ಕೇಳೋದಷ್ಟು ಮಾಡೋದು ಹೀಗೆ… ಲಾಭ ಕಾಣದ ಬಾಲಿವುಡ್​ ಸೋಲಿಗೆ ಇದೇ ಕಾರಣ: ಕರಣ್ ಜೋಹರ್​

ವಿಜಯವಾಣಿ - 2024-07-09T084909.998
Published on

ಮುಂಬೈ: ಈ ಹಿಂದಿನಿಂದಲೂ ತಮ್ಮ ನೇರನುಡಿ ಮತ್ತು ಸ್ಫೋಟಕ ಸಂಗತಿಯನ್ನು ಬಹಿರಂಗವಾಗಿ ಹೇಳುವುದಕ್ಕೆ ಹೆಚ್ಚು ಹೆಸರುವಾಸಿಯಾಗಿರುವ ಬಾಲಿವುಡ್​ನ ಸ್ಟಾರ್ ನಿರ್ದೇಶಕ ಹಾಗೂ ನಿರ್ಮಾಪಕರಾದ ಕರಣ್ ಜೋಹರ್, ಇದೀಗ ಮತ್ತೊಂದು ಶಾಕಿಂಗ್ ವಿಷಯವನ್ನು ಚಿತ್ರರಂಗದವರ ಮುಂದೆ ತೆರೆದಿಟ್ಟಿದ್ದಾರೆ. ಇತರೆ ಸಿನಿ ಇಂಡಸ್ಟ್ರಿ ಬಾಕ್ಸ್ ಆಫೀಸ್​ನಲ್ಲಿ ಮಾಡುತ್ತಿರುವ ಕಮಾಲ್​ ನಮ್ಮ ಚಿತ್ರರಂಗ ಏಕೆ ಮಾಡುತ್ತಿಲ್ಲ ಎಂಬುದನ್ನು ತಮ್ಮ ಶೈಲಿಯಲ್ಲೇ ಖಡಕ್ ಆಗಿ ತಿಳಿಸಿದ್ದಾರೆ.

ಇತ್ತೀಚಿಗೆ ನಡೆದ ಪೋಡ್​ಕಾಸ್ಟ್​ನಲ್ಲಿ ಚಿತ್ರರಂಗದ ವ್ಯಾಪರ-ವಹಿವಾಟು ಕುರಿತು ಮುಕ್ತವಾಗಿ ಮಾತನಾಡಿದ ಕರಣ್ ಜೋಹರ್, "ಮೊದಲನೆಯದಾಗಿ, ಸಿನಿಪ್ರೇಕ್ಷಕರ ಅಭಿರುಚಿಗಳು ಬಹಳ ನಿರ್ಣಾಯಕವಾಗಿವೆ. ಅವರಿಗೆ ತಾವು ನೋಡುವ ಸಿನಿಮಾ ಹೀಗೆ ಇರಬೇಕು ಎಂದು ಬಯಸುತ್ತಾರೆ. ಒಬ್ಬ ನಿರ್ಮಾಪಕರಾಗಿ ಹೆಚ್ಚಿನ ಸಂಖ್ಯೆಯ ಗುರಿಯನ್ನು ನೀವು ಹೊಂದಿದ್ದೀರಾ ಎಂದರೆ, ಖಂಡಿತ ನಿಮ್ಮ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ ಎ, ಬಿ ಮತ್ತು ಸಿ ಫಾರ್ಮೆಟ್​ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಕೇವಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಅಬ್ಬರಿಸಿದರೆ ಸಾಲದು" ಎಂದು ಖಾರವಾಗಿ ನುಡಿದರು.

"ಪ್ರಸ್ತುತ ಬಾಲಿವುಡ್​ನಲ್ಲಿ 10 ಸಮರ್ಥ ನಟರಿದ್ದಾರೆ. ಇವರಿಂದಲೇ ಎಲ್ಲವನ್ನೂ ನಿರೀಕ್ಷಿಸಬೇಕಿದೆ. ಈಗ ಹಣದುಬ್ಬರದಿಂದಾಗಿ ಸಿನಿಮಾ ನಿರ್ಮಾಣದ ಖರ್ಚು-ವೆಚ್ಚಗಳು ದುಬಾರಿಯಾಗುವುದರ ಜತೆ ಆಯಾ ನಟರು ತಮ್ಮ ಪಾತ್ರವರ್ಗಕ್ಕೆ ಮುಂದಿಡುವ ಬೇಡಿಕೆ ದೊಡ್ಡ ಹೊಡೆತವನ್ನೇ ನೀಡುತ್ತಿದೆ. ಒಂದು ಸಿನಿಮಾದಲ್ಲಿ ನಟಿಸಲು 35 ಕೋಟಿ ರೂ. ಸಂಭಾವನೆ ಕೇಳುವ ಇವರು, ಬಾಕ್ಸ್ ಆಫೀಸ್​ನಲ್ಲಿ 3.5 ಕೋಟಿ ರೂಪಾಯಿ ವ್ಯವಹಾರ ಮಾಡಲ್ಲ. ಹೀಗಾದರೆ ಹೇಗೆ? ದೊಡ್ಡ ಮಟ್ಟದ ಮೊತ್ತವನ್ನು ಕೇಳುವ ನಟರಿಗೆ ಹಣ ಕೊಟ್ಟು, ಸಿನಿಮಾ ಮಾಡಿದ ಬಳಿಕ ಅದು ಸಿನಿಪ್ರೇಕ್ಷಕರ ಮುಂದೆ ಗೆಲ್ಲಲಿಲ್ಲ ಎಂದರೆ ಮುಂದೇನು? ದೊಡ್ಡ ನಷ್ಟವನ್ನೇ ಭರಿಸಿಬೇಕಿದೆ" ಎಂದು ಹೇಳಿದರು.

"ಈಗ ಚಿತ್ರರಂಗ ಹೇಗಿದೆ ಎಂದರೆ, ಪ್ರಸ್ತುತ ಟ್ರೆಂಡ್ ಏನಿದೆಯೋ ಅದರೊಂದಿಗೆ ಹೋಗುವುದು. 'ಜವಾನ್', 'ಪಠಾಣ್'​ನಂತಹ ಆ್ಯಕ್ಷನ್ ಸಿನಿಮಾ ಕಮಾಲ್ ಮಾಡಿದ್ರೆ ಮುಗಿತು. ಮುಂದಿನ ಚಿತ್ರಗಳಲ್ಲೆವೂ ಅದೇ ರೀತಿ ಇರಬೇಕು, ಅದರಂತೆಯೇ ಮಾಡಬೇಕು ಎಂದು ನಿರ್ಧರಿಸಲಾಗುವುದು. ಎಲ್ಲರೂ ಅದೇ ದಾರಿ ಹಿಡಿಯುತ್ತಾರೆ. ಅಕಸ್ಮಾತ್​ ಲವ್​ ಜಾನರ್​ ಒಳಗೊಂಡ ಫಿಲಂ ಬ್ಲಾಕ್​​ಬಸ್ಟರ್​ ಆದ್ರೆ, ಮುಂದಿನ ಸಿನಿಮಾಗಳು ಸಹ ಅದೇ ಜಾನರ್​ನಲ್ಲೇ ತಯಾರಾಗಲು ಸಜ್ಜಾಗುತ್ತವೆ. ಈಗ ಸಮಯ ಬದಲಾಗಿದೆ. ಜನರು ಖುಷಿ, ಉತ್ತಮ ವಿಷಯಗಳನ್ನು ಹೊತ್ತು ತರುವ ಭಾರತೀಯ ಸಿನಿಮಾಗಳಿಗಾಗಿ ಎದುರುನೋಡುತ್ತಿದ್ದಾರೆ. ಇದರ ಬಗ್ಗೆ ನಾವ್ಯಾರು ಏಕೆ ಗಮನಹರಿಸುತ್ತಿಲ್ಲ ಎಂಬುದು ನನ್ನ ಅನಿಸಿಕೆ" ಎಂದು ಕರಣ್ ಜೋಹರ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net