

ಬೆಂಗಳೂರು: ರಾಜ್ಯಾದ್ಯಂತ ಇಳಿಕೆ ಮುಖ ಕಂಡಿದ್ದ ಕರೊನಾ ಪ್ರಮಾಣ ಗುರುವಾರ ಏಕಾಏಕಿ ಏರಿಕೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 500ಕ್ಕೂ ಅಧಿಕ ಪ್ರಕರಣಗಳು ದೃಢವಾಗಿದ್ದು, ರಾಜ್ಯದ ಏಕದಿನ ಏರಿಕೆ 2 ಸಾವಿರ ದಾಟಿದೆ.
ಇಂದು 2,052 ಜನರಲ್ಲಿ ಕರೊನಾ ಸೋಂಕು ದೃಢವಾಗಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 29,01,247ರಷ್ಟಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 506 ಪ್ರಕರಣ ಕಾಣಿಸಿಕೊಂಡಿದೆ. ನಗರದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 12,26,463ಕ್ಕೆ ಏರಿದೆ. ಅದರಲ್ಲಿ 12,02,194 ಸೋಂಕಿತರು ಗುಣಮುಖರಾಗಿದ್ದು, 8416 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ರಾಜ್ಯದಲ್ಲಿ ಸದ್ಯ 23,253 ಸಕ್ರಿಯ ಪ್ರಕರಣ ಬಾಕಿಯುಳಿದಿವೆ. ಇಂದು 1332 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ವರದಿಯಲ್ಲಿ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 35 ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟಾರೆ ಮೃತರ ಸಂಖ್ಯೆ 36,491ಕ್ಕೆ ಏರಿಕೆಯಾಗಿದೆ. ಇಂದಿನ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ. 1.37ರಷ್ಟಿದ್ದರೆ ಮರಣ ಪ್ರಮಾಣ ಶೇ. 1.70ರಷ್ಟಿದೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣ ಪತ್ತೆಯಾಗಿದ್ದರೆ ಉಳಿದಂತೆ ದಕ್ಷಿಣ ಕನ್ನಡದಲ್ಲಿ 396, ಉಡುಪಿಯಲ್ಲಿ 174, ಮೈಸೂರಿನಲ್ಲಿ 157 ಮತ್ತು ಹಾಸನದಲ್ಲಿ 136 ಜನರಲ್ಲಿ ಸೋಂಕು ದೃಢವಾಗಿದೆ. ಬಾಗಲಕೋಟೆ, ಬಳ್ಳಾರಿ, ಬೀದರ್, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ರಾಮನಗರ, ವಿಜಯಪುರ ಹಾಗೂ ಯಾದಗಿರಿಯಲ್ಲಿ ಏಕದಿನ ಏರಿಕೆ ಸಂಖ್ಯೆ ಒಂದಂಕಿಯಲ್ಲಿದೆ. (ಏಜೆನ್ಸೀಸ್)