BJP ಸರ್ಕಾರದ Covid ಹಗರಣದ ಮತ್ತಷ್ಟು ಸ್ಫೋಟಕ ಮಾಹಿತಿ ಬೆಳಕಿಗೆ; ಸತ್ತಿದ್ದು 37 ಸಾವಿರ ಜನರಲ್ಲ, 1.57 ಲಕ್ಷ ಮಂದಿ!

Vidhanasoudha
Published on

ಬೆಂಗಳೂರು: ರಾಜ್ಯ ಕಾಂಗ್ರೆಸ್​ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿರುವ ಮುಡಾ ಹಗರಣ ಸಿಎಂ ಸಿದ್ದರಾಮಯ್ಯ ಪಾಲಿಗೆ ಉರುಳಾಗಿ ಪರಿಣಮಿಸಿದ್ದು, ಇದಕ್ಕೆ ಪ್ರತಿಯಾಗಿ ರಾಜ್ಯ ಕಾಂಗ್ರೆಸ್​ ಸರ್ಕಾರ ಬಿಜೆಪಿ ವಿರುದ್ಧ ಕೊರೊನಾಸ್ತ್ರ (Covid) ಹೂಡಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ನಾ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿದೆ. ಅದರಂತೆ ಕುನ್ನಾ ನೇತೃತ್ವದ ಆಯೋಗವು ತನಿಖೆ ನಡೆಸಿ ಮಧ್ಯಂತರ ವರದಿ ನೀಡಿದ್ದು, ಈ ವರದಿಯನ್ನು ಆಧರಿಸಿ ಅಂದಿನ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ವಿರುದ್ಧ ರಾಜ್ಯ ಕಾಂಗ್ರೆಸ್​ ಸರ್ಕಾರ ಪ್ರಾಸಿಕ್ಯೂಷನ್‌ಗೆ ಶಿಫಾರಸ್ಸು ಮಾಡಿದೆ.

ಇನ್ನು ಕರೋನಾ (Covid) ಕಾಲದಲ್ಲಿ ಅಕ್ರಮ ನಡೆದಿದೆ ಎಂದು ಸಮಿತಿ ನೀಡಿರುವ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಮಾಸ್ಕ್​, ಪಿಪಿಇ ಕಿಟ್,ಸಿಟಿ ಸ್ಕ್ಯಾನ್,ವೆಂಟಿಲೆಟರ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದೆ. ಇದಲ್ಲದೆ ಇದೀಗ ಸಾವಿನ ವಿಚಾರದಲ್ಲೂ ಹಿಂದಿನ ಸರ್ಕಾರ ಸುಳ್ಳು ಹೇಳಿದೆ ಎಂದು ಆರೋಪಿಸಿರುವ ಸಮಿತಿಯು ಇದೀಗ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಕಾಂಗ್ರೆಸ್​ ಮಾಡಿದ್ದ ಆರೋಪಗಳಿಗೆ ಪುಷ್ಠಿ ನೀಡಿದಂತಾಗಿದೆ.

ಸುಮಾರು 1 ಲಕ್ಷ 57ಸಾವಿರದ 914 ಮಂದಿ ಕೋವಿಡ್ (Covid) ಅವಧಿಯಲ್ಲಿ ಮೃತಪಟ್ಟಿರುವುದಾಗಿ ಸಾಂಖ್ಯಿಕ ನಿರ್ದೇಶನಾಲಯ ಮಾಹಿತಿ ನೀಡಿದ್ದು, ಆರೋಗ್ಯ ಇಲಾಖೆ ಅದನ್ನು ಬಚ್ಚಿಟ್ಟು 37206 ಮಂದಿ ಮೃತಪಟ್ಟಿರುವುದಾಗಿ ಮಾಹಿತಿ ನೀಡಿತ್ತು. ಹೆಚ್ಚುವರಿ 1ಲಕ್ಷದ20ಸಾವಿರದ708 ಮಂದಿ ಸಾವಿನ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಇದು ಮಹಾಪರಾಧ ಎಂದು ಕುನ್ನಾ ನೇತೃತ್ವದ ಆರೋಗ ದೂರಿದೆ. ಇದೀಗ ಈ ವರದಿ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ಬಿರುಗಾಳಿ ಎಬ್ಬಿಸುವ ಮುನ್ಸೂಚನೆ ನೀಡಿದ್ದು, ಮುಂದಿನ ದಿನಗಳಲ್ಲಿ ಈ ವರದಿಯಿಂದ ಯಾರಿಗೆಲ್ಲಾ ಗಂಡಾಂತರ ಕಾದಿದೆ ಎಂದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net