ಕರೊನಾ ಆತಂಕದಲ್ಲಿ ಕನ್ವರ್ ಯಾತ್ರೆ: ಆರೋಗ್ಯ, ಬದುಕುವ ಹಕ್ಕು ಪರಮೋಚ್ಛ ಎಂದ ಸುಪ್ರೀಂ ಕೋರ್ಟ್​

kanwar
Published on

ನವದೆಹಲಿ : ಆರೋಗ್ಯ ಮತ್ತು ಬದುಕಿನ ಹಕ್ಕು ಎಲ್ಲಕ್ಕೂ ಮಿಗಿಲಾದುದು ಎಂದು ಸುಪ್ರೀಂ ಕೋರ್ಟ್ ಇಂದು ಅಭಿಪ್ರಾಯಪಟ್ಟಿತು. ಕರೊನಾ ಆತಂಕದ ನಡುವೆ ಕನ್ವರ್​ ಯಾತ್ರೆ ನಡೆಸಲು ಅನುಮತಿ ನೀಡಿರುವ ತನ್ನ ನಿರ್ಧಾರವನ್ನು ಪುನರ್​ಪರಿಶೀಲಿಸಲು, ಉತ್ತರ ಪ್ರದೇಶ ಸರ್ಕಾರಕ್ಕೆ ಸೋಮವಾರದವರೆಗೆ ಸಮಯ ನೀಡಿತು.

"ನಾವೆಲ್ಲಾ ಭಾರತದ ನಾಗರೀಕರು. ಸಂವಿಧಾನದ ಪರಿಚ್ಛೇದ 21 - ಬದುಕುವ ಹಕ್ಕು - ಎಲ್ಲರಿಗೂ ಅನ್ವಯಿಸುತ್ತದೆ. ಕನ್ವರ್​ ಯಾತ್ರೆ ನಡೆಸುವ ನಿರ್ಧಾರದೊಂದಿಗೆ ಯುಪಿ ಸರ್ಕಾರ ಮುಂದುವರೆಯಲು ಸಾಧ್ಯವಿಲ್ಲ. ನೂರಕ್ಕೆ ನೂರು ಭಾಗ" ಎಂದು ಕನ್ವರ್ ಯಾತ್ರೆ ಆಯೋಜನೆಯ ವಿಚಾರವನ್ನು ಸುಯೋ ಮೋಟೋ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ಆರ್​.ಎಫ್​.ನಾರೀಮನ್​ ಖಡಕ್​ ಆಗಿ ಹೇಳಿದರು.

ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ ನ್ಯಾಯಮೂರ್ತಿ ನಾರಿಮನ್ ಮತ್ತು ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ವಿಭಾಗೀಯ ಪೀಠ, ಭೌತಿಕವಾಗಿ ಯಾತ್ರೆಯನ್ನು ನಡೆಸುವ ಬಗೆಗಿನ ತನ್ನ ನಿರ್ಧಾರವನ್ನು ಮತ್ತೆ ಪರಿಗಣಿಸಲು ರಾಜ್ಯಕ್ಕೆ ಮತ್ತೊಂದು ಅವಕಾಶ ನೀಡುತ್ತಿರುವುದಾಗಿಯೂ, ಇಲ್ಲದಿದ್ದರೆ ತನ್ನ ಆದೇಶವನ್ನು ಹೊರಡಿಸುವುದಾಗಿಯೂ ಹೇಳಿತು.

"ನಮ್ಮ ಅಭಿಪ್ರಾಯವೆಂದರೆ, ಇದು ನಮ್ಮೆಲ್ಲರಿಗೂ ಸಂಬಂಧಪಟ್ಟಿದ್ದು, ಮತ್ತು ಬದುಕುವ ಹಕ್ಕಿನ ಮೇಲೆ ಮಹತ್ವದ ಪರಿಣಾಮ ಬೀರುವಂಥದ್ದು. ಭಾರತದ ನಾಗರೀಕರ ಆರೋಗ್ಯಮತ್ತು ಬದುಕುಳಿಯುವ ಹಕ್ಕು ಪರಮೋಚ್ಛವಾದುದು. ಉಳಿದೆಲ್ಲಾ ಭಾವನೆಗಳು, ಧಾರ್ಮಿಕವಾದುದೇ ಆಗಲಿ, ಈ ಹಕ್ಕಿನ ನಂತರ ಬರುವಂಥವು" ಎಂದು ನ್ಯಾಯಪೀಠ ಹೇಳಿತು.

ವಿಚಾರಣೆಯ ವೇಳೆ ಯುಪಿ ಸರ್ಕಾರವು, ಸಾಂಕೇತಿಕ ಯಾತ್ರೆಗೆ ಅವಕಾಶ ನೀಡಲಿದ್ದು, ಕೇವಲ ಪೂರ್ಣವಾಗಿ ಲಸಿಕೆ ಪಡೆದಿರುವ ಜನರು ಮಾತ್ರ ಭಾಗವಹಿಸಬಲ್ಲರು ಎಂದು ಹೇಳಿತು. ಕೇಂದ್ರ ಸರ್ಕಾರ, ಧಾರ್ಮಿಕ ಭಾವನೆಗಳನ್ನು ಪರಿಗಣಿಸಿ, ರಾಜ್ಯಗಳು ಗಂಗಾ ಜಲವನ್ನು ಟ್ಯಾಂಕರ್​ಗಳಲ್ಲಿ ಭಕ್ತರಿಗೆ ಒದಗಿಸಬೇಕು. ಸಾಮಾಜಿಕ ಅಂತರ ಮತ್ತು ಇತರ ಕೋವಿಡ್ ಪ್ರೋಟೋಕಾಲ್​ಗಳನ್ನು ಪಾಲಿಸಬೇಕು ಎಂದಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net