ನೀವು ಹೆದರಿ ಕುಳಿತರೆ ನಾವು ಬೀದಿಗಿಳಿಯಬೇಕಾಗುತ್ತೆ: ಸಿಎಂಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಾರ್ನಿಂಗ್​

Narayana gowda
Published on

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ತಮಿಳುನಾಡಿಗೆ ನೀರು ಹರಿಸಲು ಕರ್ನಾಟಕಕ್ಕೆ ಆದೇಶಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಬೇಸರ ಹೊರ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ ಗೌಡ, ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದ ಕಾವೇರಿ ನದಿ ಪ್ರಾಧಿಕಾರ ಒಂದು ಕಡೆಯಾದರೆ, ಸುಪ್ರೀಂಕೋರ್ಟಿನಲ್ಲಾದರೂ ನ್ಯಾಯ ಸಿಗಬಹುದು ಅನ್ನೋ ನಿರೀಕ್ಷೆ ಇತ್ತು. ಆದರೆ ನಮಗೆ ಆ ಬಾಗಿಲು ಸಹ ಮುಚ್ಚಿದೆ. ನಾವಿನ್ನೂ ಏನು ಮಾಡೋದಕ್ಕೆ ಸಾಧ್ಯ. ಸುಪ್ರೀಂಕೋರ್ಟ್​ ಆದೇಶ ಮತ್ತು ಕಾವೇರಿ ನದಿ ಪ್ರಾಧಿಕಾರದ ಆದೇಶವನ್ನು ಧಿಕ್ಕಾರ ಮಾಡ್ತೇವೆ ಎಂದರು.

ಇಂದು ನಮ್ಮಲ್ಲಿ ನೀರು ಇಲ್ಲದಿರುವುದನ್ನು ಇದ್ದ ಹಾಗೇ ಹೇಳಿದೆವು. ನಮ್ಮ ಡ್ಯಾಂಗಳಲ್ಲಿ ನೀರು ಖಾಲಿಯಾಗಿದೆ. ಕೇಂದ್ರದಿಂದ ಒಂದು ನಿಯೋಗ ಕಳಿಸಿ ವಸ್ತು ಸ್ಥಿತಿ ಅರ್ಥ ಮಾಡಿಕೊಳ್ಳಿ ಎಂದು ಹೇಳಿದರೂ ಕೂಡ ಇಂತಹ ಆದೇಶ ಕೂಡ್ತಿದ್ದಾರೆ. ನಾವು ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಿದ್ದೇವೆ. ನಾಡಿನ ಜನ ಕಾನೂನು ಧಿಕ್ಕರಿಸಿ ಹೋರಾಟ ಮಾಡಿ ಬೀದಿಗೆ ಇಳಿಯಲು ಸಜ್ಜಾಗಿದ್ದೇವೆ ಎಂದು ಹೇಳಿದರು.

ಹಿಂದೆ ಬಂಗಾರಪ್ಪ ಅವರು ಸುಗ್ರೀವಾಜ್ಞೆ ಜಾರಿಗೆ ತಂದು ಸೆಡ್ಡು ಹೊಡೆದು ನಿಂತರು. ಅದೇ ತರ ಕನ್ನಡಿಗರ ಸ್ವಾಭಿಮಾನ ಕಾಪಾಡಲು ಈಗ ಸಿಎಂ ಗಟ್ಟಿ ನಿರ್ಧಾರ ತರಬೇಕು. ನೀವು ಹೆದರಿಕೊಂಡು ಕುಳಿತರೆ ನಾವು ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ. ನಮ್ಮ ರಾಜ್ಯ ಸರ್ಕಾರ, ಸುಪ್ರೀಂಕೋರ್ಟಿಗೆ ಸರಿಯಾಗಿ ಮಾನವರಿಕೆ ಮಾಡಿಕೊಡಲು ವಿಫಲವಾಗಿದೆ. ಈ ಸರ್ಕಾರ ಮಾತ್ರವಲ್ಲ ಹಿಂದೆಯೂ ಕೂಡ ಹೀಗೆ ಆಗಿದೆ. ಕಾವೇರಿ ವಿಚಾರದಲ್ಲಿ ವಾದ ಮಾಡುವವರು ಸರಿಯಾಗಿ ಮಾಡಿಲ್ಲ ಎಂದು ತಿಳಿಸಿದರು.

ಕೇಂದ್ರದ ಮೇಲೆ ಒತ್ತಡ ಹಾಕುವಲ್ಲಿ ನಮ್ಮ ಸಂಸದರು ವಿಫಲ ಆಗಿದ್ದಾರೆ. ಕಾವೇರಿ ವಿಚಾರದಲ್ಲಿ ತಮಿಳುನಾಡು ಒಂದು ಹೆಜ್ಜೆ ಮುಂದೆ ಇರುತ್ತದೆ. ಅವರು ಕೋರ್ಟಿಗೆ ಹೋದ ಮೇಲೆ ನಮ್ಮವರು ಹೋಗಿ ನಿಲ್ಲುತ್ತಾರೆ. ನಾವು ಕಾನೂನು ಕೈಗೆತ್ತಿಕೊಂಡು ಹೋರಾಟ ಮಾಡಲು ಸಿದ್ಧರಿದ್ದೇವೆ. 12.30ರ ಹೊತ್ತಿಗೆ ವಿಧಾನಸೌಧ ಮುತ್ತಿಗೆ ಹಾಕ್ತೇವೆ. ಸುಪ್ರೀಂ ಕೋರ್ಟ್​ಗೆ ವಸ್ತು ಸ್ಥಿತಿ ಅರ್ಥ ಮಾಡಿಸುವಲ್ಲಿ ಕರ್ನಾಟಕ ಸರ್ಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net