

ಮುಂಬೈ: ಸಾಮಾನ್ಯವಾಗಿ ಮದುವೆ ಎಂದರೆ ಹೆಣ್ಣಿಗೆ ಗಂಡು ತಾಳಿ ಕಟ್ಟಬೇಕು. ಆದರೆ ಈ ಕಥೆ ಸ್ವಲ್ಪ ವಿಚಿತ್ರವೇ. ಇಲ್ಲಿ ಹೆಣ್ಣಿಗೆ ಗಂಡು ತಾಳಿ ಕಟ್ಟುವ ಜತೆ ಗಂಡಿಗೆ ಹೆಣ್ಣೂ ತಾಳಿ ಕಟ್ಟಿದ್ದಾಳೆ. ಸ್ತ್ರೀ ಸಮಾನತೆಗಾಗಿ ಈ ರೀತಿ ಹೊಸ ಸಂಪ್ರದಾಯ ಆರಂಭಿಸಬೇಕೆಂದು ವರನೇ ಹಠ ಮಾಡಿದ್ದಾಗಿ ಹೇಳಲಾಗಿದೆ.
ಆತನ ಹೆಸರು ಶಾರ್ದೂಲ್ ಕದಮ್. ಕಾಲೇಜಿನಲ್ಲಿ ಒಟ್ಟಿಗೇ ಓದಿದ್ದ ತನುಜಾಳನ್ನು ಕಾಲೇಜು ಮುಗಿದು ನಾಲ್ಕು ವರ್ಷಗಳ ನಂತರ ಪ್ರೀತಿಸಲು ಆರಂಭಿಸಿದ್ದ. ಪರಸ್ಪರ ಪ್ರೀತಿ ಹಂಚಿಕೊಂಡಿದ್ದ ಜೋಡಿ 2020ರಲ್ಲಿ ಹಸೆಮಣೆ ಏರುವ ನಿರ್ಧಾರ ಮಾಡಿತ್ತು. ಆದರೆ ತನುಜಾ ಬಳಿ ತಾನು ಅಪ್ಪಟ ಸ್ತ್ರೀಸಮಾನತಾವಾದಿ ಎಂದು ಹೇಳಿಕೊಂಡಿದ್ದ ಶಾರ್ದೂಲ್ ಮದುವೆಗೆ ಮೊದಲು ಹೊಸ ಹಠ ಹಿಡಿದಿದ್ದಾನೆ. ನಾನು ಮದುವೆಯಾಗುತ್ತೇನೆ, ಆದರೆ ಮದುವೆಯಲ್ಲಿ ನಾನು ನಿನಗೆ ಹೇಗೆ ತಾಳಿ ಕಟ್ಟುತ್ತೇನೋ ಹಾಗೇ ನೀನೂ ನನಗೆ ತಾಳಿ ಕಟ್ಟಬೇಕು ಎಂದು ಹೇಳಿದ್ದಾನೆ.
ಮನೆಯವರು ಎಷ್ಟೇ ಹೇಳಿದರೂ ಶಾರ್ದೂಲ್ ತನ್ನ ವಾದ ಬಿಟ್ಟುಕೊಟ್ಟಿಲ್ಲ. ಕೊನೆಗೆ ಮನೆಯವರೆಲ್ಲರ ಒಪ್ಪಿಗೆ ಮೇರೆಗೆ ಆತನ ಇಷ್ಟದಂತೆಯೇ ಮದುವೆ ಮಾಡಲಾಗಿದೆ. ತನುಜ ಶಾರ್ದೂಲ್ಗೆ ತಾಳಿ ಕಟ್ಟಿದ್ದಾಳೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.