ರಾಜ್ಯದಲ್ಲೂ ಪ್ಲಾಸ್ಮಾ ಚಿಕಿತ್ಸೆಗೆ ಒಲವು: ಮಾಸಾಂತ್ಯದೊಳಗೆ ಇನ್ನೂ 10 ಪ್ರಯೋಗಾಲಯ, ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಸಿಎಂ ಕಳವಳ

BSY
Published on

ಬೆಂಗಳೂರು: ಐಸಿಎಂಆರ್ ಅನುಮತಿ ನೀಡಿದರೆ ರಾಜ್ಯದಲ್ಲೂ ಪ್ಲಾಸ್ಮಾ ಚಿಕಿತ್ಸೆ ಪ್ರಾರಂಭಿಸಲು ಮತ್ತು ಏಪ್ರಿಲ್ ಅಂತ್ಯದೊಳಗೆ ಇನ್ನೂ 10 ಪ್ರಯೋಗಾಲಯಗಳನ್ನು ಸ್ಥಾಪಿಸಲು ಸರ್ಕಾರ ತೀರ್ವನಿಸಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ತಜ್ಞ ವೈದ್ಯರು ಹಾಗೂ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2 ದಿನಗಳಿಂದ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸಚಿವರು ಮತ್ತು ಹಿರಿಯ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಜ್ವರ, ಶೀತ, ಉಸಿರಾಟದ ತೊಂದರೆ ಇರುವವರು ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿದೆ ಎಂದು ಸಭೆಯಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದು, ಯಾವುದೇ ಪ್ರಕರಣ ವರದಿಯಾಗದ ಜಿಲ್ಲೆಗಳಲ್ಲೂ ಈ ರೋಗ ಲಕ್ಷಣಗಳಿರುವ ವ್ಯಕ್ತಿಗಳ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು. ಕರೊನಾ ಬಗ್ಗೆ ಪ್ರತ್ಯೇಕ ಆಪ್ ಅಭಿವೃದ್ಧಿ ಪಡಿಸಲು, ಐಸಿಯುನಲ್ಲಿರುವ ವ್ಯಕ್ತಿಗಳ ಚಿಕಿತ್ಸೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಹಾಗೂ ಅವರಿಗೆ ಕೆಲವು ವಿಶೇಷ ಪರೀಕ್ಷೆಗಳನ್ನು ನಡೆಸಲು ಹಾಗೂ ಕೋವಿಡ್-19 ಚಿಕಿತ್ಸೆಗೆ ಸೂಕ್ತ ಮಾರ್ಗಸೂಚಿ ಅನುಸರಿಸಲು ತೀರ್ವನಿಸಲಾಯಿತು ಎಂದರು.

ನಿಭಾಯಿಸಲು ಸಿದ್ಧತೆ: ಲಾಕ್​ಡೌನ್ ಸಡಿಲಗೊಳಿಸಿದ ನಂತರ ಪ್ರಕರಣಗಳ ಸಂಖ್ಯೆ ಹೆಚ್ಚಾದಲ್ಲಿ ಅವುಗಳನ್ನು ನಿಭಾಯಿಸುವ ಸಿದ್ಧತೆ ಮಾಡಿಕೊಳ್ಳಲು ಸಭೆಯಲ್ಲಿ ತೀರ್ವನಿಸಲಾಯಿತು. ಏ.21ರಂದು ಸಭೆ ಸೇರಿ ಪರಿಸ್ಥಿತಿಯನ್ನು ಅವಲೋಕಿಸಿ, ಲಾಕ್​ಡೌನ್ ಕುರಿತು ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು. ಶುಕ್ರವಾರ 38 ಪ್ರಕರಣಗಳು ವರದಿಯಾಗಿದ್ದು, ಚಿಕಿತ್ಸೆ ವಿಧಿ-ವಿಧಾನಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು ಎಂದರು.

ಥರ್ಮಲ್ ಸ್ಕಾ್ಯನರ್: ವಿವಿಧ ಕಂಪನಿಗಳಲ್ಲಿ ಲಾಕ್​ಡೌನ್ ಸಡಿಲಗೊಳಿಸುವ ಸಂದರ್ಭ ಥರ್ಮಲ್ ಸ್ಕಾ್ಯನರ್ ಮತ್ತಿತರ ಸರಳ ಪರೀಕ್ಷಾ ಪರಿಕರಗಳ ಮೂಲಕ ತಮ್ಮ ಸಿಬ್ಬಂದಿಯಲ್ಲಿ ರೋಗ ಲಕ್ಷಣವಿದೆಯೇ ಎಂದು ಪ್ರತಿ ದಿನ ಪರೀಕ್ಷಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ ವಿವರವಾದ ಮಾರ್ಗಸೂಚಿ ಸಿದ್ಧಪಡಿಸಲು ಸೂಚಿಸಲಾಗಿದೆ. ಆರೋಗ್ಯ ಸೇತು ಆಪ್ ಜನರು ಹೆಚ್ಚಿನ ಸಂಖ್ಯೆಯಲ್ಲಿ ಡೌನ್​ಲೋಡ್ ಮಾಡಿಕೊಳ್ಳಲು ಮನವಿ ಮಾಡಲಾಗಿದೆ ಎಂದು ಬಿಎಸ್​ವೈ ಹೇಳಿದರು.

ರೋಗ ಲಕ್ಷಣ ಕಾಣಿಸಿದ ತಕ್ಷಣ ಬನ್ನಿ

ರೋಗಿಗಳು ರೋಗ ಲಕ್ಷಣ ಕಂಡು ಬಂದ ಮೇಲೆ ಸರಾಸರಿ 4 ದಿನದ ನಂತರ ಬರುತ್ತಿದ್ದಾರೆ. ಪ್ರಾರಂಭದಲ್ಲೇ ಬಂದರೆ, ಚಿಕಿತ್ಸೆ ಹಾಗೂ ಜೀವ ಉಳಿಸುವ ನಿಟ್ಟಿನಲ್ಲಿ ಸಹಕಾರಿ ಆಗುವುದು ಎಂಬ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ರೋಗ ಲಕ್ಷಣ ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂರ್ಪಸುವಂತೆ ಸಿಎಂ ಮನವಿ ಮಾಡಿದರು.

43 ಪರೀಕ್ಷೆಗಳಿಗೊಂದು ಸೋಂಕು

ಕೋವಿಡ್-19 ಪರೀಕ್ಷೆಯಲ್ಲಿ ದೇಶದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಸರಾಸರಿ 43.56 ಪರೀಕ್ಷೆಗಳಲ್ಲಿ ಒಂದು ಪಾಸಿಟಿವ್ ಪ್ರಕರಣ ವರದಿಯಾಗುತ್ತಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು. ಕರೊನಾ ಪರೀಕ್ಷೆಯಲ್ಲಿ ಮೊದಲ ಸ್ಥಾನದಲ್ಲಿರುವ ಕೇರಳದಲ್ಲಿ 44.16 ಪರೀಕ್ಷೆಗಳಲ್ಲಿ ಒಂದು ಪಾಸಿಟಿವ್ ಪ್ರಕರಣ ವರದಿಯಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕೇಂದ್ರ ಸರ್ಕಾರದ ಐಸಿಎಂಆರ್ 6.5 ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್ ಖರೀದಿಸಿದ್ದು, ರಾಜ್ಯಕ್ಕೆ 12,400 ಕಿಟ್ ಪೂರೈಸಲಿದೆ ಎಂದರು.

ಸರ್ಕಾರದಿಂದ ಖಾಸಗಿ ಆರೋಗ್ಯ ಪ್ರಯೋಗಾಲಯಗಳಲ್ಲಿ ಕೋವಿಡ್ ಪರೀಕ್ಷೆಗೆ ಸ್ಯಾಂಪಲ್ ಕಳುಹಿಸಿದ ಸಂದರ್ಭದಲ್ಲಿ ಪ್ರತಿ ಸ್ಯಾಂಪಲ್​ಗೆ 2,250 ರೂ. ಗರಿಷ್ಠ ದರ ವಿಧಿಸಬೇಕು ಎಂಬ ಮಾರ್ಗದರ್ಶಿ ಆದೇಶವನ್ನು ಆರೋಗ್ಯ ಇಲಾಖೆ ಜಾರಿ ಮಾಡಿದೆ ಎಂದರು. ಏ.16ರಂದು 2,187 ಜನರಿಗೆ ಆಪ್ತ ಸಮಾಲೋಚನಾ ಕಾರ್ಯ ನಿರ್ವಹಿಸಲಾಗಿದೆ. ಇದುವರೆಗೆ 40,393 ವ್ಯಕ್ತಿಗಳಿಗೆ ಆಪ್ತ ಸಮಾಲೋಚನಾ ಸೇವೆ ನೀಡಲಾಗಿದೆ. ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿಗೆ ಶುಕ್ರವಾರ 1.48 ಕೋಟಿ ರೂ. ಸ್ವೀಕೃತವಾಗಿದ್ದು, ಇಲ್ಲಿಯವರೆಗೆ ಒಟ್ಟು 142.81 ಕೋಟಿ ರೂ. ಸ್ವೀಕೃತವಾಗಿದೆ ಎಂದರು.

ಧರ್ಮಸ್ಥಳದಿಂದ -ಠಿ;5 ಕೋಟಿ ದೇಣಿಗೆ

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಪಿಎಂ ಕೇರ್ ನಿಧಿಗೆ 5 ಕೋಟಿ ರೂ. ದೇಣಿಗೆ ನೀಡಿದ್ದು, ಹಣವನ್ನು ಈಗಾಗಲೆ ಬ್ಯಾಂಕ್ ಮೂಲಕ ವರ್ಗಾವಣೆ ಮಾಡಲಾಗಿದೆ. ಕರೊನಾ ಸಂಕಷ್ಟದ ಸಂದರ್ಭ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕರ್ತರು ಅನುಸರಿಸುವ ಕ್ರಮಗಳ ಬಗ್ಗೆ ಶುಕ್ರವಾರ ಡಾ.ಹೆಗ್ಗಡೆ ಅವರು ತುರ್ತು ಸಭೆ ನಡೆಸಿ ಸಲಹೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net