ಕಲ್ಪತರು ನಾಡಿನಲ್ಲಿ ಕಾರ್ಗಿಲ್ ವಿಜಯ್ ದಿವಸ್: ವಿಜಯವಾಣಿ ಸಹಯೋಗ, ಸಂಘ ಸಂಸ್ಥೆಗಳ ಸಾಥ್!

1 A
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕಲ್ಪತರು ನಾಡು ತುಮಕೂರಿನಲ್ಲಿ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ಯು ‘ಕಾರ್ಗಿಲ್ ವಿಜಯ ದಿವಸ್’ ರಜತ ಸಂಭ್ರಮ ನಿಮಿತ್ತ ಸಂಘಟಿಸಿದ್ದ ವಾಕಥಾನ್ ಹಾಗೂ ಮಾಜಿ ಸೈನಿಕರ ಗೌರವಾರ್ಪಣೆ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿ ವೃಂದ ಹಾಗೂ ಸಾರ್ವಜನಿಕರು ಭಾಗವಹಿಸಿ ರಾಷ್ಟ್ರಸೇವೆಗೆ ಕಟಿಬದ್ಧರಾಗುವ ಸಂಕಲ್ಪ ಕೈಗೊಂಡರು.

ದೇಶಸೇವೆ ಮಾಡಲು ಜೀವದ ಹಂಗು ತೊರೆದು ಹೋರಾಟ ಮಾಡುವ ಯೋಧರೇ ನಿಜವಾದ ಹೀರೋಗಳು. ಭಾರತೀಯ ಸೈನಿಕರಲ್ಲಿರುವ ಪರಾಕ್ರಮ, ಶೌರ್ಯ, ಕೆಚ್ಚೆದೆಯ ಸಾಮರ್ಥ್ಯ, ದೇಶಪ್ರೇಮ ಯುವಜನರಿಗೆ ಪ್ರೇರಣಾದಾಯಕ. ಇಂತಹ ಶಿಸ್ತುಬದ್ಧ ಜೀವನ ನಡೆಸುವ ಯೋಧರ ಗುಣಗಳನ್ನು ಮೈಗೂಡಿಸಿಕೊಂಡು ಭವಿಷ್ಯ ಭಾರತದ ನೇತಾರರಾಗಿ ಹೊರಹೊಮ್ಮಬೇಕು ಎಂಬ ಸಂದೇಶ ‘ಕಾರ್ಗಿಲ್ ವಿಜಯ ದಿವಸ್’ ಬೆಳ್ಳಿ ಹಬ್ಬವನ್ನು ಸ್ಮರಣೀಯಗೊಳಿಸಿತು.

ಸರ್ಕಾರಿ ಜೂನಿಯರ್ ಪಿಯು ಕಾಲೇಜು ಮೈದಾನದಲ್ಲಿ ವಾಕಥಾನ್​ನಲ್ಲಿ ಪಾಲ್ಗೊಳ್ಳಲು ಸಾವಿರಾರು ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಧಾವಿಸಿ ಬಂದಿದ್ದರು. ಪ್ಲೇಗ್ರೌಂಡ್ ಪೂರ್ತಿ ಆವರಿಸಿಕೊಳ್ಳುವ ರೀತಿ 20ಕ್ಕೂ ಹೆಚ್ಚಿನ ಕಾಲೇಜುಗಳು ಸಾವಿರಾರು ಸಂಖ್ಯೆಯ ವಿದ್ಯಾರ್ಥಿ ವೃಂದ ಶಿಸ್ತಾಗಿ ಸಾಲುಗಟ್ಟಿ ನಿಂತಿದ್ದರು. ಇವರೊಂದಿಗೆ 100ಕ್ಕೂ ಹೆಚ್ಚು ಎನ್​ಸಿಸಿ ಕೆಡೆಟ್​ಗಳು ಹಾಗೂ ಮಾಜಿ ಸೈನಿಕರ ಹುರುಪು ಕಳೆಗಟ್ಟಿತು. ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಯುವಜನ ಹುರುಪು ಕಂಡು ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮೆಚ್ಚುಗೆ ವ್ಯಕ್ತಪಡಿಸಿದರು. ವಾಕಥಾನ್ ಬೆನ್ನಲ್ಲೇ ನಡೆದ ವೇದಿಕೆ ಸಮಾರಂಭ ದೇಶಭಕ್ತಿ ಉದ್ಧೀಪಿಸುವ ಕಾರ್ಯಕ್ರಮಗಳಿಗೆ ಸಾಕ್ಷಿಯಾಯಿತು. ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಕ್ಯಾ. ನವೀನ್ ನಾಗಪ್ಪ ಅವರು ‘ಆಪರೇಷನ್ ವಿಜಯ್’ ಘಟನಾವಳಿಯನ್ನು ವಿವರವಾಗಿ ತಿಳಿಸಿದ್ದು ಸಾರ್ವಜನಿಕರು ರೋಮಾಂಚನಗೊಂಡರು.

ಕಾರ್ಗಿಲ್ ಯುದ್ಧ ಸೈನ್ಯ ಸೇರಲು ಯುವಜನರಿಗೆ ಪ್ರೇರಣೆ ನೀಡಿದೆ. ನಮ್ಮ ಹುತಾತ್ಮ ಯೋಧರ ಬಗ್ಗೆ ಹೆಮ್ಮೆಪಡುವ ಜತೆಗೆ ಅವರಂತೆ ದೇಶಸೇವೆ ಮಾಡಲು ಸದಾ ಸಿದ್ಧರಾಗಿರಬೇಕು. ಸೈನಿಕರಲ್ಲಿನ ಶಿಸ್ತನ್ನು ವಿದ್ಯಾರ್ಥಿಗಳು ಅನುಸರಿಸಿದರೆ ಏನನ್ನಾದರೂ ಸಾಧಿಸಬಹುದು. | ಪಿ.ಬಿ.ಶೆಟ್ಟಿ ನಿವೃತ್ತ ವಿಂಗ್ ಕಮಾಂಡರ್ ಹಾಗೂ ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿದ್ಯಾಲಯದ ಪ್ರಾಧ್ಯಾಪಕರು

ತುಮಕೂರು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ವಾಕಥಾನ್​ಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಎಸ್ಪಿ ಕೆ.ವಿ. ಅಶೋಕ್ ಚಾಲನೆ ನೀಡಿದರು. ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು, ವಿಜಯವಾಣಿ ಸಂಪಾದಕ ಕೆ.ಎನ್, ಚನ್ನೇಗೌಡ, ವಿಆರ್​ಎಲ್ ಮೀಡಿಯಾ ಲಿ.ನ ಉಪಾಧ್ಯಕ್ಷ ಕೆ.ಆರ್. ಅರುಣ್ ಮತ್ತಿತರರು ಭಾಗವಹಿಸಿದ್ದರು.

160 ಅಡಿ ರಾಷ್ಟ್ರಧ್ವಜದೊಂದಿಗೆ ವಾಕಥಾನ್

ಗಂಗಾವತಿ (ಕೊಪ್ಪಳ): ಕಾರ್ಗಿಲ್ ವಿಜಯ ದಿನದ ರಜತ ಮಹೋತ್ಸವ ಅಂಗವಾಗಿ ವಿಜಯವಾಣಿಯಿಂದ ಶುಕ್ರವಾರ ಗಂಗಾವತಿ ನಗರದಲ್ಲಿ ಸಾವಿರಾರು ವಿದ್ಯಾರ್ಥಿಗಳು 160 ಅಡಿ ಉದ್ದದ ರಾಷ್ಟ್ರಧ್ವಜ ಹಿಡಿದು ಬೃಹತ್ ವಾಕಥಾನ್ ನಡೆಸಿದರು. ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ವಾಕಥಾನ್​ಗೆ ಚಾಲನೆ ನೀಡಿದರು. ಎನ್​ಸಿಸಿ, ಸ್ಕೌಟ್ಸ್ ಆಂಡ್ ಗೈಡ್ ಪ್ರತಿನಿಧಿಗಳು ಸೇರಿ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕಾರ್ಗಿಲ್ ವಿಜಯೋತ್ಸವ ನೆನಪಿಸುವಂತೆ ದೇಶಭಕ್ತಿ ಘೊಷಣೆ ಕೂಗುತ್ತ ಹೆಜ್ಜೆ ಹಾಕಿದರು.

ದೇಶಭಕ್ತರ ಮನಸೆಳೆದ ಕಾರ್ಯಕ್ರಮ

ವಿಜಯಪುರ: ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ಮಾಜಿ ಸೈನಿಕರ ಕಲ್ಯಾಣ ಸಂಘದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ್ಗಿಲ್ ವಿಜಯೋತ್ಸವದ 25 ನೇ ವರ್ಷಾಚರಣೆ ದೇಶಭಕ್ತರ ಮನ ಸೆಳೆಯಿತು.

ಕರಡಿ ಮಜಲು, ಡೊಳ್ಳು ಕುಣಿತ, ಗೊಂಬೆ ಕುಣಿತ, ತ್ರಿವರ್ಣ ಧ್ವಜಗಳ ಹಾರಾಟ ಸೇರಿದಂತೆ ಹತ್ತು ಹಲವು ಕಲಾ ಪ್ರಕಾರಗಳು ಹಾಗೂ ಭಾರತ ಮಾತೆಯ ಉದ್ಘೋಷದೊಂದಿಗೆ ವಿಜಯೋತ್ಸವ ಜಾಥಾ ವಿಜೃಂಭಣೆಯಿಂದ ನೆರವೇರಿತು.

ಇಂದಿನ ಯುವಜನರು ಯೋಧರ ರೀತಿ ಬೆಳವಣಿಗೆ ಹೊಂದಲು ಶಿಸ್ತುಬದ್ಧ ಜೀವನಶೈಲಿ, ಛಲ, ಗುರಿಯೆಡೆಗೆ ತಲುಪಲು ಸತತ ಪ್ರಯತ್ನ, ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಇವುಗಳನ್ನು ಮಂತ್ರವನ್ನಾಗಿ ಪಠಿಸಿದ್ದಲ್ಲಿ ಗುರಿ ತಲುಪಿ ಜೀವನ ಸಾರ್ಥಕತೆ ಹೊಂದಬೇಕು. | ಕ್ಯಾ.ನವೀನ್ ನಾಗಪ್ಪ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದವರು

ಚಿಕ್ಕಮಗಳೂರಿನ ಟಿಎಂಎಸ್ ಸಂಸ್ಥೆ ಆವರಣದಲ್ಲಿ ವಿಜಯವಾಣಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ನಿವೃತ್ತ ಕ್ಯಾಪ್ಟನ್ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ಕುಶಾಲನಗರ ತಾಲೂಕು ಕೂಡಿಗೆಯಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಅಮೆ ಜನಾರ್ದನ, ಪ್ರಾಂಶುಪಾಲ ಕೆ. ಪ್ರಕಾಶ್, ವಿಜಯವಾಣಿ ಸ್ಥಾನಿಕ ಸಂಪಾದಕ ಎಂ. ಆರ್. ಸತ್ಯನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net