

ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2024-25ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ಗೌರವ ಪ್ರಶಸ್ತಿ’ಗೆ ಗಾಯಕಿ ಭಾನುಮತಿ ನರಸಿಂಹನ್ (ಬೆಂಗಳೂರು) ಹಾಗೂ ನೃತ್ಯ ಕಲಾವಿದೆ ಗಾಯತ್ರಿ ಕೇಶವನ್ (ಹಾಸನ) ಅವರು ಭಾಜನರಾಗಿದ್ದಾರೆ.
ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್ ಅವರು ಶುಕ್ರವಾರ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ್ದು, ‘ವಾರ್ಷಿಕ ಪ್ರಶಸ್ತಿ’ಗೆ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾಕೀರ್ತನ, ಗಮಕ ವಿಭಾಗಗಳಿಂದ 14 ಕಲಾವಿದರು ಹಾಗೂ ಎರಡು ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ಗೌರವ ಪ್ರಶಸ್ತಿಯು ತಲಾ 50 ಸಾವಿರ ಹಾಗೂ ವಾರ್ಷಿಕ ಪ್ರಶಸ್ತಿ ತಲಾ 25 ಸಾವಿರ ನಗದು ಬಹುಮಾನ ಒಳಗೊಂಡಿದೆ.
ವಾರ್ಷಿಕ ಪ್ರಶಸ್ತಿ: ‘ಕರ್ನಾಟಕ ಸಂಗೀತ ವಿಭಾಗ’ದಿಂದ ವಾನರಾಶಿ ಬಾಲಕೃಷ್ಣ ಭಾಗವತರ್ (ಕೋಲಾರ), ಮೃದಂಗ ವಾದಕ ಎಸ್.ವಿ. ಗಿರಿಧರ್ (ಬೆಂಗಳೂರು), ಪಿಟೀಲು ವಾದಕ ನಾಗಭೂಷಣಯ್ಯ(ಆನೇಕಲ್), ‘ಹಿಂದೂಸ್ತಾನಿ ಸಂಗೀತ ವಿಭಾಗ’ದಿಂದ ಮಹದೇವಪ್ಪ ಪೂಜಾರ (ಕಲಬುರಗಿ), ಹಾರ್ಮೋನಿಯಂ ವಾದಕ ರವೀಂದ್ರ ಕಾಟೋಟಿ (ಬೆಳಗಾವಿ), ಗಾಯಕ ಅನಂತ ಭಾಗವತ (ಉತ್ತರ ಕನ್ನಡ), ‘ನೃತ್ಯ ವಿಭಾಗ’ದಿಂದ ಟಿ. ರವೀಂದ್ರಶರ್ಮ,(ಬೆಳಗಾವಿ), ಅನುರಾಧ ವಿಕ್ರಾಂತ್ (ಬೆಂಗಳೂರಿನ), ಸುಗ್ಗನಹಳ್ಳಿ ಷಡಕ್ಷರಿ (ಬೆಂ) ಹಾಗೂ ಬಿ.ಆರ್. ಹೇಮಂತ್ ಕುಮಾರ್ (ಬೆಂಗಳೂರು) ಆಯ್ಕೆ ಮಾಡಲಾಗಿದೆ.
‘ಸುಗಮ ಸಂಗೀತ ವಿಭಾಗ’ದಿಂದ ಸೂಗೂರೇಶ ಅಸ್ಕಿಹಾಳ್ (ರಾಯಚೂರು), ಎನ್.ಎಲ್. ಶಿವಶಂಕರ್ (ಬೆಂಗಳೂರು), ‘ಕಥಾಕೀರ್ತನ ವಿಭಾಗ’ದಿಂದ ಕೆ.ಎನ್. ಕೃಷ್ಣಪ್ಪ (ಕೋಲಾರ), ‘ಗಮಕ ವಿಭಾಗ’ದಿಂದ ರತ್ನಾಮೂರ್ತಿ (ಹಾಸನ) ಹಾಗೂ ‘ಸಂಘಸಂಸ್ಥೆಗಳ ವಿಭಾಗ’ದಿಂದ ಗದಗದ ವೀರೇಶ್ವರ ಪುಣ್ಯಾಶ್ರಮ ಮತ್ತು ಬೆಂಗಳೂರಿನ ಸುನಾದ ನಾದ ಕಲ್ಚರಲ್ ಸೆಂಟರ್ ಪಶಸ್ತಿಗೆ ಆಯ್ಕೆಯಾಗಿವೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಎನ್. ನರೇಂದ್ರ ಬಾಬು ತಿಳಿಸಿದ್ದಾರೆ.