

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಅವರನ್ನು ಇಂದು ಭೇಟಿಯಾಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಮಾತುಕತೆ ನಡೆಸಿದ್ದಾರೆ.
ಜುಲೈ 27 (ನಾಳೆ) ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಮಮತಾ ಬ್ಯಾನರ್ಜಿ ದೆಹಲಿಗೆ ಆಗಮಿಸಿದ್ದಾರೆ. ಈ ವೇಳೆ ದೆಹಲಿ ಸಿಎಂ ನಿವಾಸಕ್ಕೆ ತೆರಳಿ ಕೇಜ್ರಿವಾಲ್ ಅವರ ಪತ್ನಿ ಮತ್ತು ಕುಟುಂಬದವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂಬಂಧ ಆಮ್ ಆದ್ಮಿ ಪಕ್ಷವು ಫೋಟೋಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
"ಸರ್ವಾಧಿಕಾರದ ವಿರುದ್ಧ 'ಇಂಡಿಯಾ' ಮೈತ್ರಿಕೂಟ ಒಗ್ಗಟಾಗಿದೆ" ಅರವಿಂದ್ ಕೇಜ್ರಿವಾಲ್ ಅವರ ಕುಟುಂಬದವರನ್ನು ಭೇಟಿಯಾಗಲು ಮಮತಾ ಇಲ್ಲಿಗೆ ಆಗಮಿಸಿದ್ದಾರೆ. ಮಮತಾ ಅವರನ್ನು ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಸ್ವಾಗತ ಕೋರಿದರು ಎಂದು ಎಎಪಿ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.
ನೀತಿ ಆಯೋಗವನ್ನು ರದ್ದುಗೊಳಿಸಿ, ಯೋಜನಾ ಆಯೋಗವನ್ನು ಮರಳಿ ತನ್ನಿ. ಯೋಜನಾ ಆಯೋಗವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕಲ್ಪನೆಯಾಗಿದೆ. ಈ ಸರ್ಕಾರವು ಆಂತರಿಕ ಕಚ್ಚಾಟದಲ್ಲಿ ಬೀಳುತ್ತದೆ ಎಂದು ಹೇಳಿದ್ದರು. ಬಂಗಾಳದಲ್ಲಿ ಬಿಜೆಪಿಯ ಸೂರ್ಯ ಮುಳುಗುತ್ತಿದೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಮೈತ್ರಿ ಗೆಲ್ಲಲಿದೆ. ಹರಿಯಾಣದಲ್ಲಿ ಬಿಜೆಪಿ ಸೋಲಲಿದೆ ಮತ್ತು ಜಾರ್ಖಂಡ್‌ನಲ್ಲಿ ಹೇಮಂತ್ ಸೋರೆನ್ ಮತ್ತೆ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜುಲೈ 27ರಂದು ನವದೆಹಲಿಯಲ್ಲಿ ನೀತಿ ಆಯೋಗದ ಆಡಳಿತ ಮಂಡಳಿ ಸಭೆ ನಡೆಯಲಿದೆ. ಈ ಸಭೆಗಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ದೆಹಲಿ ತಲುಪಿದ್ದಾರೆ. ಆದರೆ ಸಭೆಗೂ ಮುನ್ನ ಸಿಎಂ ಮಮತಾ ಬ್ಯಾನರ್ಜಿ ದೊಡ್ಡ ಆಗ್ರಹವನ್ನು ಮುಂದಿಟ್ಟಿದ್ದು ನೀತಿ ಆಯೋಗವನ್ನು ರದ್ದುಗೊಳಿಸುವಂತೆ ಕೋರಿದ್ದಾರೆ.