

ಬೆಂಗಳೂರು: ಅತ್ತ ಕರೊನಾ ಕೇಸ್ಗಳನ್ನು ನಿಯಂತ್ರಣದಲ್ಲಿಡಲು ಹೈ ಅಲರ್ಟ್ ಆಗಿರುವ ಸರ್ಕಾರ, ಇನ್ನೂ 14 ದಿನಗಳ ಕಾಲ ಲಾಕ್ಡೌನ್ ವಿಸ್ತರಣೆ ಮಾಡಿದ್ದರೆ ಇತ್ತ ಸೋಂಕಿತರ ದೈನಂದಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಒಂದೇ ದಿನದಲ್ಲಿ ದೃಢಪಟ್ಟ ಸೋಂಕಿನ ಪ್ರಮಾಣಕ್ಕಿಂತಲೂ 20 ಸಾವಿರಕ್ಕೂ ಅಧಿಕ ಮಂದಿ ಸೋಂಕುಮುಕ್ತರಾಗಿ ಬಿಡುಗಡೆ ಆಗಿದ್ದಾರೆ.
ಇಂದಿನ ಕೋವಿಡ್-19 ಬುಲೆಟಿನ್ ಪ್ರಕಾರ ಒಂದೇ ದಿನದಲ್ಲಿ ಅಂದರೆ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 52,581 ಮಂದಿ ಗುಣಮುಖರಾಗಿ ವಿವಿಧ ಕೋವಿಡ್ ಆಸ್ಪತ್ರೆ ಹಾಗೂ ಆರೈಕೆ ಕೇಂದ್ರಗಳಿಂದ ಬಿಡುಗಡೆ ಹೊಂದಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣವಾದವರ ಸಂಖ್ಯೆ 18,29,276ಕ್ಕೆ ತಲುಪಿದೆ.
ಇನ್ನೊಂದೆಡೆ ರಾಜ್ಯದಲ್ಲಿ ಒಂದೇ ದಿನದಲ್ಲಿ ಹೊಸದಾಗಿ 32,218 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಇದುವರೆಗಿನ ಕೋವಿಡ್ ಸೋಂಕಿತರ ಸಂಖ್ಯೆ 23,67,742ಕ್ಕೆ ಏರಿದೆ. ಆದರೆ ಸದ್ಯ ಸಕ್ರಿಯ ಪ್ರಕರಣಗಳು 5,14,238 ಮಾತ್ರ ಇವೆ.
ಬೇಸರದ ಸಂಗತಿ ಎಂದರೆ ಒಂದೇ ದಿನದಲ್ಲಿ 353 ಮಂದಿ ಕೋವಿಡ್-ಸೋಂಕಿನಿಂದಾಗಿ ಮೃತಪಟ್ಟಿದ್ದು, ರಾಜ್ಯದಲ್ಲಿ ಇದುವರೆಗೆ ಕರೊನಾಗೆ ಬಲಿಯಾದವರ ಸಂಖ್ಯೆ 24,207ಕ್ಕೆ ತಲುಪಿದೆ.