

ಕೆಲವು ಸಾಮಾಜಿಕ ಜಾಲತಾಣ ಖಾತೆಗಳು ಹಾಗೂ ಟ್ವೀಟ್ಗಳನ್ನು ತೆಗೆಯುವಂತೆ ಕೇಂದ್ರ ಸರ್ಕಾರ ನೀಡಿದ ಸೂಚನೆಯನ್ನು ಪ್ರಶ್ನಿಸಿ ಟ್ವಿಟರ್ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯ ವಜಾಗೊಳಿಸಿದೆಯಲ್ಲದೆ, ಕಂಪನಿಗೆ 50 ಲಕ್ಷ ರೂ. ದಂಡವನ್ನೂ ವಿಧಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಕ್ತ ವೇದಿಕೆಗಳನ್ನು ಒದಗಿಸಿದ ಶ್ರೇಯಸ್ಸಿಗೆ ಪಾತ್ರವಾದ ಸಾಮಾಜಿಕ ಮಾಧ್ಯಮಗಳು, ಅದೇ ವೇಳೆ, ಈ ವೇದಿಕೆಯ ದುರುಪಯೋಗಕ್ಕೆ ಸಹ ಹೊಣೆಯನ್ನು ಹೊರುವ ಸನ್ನಿವೇಶ ನಿರ್ವಣವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪು ಮಹತ್ವ ಪಡೆಯುತ್ತದೆ.
2021ರ ಫೆಬ್ರವರಿಯಿಂದ 2022 ಫೆಬ್ರವರಿ ಅವಧಿಯಲ್ಲಿನ ಕೆಲ ಖಾತೆಗಳು ಹಾಗೂ ಟ್ವೀಟ್ಗಳನ್ನು ತೆಗೆಯುವಂತೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಟ್ವಿಟರ್ಗೆ ಸೂಚಿಸಿತ್ತು. ಈ ಪೈಕಿ 39 ಸ್ಥಗಿತ ಆದೇಶಗಳನ್ನು ಟ್ವಿಟರ್ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ‘ಯಾವುದೇ ಖಾತೆ ಸ್ಥಗಿತಕ್ಕೆ ಆದೇಶ ನೀಡಿದರೆ, ಅದಕ್ಕೆ ಕಾರಣಗಳನ್ನು ನೀಡಬೇಕಾಗುತ್ತದೆ. ಅಲ್ಲದೆ, ಸಂಬಂಧಿಸಿದ ನಿಯಮ ಇರಬೇಕಾಗುತ್ತದೆ ಹಾಗೂ ಆ ನಿಯಮವನ್ನು ಪ್ರಶ್ನಿಸಲು ಸಹ ಅವಕಾಶ ಇರಬೇಕಾಗುತ್ತದೆ’ ಎಂದು ಟ್ವಿಟರ್ ನ್ಯಾಯವಾದಿಗಳು ವಾದಿಸಿದ್ದರು.
‘ಟ್ವಿಟರ್ ಕಂಪನಿಯು ಅನೇಕ ವರ್ಷಗಳಿಂದ ನಿಯಮಭಂಗದ ರೂಢಿ ಹೊಂದಿದೆ’ ಎಂದು ಕೇಂದ್ರ ಸರ್ಕಾರ ವಾದಿಸಿತ್ತು. ಖಾತೆ ಸ್ಥಗಿತ ಸೂಚನೆ ನೀಡುವ ಮುನ್ನ ಟ್ವಿಟರ್ ಪ್ರತಿನಿಧಿಗಳ ಜತೆ 50 ಸಭೆಗಳನ್ನು ಸರ್ಕಾರ ನಡೆಸಿತ್ತು ಎಂದೂ ಕೋರ್ಟ್ ಗಮನಕ್ಕೆ ತರಲಾಗಿತ್ತು. ಟ್ವಿಟರ್ ವಾದಕ್ಕೆ ಕೋರ್ಟ್ ಮನ್ನಣೆ ನೀಡಿಲ್ಲ. ಅಲ್ಲದೆ, ಕೇಂದ್ರದ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪಾಲಿಸದಿರುವುದಕ್ಕಾಗಿ ಕಂಪನಿಗೆ 50 ಲಕ್ಷ ರೂ.ಗಳ ದಂಡವನ್ನೂ ವಿಧಿಸಿ ತೀರ್ಪು ನೀಡಿದೆ. ‘ನ್ಯಾಯಾಲಯದ ತೀರ್ಪು ನಮ್ಮ ವಾದವನ್ನು ಎತ್ತಿಹಿಡಿದಿದೆ’ ಎಂದಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು, ನೆಲದ ಕಾನೂನನ್ನು ಎಲ್ಲರೂ ಗೌರವಿಸಿ ಪಾಲಿಸಬೇಕಾಗುತ್ತದೆ ಎಂದು ಹೇಳಿರುವುದು ಸೂಕ್ತವಾಗಿದೆ.
ಈ ಪ್ರಕರಣ ಎಲ್ಲ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಹಾಗೂ ಬಳಕೆದಾರರಿಗೂ ಒಂದು ಸಂದೇಶ ನೀಡುವಂತಿದೆ ಎಂದರೆ ತಪ್ಪಲ್ಲ. ಸಾಮಾಜಿಕ ಮಾಧ್ಯಮಗಳು ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮುಕ್ತ ವೇದಿಕೆಯಾಗಿ ಒದಗಿವೆ ಎಂಬುದರಲ್ಲಿ ಅನುಮಾನವಿಲ್ಲ. ಹೀಗಾಗಿ ಪ್ರಭಾವಿ ಪರ್ಯಾಯ ಮಾಧ್ಯಮ ಕೂಡ ಸೃಷ್ಟಿಯಾಗಿದೆ. ಇದರಿಂದ ವೈಯಕ್ತಿಕವಾಗಿ ಮತ್ತು ಸಮಾಜಕ್ಕೆ ಪ್ರಯೋಜನಗಳು ಆಗಿರುವುದನ್ನು ಅಲ್ಲಗಳೆಯಲಾಗದು. ಇದರ ಜತೆಯಲ್ಲೇ, ಈ ವೇದಿಕೆಯ ದುರುಪಯೋಗವೂ ಆಗುತ್ತಿರುವುದಕ್ಕೆ ದಂಡಿಯಾಗಿ ನಿದರ್ಶನಗಳು ಸಿಗುತ್ತಿವೆ. ಆಧಾರವಿಲ್ಲದೆ ವೈಯಕ್ತಿಕ ಆರೋಪ, ದೂಷಣೆ, ಧಾರ್ವಿುಕ ಸೂಕ್ಷ್ಮ ವಿಚಾರಗಳಲ್ಲಿಯೂ ವಿವೇಚನೆಯಿಲ್ಲದ ಪೋಸ್ಟ್ ಮಾಡುವುದು- ಮುಂತಾದ ಘಟನೆಗಳು ಮಾಮೂಲು ಎಂಬಂತಾಗಿವೆ. ಹೀಗಾಗಿ, ನಿಯಂತ್ರಕ ವ್ಯವಸ್ಥೆ ಅನಿವಾರ್ಯ. ಇತ್ತ, ಕರ್ನಾಟಕದಲ್ಲಿ ಸಹ ಸೋಷಿಯಲ್ ಮೀಡಿಯಾ ಪೋಸ್ಟ್ಗಳ ಮೇಲೆ ನಿಗಾ ಇಟ್ಟು, ಉಲ್ಲಂಘನೆ ಕಂಡುಬಂದಲ್ಲಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಅವಕಾಶವಿರುವ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ, ಸಮಾಜದ ಆರೋಗ್ಯವನ್ನೂ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ.