೈ: ಮದುವೆಯಾದ ವಾರದೊಳಗೆ ಗಂಡನ ಮನೆಯಿಂದ ಹಣ, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ವಧುವಿನ ಸಹಚರರನನ್ನು ಪ್ರಕರಣ ದಾಖಲಾದ ಒಂದು ವರ್ಷದ ನಂತರ ಮುಂಬೈನ ಮಲಾಡ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಮಲೇಶ್ ಕದಂ ಎಂದು ಗುರುತಿಸಲಾಗಿದ್ದು, ಪ್ರಕರಣದ ಮತ್ತೋರ್ವ ಆರೋಪಿಗಳಾದ ಆಶಾ ಗಾಯಕ್ವಾಡ್, ಮನೀಶಾ ಕಶ್ಯಪ್ ತಲೆಮಾರಿಸಿಕೊಂಡಿದ್ದು ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ಧಾರೆ.
ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಮಲಾಡ್ ಠಾಣೆಯ ಪೊಲೀಸ್ ಅಧಿಕಾರಿ ಒಬ್ಬರು 28 ವರ್ಷದ ಸಂತ್ರಸ್ತನಿಗೆ ಮಾತನಾಡುವ ವೇಳೆ ತೊದಲುತ್ತಿದ್ದ ಕಾರಣ ಆತನಿಗೆ ಹೆಣ್ಣು ಕೊಡಲು ಯಾರು ಮುಂದೆ ಬಂದಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಬಂಧಿತ ಆರೋಪಿ ಕಮಲೇಶ್ ತಾನು ಮದುವೆ ಬ್ರೋಕರ್ ಎಂದು ಹೇಳಿಕೊಂಡು ಮೊದಲಿಗೆ ತನ್ನನ್ನು ತಾನು ಪರಿಚಯಿಸಿಕೊಂಡಿದ್ದಾನೆ.
ಬಳಿಕ ಸಂತ್ರಸ್ತನನ್ನು ಈ ಮೊದಲೇ ಮದುವೆಯಾಗಿ ಎರಡು ಮಕ್ಕಳ ತಾಯಿ ಆಶಾ ಗಾಯಕ್ವಾಡ್ ಎಂಬ ಮಹಿಳೆಗೆ ಪರಿಚಯಿಸಿದ್ದಾನೆ. ಬಳಿಕ ಆತನನ್ನು ಪುಸಲಾಯಿಸಿ ಮಹಿಳೆಯೊಂದಿಗೆ ಮದುವೆ ಮಾಡಿಸಿದ್ದಾನೆ. ವಿವಾಹವಾದ ಬಳಿಕ ಆರೋಪಿಗಳು ಸಂಚು ರೂಪಿಸಿ ಹುಡುಗನ ಮನೆಯಿಂದ ಹಣ, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.
ಕೂಡಲ್ಲೇ ಎಚ್ಚೆತ್ತ ಯುವಕನ ತಂದೆ ಆರೋಪಿಗಳ ವಿರುದ್ಧ ಮಲಾಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಣ ದೋಚಿ ಪರಾರಿಯಾದ ಬಳಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ ವಧು ಆಶಾ ಸಂತ್ರಸ್ತನಿಗೆ ಕರೆ ಮಾಡಿ ಮಕ್ಕಳಿಗೆ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ದಾಖಲಿಸಬೇಕಾಗಿದೆ ಎಂದು ಹಣ ಕೇಳಿದ್ದಳು.
ಆರೋಪಿಯ ಜಾಡು ಹಿಡಿದು ಸಾಗಿದ ಪೊಲೀಸರ ಬಲೆಗೆ ಕಮಲೇಶ್ ಸಿಕ್ಕಿಬಿದ್ದಿದ್ದು, ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಆಶಾ ಹಾಗೂ ಮನೀಶಾ ತಲೆಮಾರಿಸಿಕೊಂಡಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಮಲಾಡ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.