

ಪೋರ್ಟ್ಲ್ಯಾಂಡ್: ಯುಗಾದಿ ಭಾರತೀಯರ ಹಬ್ಬ. ಆದರೆ ಭಾರತದ ನೆಲೆ ಬಿಟ್ಟು ಬೇರೆ ದೇಶದಲ್ಲಿ ನೆಲೆಸಿರುವ ಅದೆಷ್ಟೋ ಭಾರತೀಯರು ಈ ಹಬ್ಬವನ್ನು ಮಿಸ್ ಮಾಡಿಕೊಳ್ಳುವುದಂತೂ ಸುಳ್ಳಲ್ಲ. ವಿದೇಶಗಳಲ್ಲಿರುವ ಅನೇಕ ಭಾರತೀಯ ಸಂಘಟನೆಗಳು ಈ ಹಬ್ಬವನ್ನು ಆಚರಿಸುವುದೂ ಉಂಟು. ಅದೇ ರೀತಿ ಈ ಬಾರಿ ಅಮೆರಿಕದಲ್ಲೂ ಯುಗಾದಿ ಆಚರಣೆ ಮಾಡಲಾಗಿದೆ.
ಅಮೆರಿಕದ ಪೋರ್ಟ್ ಲ್ಯಾಂಡ್ನಲ್ಲಿ ಕನ್ನಡ ಕೂಟದವರು ಯುಗಾದಿಯನ್ನು ಅತಿ ವಿಷೇಶವಾಗಿ ಆಚರಿಸಿದ್ದಾರೆ. ಇಡಿ ಪ್ರಪಂಚವೇ ಕೊರೊನಾದಿಂದ ನಲುಗಿರುವಾಗ ಸಂಪೂರ್ಣ ಆನ್ ಲೈನ್ ಮೂಲಕ “ಪ್ಲವ ವೈಭವೆ” ಎಂಬ ಶೀರ್ಶಿಕೆಯಡಿ ಇದೇ ಮೇ 1ರಂದು, ಪುರಾತನ ಕಾಲದಿಂದಲೂ ಜೀವಂತವಾಗಿರುವ ಕರ್ನಾಟಕದ ಹಲವಾರು ಅಪೂರ್ವ ಜಾನಪದ ಪ್ರಕಾರಗಳನ್ನು ಮೆಲುಕುಹಾಕುವ ಮೂಲಕ ಅತ್ಯಂತ ವಿಷೇಶವಾಗಿ ಹಬ್ಬ ಆಚರಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಮಂಗಳೂರು ದಸರಾ ಹಬ್ಬದ ಹುಲಿವೇಷ, ಹಂಪಿಯ ಬುಡ್ಗ ಜಂಗಮದ ಹಗಲುವೇಷ, ರಂಗು ರಂಗಿನ ಕೋಲುಗಳ ಕೋಲಾಟ, ತಾಮ್ರದ ತಾಳಗಳೊಡನೆ ಕಂಸಾಳೆ, ದಾಂಡೇಲಿಯ ಕಾಡಿನ ವಿಜಯದಶಮಿ ಗೌಲೀ ನೃತ್ಯ, ರಂಗು ರಂಗಿನ ಸೀರೆಗಳೊಡನೆ ಜಡೆಕೋಲಾಟ, ಪ್ರಸಿದ್ಧ ಜಾನಪದ ಶೈಲಿಯ ಗೊರವರ ಕುಣಿತ, ಕರ್ನಾಟಕದ ಪಶ್ಚಿಮ ಘಟ್ಟ ಕಾಡುಗಳ ಸೋಲಿಗರ ಕುಣಿತ, ಕೊಡವರ ಉಮ್ಮಟ್ ಆಟ್- ವಾಲಗ, ಲಂಬಾಣಿ ನೃತ್ಯ, ಹಾಗು ಡೊಳ್ಳು ನುಡಿಸುತ್ತ ಕುಣಿತ ಹೀಗೆ ನಮ್ಮ ಜನಪದ ಗತ ವೈಭವವನ್ನು ಮತ್ತೊಮ್ಮೆ ಧರೆಗಿಳಿಸಲಾಗಿದೆ.
ನೃತ್ಯಗಳಲ್ಲೇ ಇಷ್ಟೊಂದು ಮಾದರಿಯಾದರೆ, ರಾಷ್ಟ್ರಕವಿ ಕುವೆಂಪು ಮತ್ತು ದೊಡ್ಡರಂಗೇ ಗೌಡರ ಭಾವಗೀತೆ, ಮೈಸೂರು ರಾಜರಿಗಾಗಿ ರಚಿಸಿದ ಕೃತಿ, ಗಂಡು ಹೆಣ್ಣಿನ ಹಾಸ್ಯ ವಾಗ್ವಾದದ ಗೀ ಗೀ ಪದ, ಸುಗ್ಗಿ ಹಾಡು, ಡಾ.ಡಿ.ವಿ.ಗುಂಡಪ್ಪ ಅವರು ರಚಿಸಿರುವ ಮಂಕುತಿಮ್ಮನ ಕಗ್ಗಗಳು, ವಾದ್ಯಗಳಲ್ಲಿ ಪಿಳ್ಳಾರಿ ಗೀತೆಗಳು, ಉತ್ತರ ಕರ್ನಾಟಕದ ಸೋಬಾನೆ ಪದ, ಹಾಗೂ ಭಕ್ತಿಯನ್ನು ಹಂಚುವ ಭಜನೆಗಳನ್ನೂ ಹಾಡಿ ರಂಜಿಸಲಾಯಿತು.
ಈ ಎಲ್ಲ ನೃತ್ಯ ಗೀತೆಗಳ ಜತೆ, ಕೊರವಂಜಿ ಹೇಳೋ ಕಣಿ, ಉತ್ತರ ಕರ್ನಾಟಕದ ಜಗ್ಗಹಲಗಿ ಮೆರವಣಿಗೆ, ಭವಿಷ್ಯ ಹೇಳೋ ದಾಸಯ್ಯನ ಬುಡಬುಡಿಕೆ, ಮಹಾಭಾರತದ ಸನ್ನಿವೇಶದ ಹರಿ ಕಥೆ, ಹಾಗೂ ಶ್ರೀ ಕೃಷ್ಣ ಪಾರಿಜಾತ ಬಯಲಾಟದ ನಾಟಕ ಹಾಗು ನೃತ್ಯಗಳು ನೋಡುಗರ ಮನ ಸೆಳೆದವು.
ಜತೆಗೆ ಕಾವ್ಯ ವಾಚನ, ವಚನ ವಾಚನ, ಕನ್ನಡದ ಗಾದೆಗಳನ್ನ ಕೊಲ್ಯಾಜ್ ಮೂಲಕ ತೋರಿಸೋ ಸ್ಪರ್ಧೆಗಳನ್ನು ಅಯೋಜಿಸಿ ನಂತರ ವಿಜೇತರಿಗೆ ವಿಷೇಶವಾಗಿ ನಮ್ಮ ಚನ್ನಪಟ್ಟಣದ ಅಲಗುಳಿ ಮಣಿ, ಚೌಕಾ-ಬಾರ, ಪಗಡೆ, ಬುಗರಿ ಜತೆಗೆ ಮನೆಯನ್ನು ಅಲಂಕರಿಸುವ ಅನೇಕ ಸಾಮಾಗ್ರಿಗಳನ್ನು ಕರ್ನಾಟಕದಿಂದ ಆಮದು ಮಾಡಿಕೊಂಡು ಬಹುಮಾನವಾಗಿ ನೀಡಲಾಗಿದೆ.