ಅಂಗಾಂಗ ಕಸಿಯಲ್ಲಿ ಹೊಸ ಮೈಲಿಗಲ್ಲು : ಯೋಜನೆ ಲಾಭ ಪಡೆದ 292 ಬಿಪಿಎಲ್ ಕುಟುಂಬಗಳು

Organ transplant
Published on

ಪಂಕಜ ಕೆ.ಎಂ. ಬೆಂಗಳೂರು

ಕರ್ನಾಟಕದಲ್ಲಿ ಉಚಿತ ಅಂಗಾಂಗ ಕಸಿಗೆ ಒಳಗಾದವರ ಸಂಖ್ಯೆ 300 ರ ಗಡಿಯಲ್ಲಿದ್ದು, ಇದರೊಂದಿಗೆ ರಾಜ್ಯ ಅಂಗಾಂಗ ಕಸಿ ಯೋಜನೆಯು ಹೊಸ ಮೈಲಿಗಲು ಸ್ಥಾಪಿಸುವತ್ತ ಸಾಗುತ್ತಿದೆ. ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ 292 ರೋಗಿಗಳು ಉಚಿತ ಆಂಗಾಂಗ ಕಸಿ ಮಾಡಿಸಿಕೊಂಡಿದ್ದಾರೆ.

ಯೋಜನೆಯಡಿ ಈವರೆಗೂ 217 ಮೂತ್ರಪಿಂಡ, 41 ಯಕೃತ್ ಹಾಗೂ 34 ಹೃದಯ ಕಸಿ ಶಸಚಿಕಿತ್ಸೆಗಳನ್ನು ಉಚಿತವಾಗಿ ನಡೆಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಉಚಿತ ಕಸಿ ಮತ್ತು ಜೀವರಕ್ಷಕ (ಇಮ್ಯುನೊಸಪ್ರೆಸಿಸ್ ಮೆಡಿಸಿನ್) ಔಷಧಗಳ ಪೂರೈಕೆಗೆ 12 ಕೋಟಿ ರೂ.ಗೂ ಅಧಿಕ ಖರ್ಚು ಮಾಡಲಾಗಿದೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಅಂಗಾಂಗ ವೈಲ್ಯಕ್ಕೆ ಒಳಗಾದ ಸಂದರ್ಭದಲ್ಲಿ ಮೃತ ದಾನಿ (ಮಿದುಳು ನಿಷ್ಕ್ರೀಯಗೊಂಡ)ಗಳು ಇಲ್ಲವೇ ಜೀವಂತವಾಗಿರುವ ಸಂಬಂಧಿಕರಿಂದ ಅಂಗಾಂಗ ಪಡೆದು ಕಸಿ ಮಾಡಿಸಿಕೊಳ್ಳಲು ಈ ಯೋಜನೆ ಸಹಕಾರಿಯಾಗಿದ್ದು, ಇದರಿಂದ ನೂರಾರು ಮಂದಿ ಮರುಜೀವ ಪಡೆದಿದ್ದಾರೆ.

2018ರಲ್ಲಿ ಪ್ರಾರಂಭ: ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯಡಿ ರಾಜ್ಯ ಅಂಗಾಂಗ ಕಸಿ ಇರಲಿಲ್ಲ. ಕಾರಣ, ಸರ್ಕಾರವು 2018ರ ಡಿಸೆಂಬರ್ 3ರಂದು ಪ್ರತ್ಯೇಕ ಯೋಜನೆ ಆರಂಭಿಸಿತು. ಇದರಡಿ ಎಲ್ಲ ಬಿಪಿಎಲ್ ಕಾರ್ಡ್‌ವುಳ್ಳ ರೋಗಿಗಳಿಗೆ ಸರ್ಕಾರಿ ಮತ್ತು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಅಂಗಾಂಗ ಕಸಿ ಶಸಚಿಕಿತ್ಸೆಗೆ ಅವಕಾಶ ಕಲ್ಪಿಸಿತು. ಮೂತ್ರಪಿಂಡ, ಯಕೃತ್ ಮತ್ತು ಹೃದಯ ಕಸಿ ಯೋಜನೆಗಾಗಿ 2019ರ ಬಜೆಟ್‌ನಲ್ಲಿ 30 ಕೋಟಿ ರೂ. ಮೀಸಲಿಟ್ಟಿತ್ತು.

ಯಾವ ಕಸಿಗೆ ಎಷ್ಟು ಮೊತ್ತ? ಮೂತ್ರಪಿಂಡ ಕಸಿಗೆ 2 ಲಕ್ಷ ರೂ., ಹೃದಯ ಕಸಿಗೆ 10 ಲಕ್ಷ ರೂ. ಹಾಗೂ ಯಕೃತ್ ಕಸಿಗೆ 11 ಲಕ್ಷ ರೂ. ಪ್ಯಾಕೇಜ್ ದರ ನಿಗದಿಪಡಿಸಲಾಗಿದೆ. ಕಸಿ ನಂತರ ರೋಗಿಗೆ ಬದುಕಿರುವವರೆಗೂ ಉಚಿತವಾಗಿ ಜೀವರಕ್ಷಕ ಔಷಧಗಳನ್ನು ನೀಡಲಾಗುವುದು. ಆಸ್ಪತ್ರೆಗಳಿಗೆ ಈ ಚಿಕಿತ್ಸಾ ವೆಚ್ಚವನ್ನು ರಾಜ್ಯದ ಆರೋಗ್ಯ ಯೋಜನೆಗಳನ್ನು ಅನುಷ್ಟಾನಗೊಳಿಸುವ ನೋಡಲ್ ಏಜೆನ್ಸಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಸ್ಯಾಟ್) ಮೂಲಕ ಭರಿಸಲಾಗುವುದು.

42 ಆಸ್ಪತ್ರೆಗಳಲ್ಲಿ ಚಿಕಿತ್ಸೆ: ಸರ್ಕಾರದಡಿ ಬರುವ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ, ನೆ್ರೆೆ ಯುರಾಲಜಿ ಸಂಸ್ಥೆ (ಐಎನ್‌ಯು), ಇನ್‌ಸ್ಟಿಟ್ಯೂಟ್ ಆ್ ಗ್ಯಾಸ್ಟ್ರೋಎಂಟರಾಲಜಿ ಸೈನ್ಸ್ ಆ್ಯಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್ (ಐಜಿಒಟಿ) ಮತ್ತು ಹುಬ್ಬಳ್ಳಿಯ ಕರ್ನಾಟಕ ಇನ್‌ಸ್ಟಿಟ್ಯೂಟ್ ಆ್ ಮೆಡಿಕಲ್ ಸೈನ್ಸ್ ಕಿಮ್ಸ್ ಹಾಗೂ ಖಾಸಗಿ ಸೇರಿ ರಾಜ್ಯದ 42 ಆಸ್ಪತ್ರೆಗಳು ಯೋಜನೆಯಡಿ ಚಿಕಿತ್ಸೆ ನೀಡಲು ನೋಂದಣಿಯಾಗಿವೆ.

ಚಿಕಿತ್ಸೆಯ ವಿವರ: ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಂಕಿ-ಅಂಶಗಳ ಪ್ರಕಾರ, 2019-20ರಲ್ಲಿ 23 ರೋಗಿಗಳು, 2020-21ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಹೊರತಾಗಿಯೂ ಒಂಭತ್ತು ರೋಗಿಗಳು, 2021-22ರಲ್ಲಿ 32 ರೋಗಿಗಳು, 2022-23ರಲ್ಲಿ 40 ರೋಗಿಗಳು ಹಾಗೂ 2023-24ರ ಮೇ 18ರವರೆಗೆ 188 ರೋಗಿಗಳು ಉಚಿತ ಅಂಗಾಂಗ ಕಸಿ ಶಸಚಿಕಿತ್ಸೆಗೆ ಒಳಗಾಗಿದ್ದಾರೆ. ಇವರಿಗೆ ಮೊದಲ ಎರಡು ತಿಂಗಳು ರೋಗನಿರೋಧಕ ಔಷಧಗಳನ್ನು ಆಯಾ ಆಸ್ಪತ್ರೆಗಳ ಪ್ಯಾಕೇಜ್‌ನಲ್ಲಿ ಸೇರಿಸಲಾಗಿದೆ. ನಂತರದಲ್ಲಿ ಜೀವನ ಪರ್ಯಂತ ಉಚಿತವಾಗಿ ಔಷಧಗಳನ್ನು ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದಾನಿಗಳಿಗೆ ಚಿಕಿತ್ಸೆ ಲಭ್ಯವಿಲ್ಲ: ರಾಜ್ಯ ಅಂಗಾಂಗ ಕಸಿ ಯೋಜನೆಯಡಿ ಕೇವಲ ರೋಗಿಗಳಿಗೆ ಚಿಕಿತ್ಸೆ ಲಭ್ಯವಿದೆ. ದಾನಿಗಳಿಗೆ ಚಿಕಿತ್ಸೆ ಮತ್ತು ಔಷಧ ಲಭ್ಯವಿರುವುದಿಲ್ಲ. ಕಸಿ ಶಸ ಚಿಕಿತ್ಸೆಗೆ ಒಳಪಡುವ ಬಹುತೇಕರು ಮಿದುಳು ನಿಷ್ಕ್ರಿಯಗೊಂಡವರ ಅಂಗಾಂಗಗಳನ್ನೇ ಅವಲಂಭಿಸಿದ್ದಾರೆ. ಆದರೆ ಕಿಡ್ನಿ ಮತ್ತು ಯಕೃತ್ ಅನ್ನು ಜೀವಂತ ವ್ಯಕ್ತಿಯೂ ದಾನ ಮಾಡಬಹುದಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಕುಟುಂಬದ ಸದಸ್ಯರು ಅಂಗಾಂಗ ದಾನ ಮಾಡಲು ಮುಂದೆ ಬರುತ್ತಿದ್ದಾರೆ. ಹಾಗಾಗಿ ದಾನಿ ಆಸ್ಪತ್ರೆಯಲ್ಲಿ ಇರುವಷ್ಟು ದಿನ ಚಿಕಿತ್ಸಾ ವೆಚ್ಚ, ನಂತರದಲ್ಲಿ 3-6 ತಿಂಗಳ ಕಾಲ ಉಚಿತ ಔಷಧ ಒದಗಿಸಲು ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net