

ಕಾನ್ಪುರ: ಇಲ್ಲಿನ 8 ಪೊಲೀಸರ ಹತ್ಯೆ ಪ್ರಕರಣದ ತನಿಖೆ ಚುರುಕಾಗಿ ಸಾಗುತ್ತಿದ್ದು, ನಿನ್ನೆ ಪೊಲೀಸರು ಪ್ರಮುಖ ಆರೋಪಿ, ಗ್ಯಾಂಗ್ಸ್ಟರ್ ವಿಕಾಸ್ ದುಬೆಯ ಸಹಚರ ದಯಾ ಶಂಕರ್ ಅಗ್ನಿಹೋತ್ರಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ವಿಕಾಸ್ ದುಬೆಗೆ ಪೊಲೀಸ್ ವಲಯದಲ್ಲೇ ಹಲವು ಜನರ ಹಿಂಬಾಲಕರು ಇದ್ದಾರೆ. ಬಂಧನದ ಮಾಹಿತಿಯನ್ನು ಚೌಬೆಪುರ ಪೊಲೀಸ್ ಠಾಣೆಯಿಂದಲೇ ಕರೆ ಮಾಡಿ ತಿಳಿಸಲಾಗಿತ್ತು. ಹಾಗಾಗಿ ಮೊದಲೇ ವಿಕಾಸ್ ದುಬೆ ತನ್ನ ಜನರನ್ನು, ಮಾರಕಾಸ್ತ್ರಗಳನ್ನು ಸಿದ್ಧಪಡಿಸಿದ್ದ ಎಂದು ಅಗ್ನಹೋತ್ರಿ ತಿಳಿಸಿದ್ದ.
ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಇಬ್ಬರು ಸಬ್ ಇನ್ಸ್ಪೆಕ್ಟರ್ಗಳು ಹಾಗೂ ಓರ್ವ ಪೇದೆಯನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಸಬ್ ಇನ್ಸ್ಪೆಕ್ಟರ್ಗಳಾದ ಕನ್ವರ್ಪಾಲ್, ಕೃಷ್ಣಕುಮಾರ್ ಶರ್ಮಾ ಮತ್ತು ಪೇದೆ ರಾಜೀವ್ ಎಂಬುವರನ್ನು ಕರ್ತವ್ಯ ಲೋಪದ ಆರೋಪದಡಿ ಅಮಾನತು ಮಾಡಲಾಗಿದೆ. ವಿಚಾರಣೆಯನ್ನೂ ಪ್ರಾರಂಭಿಸಲಾಗಿದೆ ಎಂದು ಕಾನ್ಪುರ ಎಸ್ಎಸ್ಪಿ ದಿನೇಶ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಎಂಟು ಪೊಲೀಸರನ್ನು ಕೊಂದ ವಿಕಾಸ್ ದುಬೆಯದ್ದು ಮನೆಯಲ್ಲ, ಮದ್ದುಗುಂಡಿನ ಕಾರ್ಖಾನೆ; ಇಡೀ ಪ್ರದೇಶ ಸ್ಫೋಟಕ್ಕೆ ಸಂಚು
8 ಪೊಲೀಸರ ಹತ್ಯೆ ಪ್ರಕರಣದ ವಿಚಾರಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ವತಃ ಗಮನಹರಿಸುತ್ತಿದ್ದಾರೆ. ಈಗಾಗಲೇ ಚೌಬೇಪುರ ಠಾಣಾಧಿಕಾರಿ ವಿನಯ್ ತಿವಾರಿ ಎಂಬುವರನ್ನು ಅಮಾನತು ಮಾಡಿ, ವಿಚಾರಣೆಗೆ ಒಳಪಡಿಸಲಾಗಿದೆ. ಈ ಪೊಲೀಸ್ ಎನ್ಕೌಂಟರ್ ಪ್ರಕರಣವನ್ನು ಬಗೆದಷ್ಟೂ ಪೊಲೀಸ್ ಸಿಬ್ಬಂದಿಯ ಕಾಲಬುಡಕ್ಕೇ ಬರುತ್ತಿದೆ. ಅದಿನ್ನೆಷ್ಟು ಜನರ ಕೈವಾಡ ಇದೆಯೋ ಎಂಬ ಅನುಮಾನ ವ್ಯಕ್ತವಾಗಿದೆ. (ಏಜೆನ್ಸೀಸ್)