

ಬೆಂಗಳೂರು : ಲೋಕಸಭೆ ಚುನಾವಣೆಗೆ ಸಾಕಷ್ಟು ಮುಂಚಿತವಾಗಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಕೇಂದ್ರ ಬಿಜೆಪಿ ವರಿಷ್ಠರು ನಿರ್ಧರಿಸಿದರೆ, ರಾಜ್ಯದ 10-12 ಅಭ್ಯರ್ಥಿಗಳೂ ಪಟ್ಟಿಯಲ್ಲಿ ಸೇರ್ಪಡೆಯಾಗುವ ಸಂಭವವಿದೆ.
ಸಮರ ಸಿದ್ಧತೆಗೆ ಕ್ಲಸ್ಟರ್ವಾರು ಎರಡು ದಿನಗಳ ಸಭೆಯು ಅಖಾಡದ ಪ್ರಾಯೋಗಿಕ ಪರೀಕ್ಷೆ ಎಂದು ರಾಜ್ಯ ನಾಯಕರು ಪರಿಗಣಿಸಿದ್ದರು. ಹಾಲಿ, ಮಾಜಿ ಸಂಸದ-ಶಾಸಕರು ಮತ್ತು ಮುಖಂಡರ ಒಟ್ಟು ಅಭಿಪ್ರಾಯಗಳು, ಸಲಹೆ-ಸೂಚನೆ ಪ್ರಕಾರ 10 ಕ್ಷೇತ್ರಗಳಿಗೆ ಯಾವುದೇ ಸಮಸ್ಯೆಯಿಲ್ಲವೆಂದು ನಾಯಕರು ಗ್ರಹಿಸಿದ್ದಾರೆ.
ಜನವರಿ ಅಂತ್ಯದೊಳಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಬೇಕೆಂಬ ನಿಲುವಿಗೆ ಪುಷ್ಠಿ ನೀಡಿದಂತಿದ್ದು, ದೆಹಲಿ ನಾಯಕರ ಮುಂದೆ ಸಮರ್ಥಿಸಿಕೊಳ್ಳಲು ಅನುಕೂಲವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಎರಡು ದಿನ, ಹಲವು ಆಯಾಮ: ವರಿಷ್ಠರ ಸೂಚನೆಯಂತೆ ತಲಾ ನಾಲ್ಕು ಲೋಕಸಭೆ ಕ್ಷೇತ್ರಗಳಿಗೆ ಒಂದು ಕ್ಲಸ್ಟರ್ ರಚನೆಯಾಗಿದ್ದು, ಎಂಟು ಕ್ಲಸ್ಟರ್ಗಳಿಗೆ ಸಂಬಂಧಿಸಿದಂತೆ ಎರಡು ದಿನಗಳ ಚರ್ಚೆಯು ಹಲವು ಆಯಾಮಗಳ ಮಾಹಿತಿ ಒದಗಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹಾಲಿ ಸಂಸದರು, ಅಭ್ಯರ್ಥಿಗಳ ಕುರಿತು ಅಭಿಪ್ರಾಯ ಸಂಗ್ರಹ, ನಿರ್ಣಯಕ್ಕೆ ನಡೆಸಿದ ಕಸರತ್ತು ಇದಾಗಿರದಿದ್ದರೂ 28 ಕ್ಷೇತ್ರಗಳ ವಾಸ್ತವಿಕ ಪರಿಸ್ಥಿತಿಗೆ ಕೈಗನ್ನಡಿ ಹಿಡಿದಿದೆ. ಆಯಾ ಕ್ಷೇತ್ರದ ಬಲ-ದೌರ್ಬಲ್ಯ, ನಾಯಕತ್ವ- ಕಾರ್ಯಕರ್ತರ ನಡುವೆ ಬೆಸುಗೆ, ಸಂಘಟನಾತ್ಮಕ ವಸ್ತುಸ್ಥಿತಿ, ಯಾವುದೆಲ್ಲ ಅಡೆತಡೆಗಳು, ಮುಖಂಡರ ಹಾಗೂ ತಳಮಟ್ಟದ ಒಲವು ಮುಂತಾದವುಗಳ ಬಗ್ಗೆ ಸ್ಥೂಲ ಚಿತ್ರಣ ಲಭಿಸಿದೆ. ತಳ, ಕ್ಷೇತ್ರ, ರಾಜ್ಯಮಟ್ಟದ ತೊಡಕುಗಳನ್ನು ಗುರುತಿಸಿ ನಿವಾರಿಸುವುದು ಸುಲಭ ಸಾಧ್ಯವಾಗಿದೆ. ಕೆಲವು ವಿಷಯಗಳನ್ನು ವರಿಷ್ಠರ ಹಂತದಲ್ಲಿ ಬಗೆಹರಿಸಲು ವಸ್ತುಸ್ಥಿತಿ ವರದಿ ಸಲ್ಲಿಸುವುದಕ್ಕೆ ಸಮಾಲೋಚನೆ ನೆರವಾಗಿದೆ ಎಂದು ಹಿರಿಯ ನಾಯಕರೊಬ್ಬರು ವಿವರಿಸಿದರು.
15 ಕ್ಷೇತ್ರಗಳಲ್ಲಿ ಸವಾಲು: ಕಾರ್ಯಸಾಧನೆ, ಕ್ಷೇತ್ರದ ಜನರು, ಸಂಘಟನೆ ಮತ್ತು ಕಾರ್ಯಕರ್ತರ ಜತೆಗೆ ನಿಕಟತೆ, ಬೆರೆಯುವಿಕೆ ಇತ್ಯಾದಿ ಮಾನದಂಡಗಳ ಆಧಾರದ ಪ್ರಕಾರ 15 ಕ್ಷೇತ್ರಗಳಲ್ಲಿ ದೊಡ್ಡ ಸವಾಲಿದೆ. ಪರ್ಯಾಯ ಅಭ್ಯರ್ಥಿಗಳ ಶೋಧ ಒಂದೆಡೆಯಾದರೆ, ಅಧಿಕೃತ ಅಭ್ಯರ್ಥಿ ಪರವಾಗಿ ದುಡಿಯಲು ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕಿರುವುದು ಮತ್ತೊಂದೆಡೆಯಾಗಿದೆ. ಈ ನಡುವೆ ಹಲವೆಡೆ ಪ್ರಬಲ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಜಾತಿ-ವರ್ಗ ಸಮೀಕರಣ ಮತ್ತು ಸಮತೋಲನದ ನೆಲೆಯಲ್ಲೂ ವರಿಷ್ಠರಿಂದಲೇ ಪರಿಹಾರ ಕಂಡುಕೊಳ್ಳಬೇಕಾಗಿದೆ. ಅಲ್ಲದೆ, ಮೋದಿ ಪರವಾದ ಅಲೆಯು ಮತಗಳಾಗಿ ಪರಿವರ್ತನೆ, ನಿಗದಿತ ಗುರಿ ಸಾಧನೆ ದೃಷ್ಟಿಯಿಂದ ನಾಯಕರು ಮತ್ತು ಎಲ್ಲ ಹಂತದ ಕಾರ್ಯಕರ್ತರ ಮಧ್ಯೆ ನಿಕಟತೆ ತುರ್ತು ಅಗತ್ಯವಾಗಿದೆ.
ಕೇಂದ್ರ ಸರ್ಕಾರ ಸಾಧನೆ ಮನೆ-ಮನಕ್ಕೆ ಮುಟ್ಟಿ, ಯುವ ಮತ್ತು ಹೊಸ ಮತದಾರರ ನಾಡಿಮಿಡಿತ ತಿಳಿಯಲು, ಸಕಾರಾತ್ಮಕ ವಾತಾವರಣ ಸೃಷ್ಟಿಸಲು ಹೆಚ್ಚಿನ ಪರಿಶ್ರಮ ಅಗತ್ಯವಿದೆ. ಇದೇ ಕಾರಣಕ್ಕೆ ಆಂತರಿಕ ಮತ್ತು ಸಾರ್ವಜನಿಕ ಕಾರ್ಯಚಟುವಟಿಕೆಗಳನ್ನು ಒಳಗೊಂಡ 100 ದಿನಗಳ ಪಥ ನಕ್ಷೆ ಅಂತಿಮಗೊಳಿಸಿದ್ದು, ಸಂಘಟನೆಗೆ ಬಲ, ಕಾರ್ಯಕರ್ತರಲ್ಲಿ ಹುರುಪು ಹೆಚ್ಚಳ ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಲಾಗಿದೆ.
18ಕ್ಕೆ ಕಾರ್ಯಕಾರಿಣಿ: ರಾಜ್ಯ ಕಾರ್ಯಕಾರಿ ಸಮಿತಿ ಜ.18ರಂದು ನಿಗದಿಯಾಗಿದೆ. ಸರ್ಕಾರದ ವಿರುದ್ಧ ಮುಂದಿನ ಹಂತದ ಹೋರಾಟ, 100 ದಿನಗಳ ಕಾರ್ಯಚಟುವಟಿಕೆಗಳು ಸೇರಿ ವಿವಿಧ ವಿಷಯಗಳು ಮುಖ್ಯ ಕಾರ್ಯಸೂಚಿಯಲ್ಲಿರಲಿವೆ. ಜಿಲ್ಲಾವಾರು ಅಭಿಪ್ರಾಯ ಸಂಗ್ರಹಕ್ಕೆ ರಾಜ್ಯ ನಾಯಕರ ಪ್ರವಾಸ ಹಾಗೂ ಜಿಲ್ಲಾ ಘಟಕದ ಹೊಸ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಅಂತಿಮಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
2 ದಿನಗಳ ಸಭೆಯಲ್ಲಿ ಅಭ್ಯರ್ಥಿಗಳ ಬಗ್ಗೆ ರ್ಚಚಿಸಿಲ್ಲ. ಪರ- ವಿರೋಧದ ಪ್ರಶ್ನೆಯೇ ಉದ್ಭವಿಸುವುದಿಲ್ಲ. 28 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂಬ ಗುರಿಯೊಂದಿಗೆ ತಂತ್ರಗಾರಿಕೆ, ಸಂಘಟನೆ, ರಾಜಕೀಯ ಮತ್ತು ಸಾಮಾಜಿಕ ವಿಚಾರಗಳು ಚರ್ಚೆಯಾಗಿವೆ.
| ಸಿ.ಟಿ.ರವಿ ಬಿಜೆಪಿ ಮಾಜಿ ಸಚಿವ