Valmiki Corporation Scam; CBI ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್​

Karnataka HC
Published on

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು (Valmiki Corporation Scam) ಸಿಬಿಐ ತನಿಖೆಗೆ (CBI Investigation) ವಹಿಸುವಂತೆ ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ  ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ‌ (Karnataka HighCourt) ವಜಾಗೊಳಿಸಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿಯ ವಿಚಾರಣಾ ಮಾನ್ಯತೆ ಕುರಿತು ತೀರ್ಪು ಕಾಯ್ದಿರಿಸಿದ್ದು, ಇಂದು( ನವೆಂಬರ್​ 13) ಪ್ರಕಟಿಸಿದೆ.

ಈ ಪ್ರಕರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವಿವಾದ ಎಂದು ಅದನ್ನು ಸಂವಿಧಾನದ 131ನೇ ವಿಧಿಯಡಿ ಸುಪ್ರೀಂ ಕೋರ್ಟ್ ನಿರ್ಧರಿಸಬೇಕೇ? ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 35ಎ ಅಡಿ ಹೊರಡಿಸಿರುವ ಮಾಸ್ಟರ್ ಸುತ್ತೋಲೆಯ ಪ್ರಕಾರ ನಿರ್ದಿಷ್ಟ ಮೊತ್ತದ ಹಣಕಾಸು ಅವ್ಯವಹಾರವನ್ನು ಸಿಬಿಐ ತನಿಖೆ ನಡೆಸಬೇಕೇ ಎಂಬ ವಿಚಾರಗಳಿಗೆ ಉತ್ತರಿಸುವ ಮೂಲಕ ಅರ್ಜಿಯ ಊರ್ಜಿತತ್ವ ನಿರ್ಧರಿಸಲಾಗುವುದು ಎಂದು ನ್ಯಾಯಪೀಠ ಹೇಳಿತು.

Nagaprasanna

ಇಡೀ ಬ್ಯಾಂಕಿಂಗ್ ವಲಯದ ಪ್ರಾಮಾಣಿಕತೆಯನ್ನು ಖಾತರಿಪಡಿಸಲು ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪರ ವಕೀಲರು ವಾದಿಸಿದ್ದರು.

ಅರ್ಜಿಯ ಸಿಂಧುತ್ವದ ಬಗ್ಗೆ ಪ್ರಾಥಮಿಕ ಪ್ರಶ್ನೆ ಇದೆ. ಏಕೆಂದರೆ ಇದು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ವ್ಯಾಜ್ಯವಾಗಿದೆ. ಈ ಅರ್ಜಿಯ ಮೂಲವೇ ಕೇಂದ್ರ ಸರ್ಕಾರ ಹೊರಡಿಸಿರುವ ಒಂದು ಸುತ್ತೋಲೆ, ಅಂತಹ ಸುತ್ತೋಲೆಗಳ ಮೂಲಕ ರಾಜ್ಯ ಸರ್ಕಾರ ಮತ್ತು ಪೊಲೀಸರ ನಡುವಿನ ಅಧಿಕಾರದಲ್ಲಿ ಮಧ್ಯಪ್ರವೇಶ ಮಾಡಲು ಯತ್ನಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net