

ಬೆಂಗಳೂರು: ಕಣ್ವ ಸೌಹರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಡೆಟ್ ಮತ್ತು ಕಣ್ವ ಸಮೂಹ ಸಂಸ್ಥೆ ವಂಚನೆ ಪ್ರಕರಣದಲ್ಲಿ ಆರೋಪಿತರ ಹೆಸರಿನಲ್ಲಿ ಇರುವ ಆಸ್ತಿಗಳ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಸಿಐಡಿ ಕೋರಿದೆ.
ಹೆಚ್ಚಿನ ಬಡ್ಡಿ ಕೊಡುವುದಾಗಿ ಆಮಿಷವೊಡ್ಡಿ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ ಆರೋಪದ ಮೇಲೆ ಕಣ್ವ ಸಮೂಹ ಸಂಸ್ಥೆಗಳ ವಿರುದ್ಧ 2020ರಲ್ಲಿ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ. ಅಧ್ಯಕ್ಷ ನಂಜುಂಡಯ್ಯ ಸೇರಿದಂತೆ ಇತರ ಆರೋಪಿಗಳ ವಿರುದ್ಧ 21 ಪ್ರಕರಣಗಳು ದಾಖಲಾಗಿದ್ದು, ಇದರ ಹೆಚ್ಚಿನ ತನಿಖೆಯನ್ನು ಸಿಐಡಿ ವಹಿಸಿಕೊಂಡಿದೆ.
ಹೂಡಿಕೆದಾರ ಹಣದಲ್ಲಿ ಆರೋಪಿತರು ರಾಜ್ಯದ ವಿವಿಧೆಡೆ ಸ್ಥಿರಾಸ್ತಿ ಮತ್ತು ಚರಾಸ್ತಿ ಸಂಪಾದನೆ ಮಾಡಿದ್ದಾರೆ. ಆದರೆ, ನಿಗದಿತ ಸಮಯದಲ್ಲಿ ಹೂಡಿಕೆದಾರರಿಗೆ ಬಡ್ಡಿ ಮತ್ತು ಅಸಲಿ ಕೊಡದೆ ಮೋಸ ಮಾಡಿರುವುದು ತನಿಖೆ ವೇಳೆ ಕಂಡುಬಂದಿದೆ. ಈಗಾಗಲೇ ಸಿಐಡಿ 426 ಕೋಟಿ 19 ಲಕ್ಷ ರೂ. ಮೌಲ್ಯದ 118 ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ.
ಇದಲ್ಲದೆ, ಹೂಡಿಕೆದಾರರು ಮತ್ತು ಸಾರ್ವಜನಿಕರು ಸಿಐಡಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ದೂರು ಸಲ್ಲಿಸುತ್ತಿದ್ದಾರೆ. 10,125 ಹೂಡಿಕೆದಾರರಿಂದ ಅಂದಾಜು 500 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡಿರುವುದು ತನಿಖೆಯಲ್ಲಿ ಕಂಡುಬಂದಿದೆ.
ಇನ್ನೂ ಕಣ್ವ ಗ್ರೂಪ್ ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ಸಿದ್ದೇಗೌಡ, ಸಿಇಒ ಎಚ್.ಡಿ.ಪ್ರಶಾಂತಕುಮಾರ್, ನಿರ್ದೇಶಕರಾದ ವಿಜಯಕುಮಾರ್, ನವೀನ್‌ಕುಮಾರ್, ಲಿಂಗರಾಜು ಮತ್ತು ಇತರ ನಿರ್ದೇಶಕರು, ಸಿಬ್ಬಂದಿ ಹೆಸರಿನಲ್ಲಿ ಯಾವುದಾದರೂ ಆಸ್ತಿಗಳ ಮಾಹಿತಿ ದೊರೆತರೆ ಸಿಐಡಿ ತನಿಖಾಧಿಕಾರಿ ಕೆ.ಟಿ. ರಮೇಶ್‌ಗೆ ಸಲ್ಲಿಸುವಂತೆ ಕೋರಲಾಗಿದೆ. ಸಿಐಡಿ ಘಟಕ ಮೊಬೈಲ್ ನಂಬರ್ 99641-88636 ಗೆ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ಒಳಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.