ಕೇದಾರ ಗಿರಿಯಲ್ಲಿ ಕನ್ನಡಿಗರ ಪಾರುಪತ್ಯ: ಉತ್ತರಾಖಂಡದ ಹಿಮಪ್ರದೇಶದಲ್ಲಿ ಕನ್ನಡದ ಘಮಲು

Kedaranatha
Published on
ನವೆಂಬರ್ ತಿಂಗಳಿನಲ್ಲಿ ಸಾಮಾನ್ಯವಾಗಿ ರಾಜ್ಯ, ಹೊರರಾಜ್ಯ, ಹೊರದೇಶಗಳಲ್ಲೂ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆದರೆ ವರ್ಷದ ಹನ್ನೆರಡು ತಿಂಗಳೂ ಉತ್ತರದ ತುದಿಯಲ್ಲಿರುವ ಹಿಮಾಲಯ ಪರ್ವತದಲ್ಲಿ ಕನ್ನಡ ನಿನಾದ ಅನುರಣಿಸುತ್ತಿರುವುದು ಕನ್ನಡಿಗರು ಅಭಿಮಾನಪಡುವ ಸಂಗತಿ. ಇದಕ್ಕೆ ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆ ಇದೆ.

| ಪ್ರಶಾಂತ ರಿಪ್ಪನ್​ಪೇಟೆ

ಅಖಂಡ ಭಾರತದ ಮುಕುಟಮಣಿಯಂತೆ ಶೋಭಿಸುತ್ತಿರುವ ಹಿಮಾಲಯಕ್ಕೆ ‘ಕೈಲಾಸ ಪರ್ವತ’ ಎಂಬುದು ಪ್ರಾಚೀನ ಕಾಲದಿಂದಲೂ ಬಂದಿರುವ ಅನ್ವರ್ಥಕ ನಾಮ. ಭೌಗೋಳಿಕವಾಗಿ ದೇಶದ ರಕ್ಷಾಕವಚದಂತಿರುವ ಹಿಮಾಲಯವು ‘ದೇವಭೂಮಿ’ ಎಂದೇ ಪ್ರಸಿದ್ಧ. ಅದಕ್ಕೆ ಸಾಕ್ಷಿ ಎಂಬಂತೆ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಕೇದಾರನಾಥನ ದಿವ್ಯತಾಣ ಇರುವ ಪವಿತ್ರ ಪರ್ವತ ಇದು. ಗಂಗಾ, ಯಮುನಾ ನದಿಗಳ ಉಗಮ ಸ್ಥಾನವೂ ಈ ನೆಲದ ಮಹತ್ವವನ್ನು ಹೆಚ್ಚಿಸಿವೆ. ಇಂತಹ ಹಿಮಗಿರಿಯಲ್ಲಿ ಕನ್ನಡದ ನಾಮಫಲಕಗಳು ರಾರಾಜಿಸುತ್ತಿರುವುದು ಕನ್ನಡಿಗರು ಹೆಮ್ಮೆಪಡುವ ಸಂಗತಿ.

ಉತ್ತರಾಖಂಡ ರಾಜ್ಯದ ಸ್ಥಳೀಯ ಭಾಷೆ ಗಡವಾಲಿ. ಉತ್ತರ ಭಾರತದಲ್ಲಿ ಹಿಂದಿ ಭಾಷೆಯ ಪ್ರಭಾವ ಹೆಚ್ಚಾಗಿರುವುದರಿಂದ ಇಲ್ಲಿ ಹಿಂದಿ ಭಾಷಿಕರಂತೂ ಸಾಮಾನ್ಯ. ಅಂತಾರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ತೆರೆದುಕೊಂಡಿರುವ ಹಿಮಾಲಯದಲ್ಲಿ ಆಂಗ್ಲ ನಾಮಫಲಕಗಳು ಸಹಜ. ಆದರೆ ಆ ಎಲ್ಲ ಆಯಾಮಗಳಿಗೆ ಹೊರತಾಗಿ ಕನ್ನಡ ಭಾಷೆ, ಬರಹ ಹಿಮಾಲಯದಲ್ಲಿ ಬಳಕೆ ಆಗುತ್ತಿರುವುದು ಕನ್ನಡಿಗರೆಲ್ಲರಿಗೂ ಅಭಿಮಾನ ತರುವ ವಿಷಯ. ಭಾಷೆಯ ಬಳಕೆ ಮಾತ್ರವಲ್ಲ ಹಿಮಗಿರಿಯಲ್ಲಿರುವ ಅನೇಕ ದೇವಾಲಯಗಳಲ್ಲಿ ಕನ್ನಡಿಗರದ್ದೇ ಪೌರೋಹಿತ್ಯ ಎಂಬುದು ಮಹತ್ವದ ಅಂಶ.

ಹಿಮಾಲಯ ನಮ್ಮ ದೇಶದ ಸಾಂಸ್ಕೃತಿಕ, ಧಾರ್ವಿುಕ ಮತ್ತು ಪ್ರಾಕೃತಿಕ ಹಿರಿಮೆಯ ಸಂಕೇತ. ಇಲ್ಲಿರುವ ಅನೇಕ ದೇವಾಲಯಗಳಲ್ಲಿ ಕನ್ನಡಿಗರೇ ಅರ್ಚಕರು. ಈ ಪದ್ಧತಿ ಇಂದು ನಿನ್ನೆಯದಲ್ಲ; ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪರಂಪರೆ. ಆ ಎಲ್ಲ ಪರಂಪರೆಯ ಹೆಗ್ಗುರುತು ಹಿಮಗಿರಿಯಲ್ಲಿರುವ ಶ್ರೀಮದ್ ಹಿಮವದ್ಕೇದಾರ ವೈರಾಗ್ಯ ಸಿಂಹಾಸನ ಮಹಾಪೀಠ. ದೇವಭೂಮಿ ಎಂದು ಕರೆಸಿಕೊಂಡಿರುವ ಉತ್ತರಾಖಂಡದಲ್ಲಿ ಸಾಕಷ್ಟು ದೇವಾಲಯಗಳಿವೆ. ಅವುಗಳಲ್ಲಿ ಕೇದಾರನಾಥ, ಬದ್ರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಈ ನಾಲ್ಕು ಸ್ಥಳಗಳನ್ನು ಸೇರಿಸಿ ಚಾರ್​ಧಾಮ್ ಯಾತ್ರೆ ಎಂದು ಕರೆಯುತ್ತಾರೆ. ಆ ದೇವಾಲಯದ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳಲು ಅಲ್ಲಿನ ಸರ್ಕಾರ, ‘ಮಂದಿರ ಸಮಿತಿ’ಯನ್ನು ರಚನೆ ಮಾಡಿದೆ. ಆಡಳಿತಾತ್ಮಕ ನಿರ್ಧಾರಗಳನ್ನು ಈ ಸಮಿತಿ ನಿರ್ವಹಿಸುತ್ತದೆಯಾದರೂ, ಧಾರ್ವಿುಕ ನಿರ್ಣಯ ಮತ್ತು ಪೂಜಾ ನಿಯಮಗಳನ್ನು ನಿರ್ವಹಿಸುವ ಅಧಿಕಾರ ಮಾತ್ರ ಆಯಾ ರಾವಲ್​ರಿಗೆ ಇರುತ್ತದೆ.

ಕನ್ನಡಿಗರಿಗೆ ರಾವಲ್ ಪದವಿ: ರಾವಲ್ ಎಂಬುದು ಗಡವಾಲಿ ಭಾಷೆಯ ಪದ. ಇದೊಂದು ಮಹೋನ್ನತ ಪದವಿ. ರಾಜ, ರಾಜಗುರು, ಆಡಳಿತಾಧಿಕಾರಿ ಎಂಬುದು ಈ ಪದದ ಸಾಮಾನ್ಯ ಅರ್ಥ. ಬದ್ರಿನಾಥ ಮತ್ತು ಕೇದಾರನಾಥ ಮಂದಿರಗಳಿಗೆ ಪ್ರತ್ಯೇಕ ರಾವಲ್​ಗಳು ನೇಮಕವಾಗುತ್ತಾರೆ. ಬದ್ರಿನಾಥಕ್ಕೆ ಕೇರಳದ ನಂಬೂದಿರಿ ಬ್ರಾಹ್ಮಣರು ರಾವಲ್​ರಾದರೆ; ಕೇದಾರನಾಥಕ್ಕೆ ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದ ವೀರಶೈವ ಜಂಗಮರು ರಾವಲ್ ಆಗುತ್ತಾರೆ. ಹಿಮಾಲಯದಲ್ಲಿ ಕನ್ನಡಿಗರ ಪಾರುಪತ್ಯೆಯ ಹಿಂದಿರುವುದು ಇದೇ ರಾವಲ್ ಪದವಿ.

ಉತ್ತರಾಖಂಡ ಪ್ರದೇಶವನ್ನು ಆಳಿದ ಠೆಹರಿ ರಾಜವಂಶಸ್ಥರು ಈ ರಾವಲ್ ಪದವಿಯನ್ನು ನೀಡುತ್ತಾರೆ. ಸನಾತನ ವೀರಶೈವ ಪಂಚಪೀಠಗಳಲ್ಲಿ ಒಂದಾದ ಕೇದಾರ ಪೀಠದ ಜಗದ್ಗುರುಗಳು ಈ ರಾವಲ್ ಪದವಿ ಭೂಷಿತರಾಗುತ್ತಾರೆ. ಠೆಹರಿ ರಾಜರ ಆಸ್ಥಾನದಲ್ಲಿ ಚಿನ್ನದ ಕಡಗ, ರಾಜಪೋಷಾಕು ಧರಿಸಿ ತಿಲಕೋತ್ಸವ ಮಾಡಿದ ನಂತರ ರಾವಲ್ ಪದವಿ ನೀಡಲಾಗುತ್ತದೆ. ರಾವಲ್ ಪದವಿ ಭೂಷಿತರಾದ ನಂತರವೇ ವೈರಾಗ್ಯ ಪೀಠದ ಪೀಠಾರೋಹಣ ಮಾಡುವ ಪದ್ಧತಿ ಇದೆ. ಹೀಗೆ ಈವರೆಗೆ 324 ಜನ ರಾವಲ್ ಪದವಿ ಪಡೆದ ದಾಖಲೆ ಠೆಹರಿ ಅರಮನೆಯಲ್ಲಿ ಲಭ್ಯವಿದೆ. ಠೆಹರಿ ರಾಜರಿಂದ ರಾವಲ್ ಪದವಿ ಪಡೆದ ಕೇದಾರ ಜಗದ್ಗುರುಗಳು ನಂತರ ಕೇದಾರನಾಥ ಮತ್ತು ಪಂಚಕೇದಾರದ ಇತರ ದೇವಾಲಯಗಳ ಅರ್ಚಕರ ನೇಮಕ ಮತ್ತಿತರ ಎಲ್ಲ ಧಾರ್ವಿುಕ ಅಧಿಕಾರವನ್ನು ಹೊಂದಿರುತ್ತಾರೆ.

ದೇವಭೂಮಿಯಲ್ಲಿ ಕನ್ನಡಿಗರ ಮಂತ್ರ: ಭಾರತದ ಉತ್ತರ ತುದಿಯಲ್ಲಿರುವ ಹಿಮಾಲಯದಲ್ಲಿ ಕನ್ನಡ ಗೋಚರಿಸುತ್ತಿರುವುದು ಕನ್ನಡಿಗರನ್ನು ಅಭಿಮಾನ ಸಾಗರದಲ್ಲಿ ಮಿಂದೇಳುವಂತೆ ಮಾಡುತ್ತದೆ. ಕನ್ನಡ ಮಾತು, ಕನ್ನಡ ನಾಮಫಲಕ, ಕನ್ನಡ ಸಂಸ್ಕೃತಿಯ ಛಾಯೆ ಆ ಹಿಮರಾಶಿಯಲ್ಲೂ ಬೆಚ್ಚನೆಯ ಭಾವ ಮೂಡಿಸುತ್ತದೆ. ದೇವಭೂಮಿಯಲ್ಲಿ ಕೇಳಿಬರುವ ಮಂತ್ರಘೋಷದ ಹಿಂದೆ ಕನ್ನಡ ಪ್ರತಿಧ್ವನಿಸುತ್ತದೆ. ಇದಕ್ಕೆಲ್ಲ ಕಾರಣ ಕೇದಾರದ ವೈರಾಗ್ಯ ಪೀಠದ ಪರಿಸರ.

ಊಖಿಮಠ ಎಂದೇ ಪ್ರಸಿದ್ಧವಾಗಿರುವ ಕೇದಾರ ಪೀಠದ ಪರಿಸರದಲ್ಲಿ ಪ್ರಾಚೀನ ಓಂಕಾರೇಶ್ವರ ಮಂದಿರವಿದೆ. ಈ ದೇವಾಲಯದ ಮುಂದಿರುವ ನಾಮಫಲಕ, ಕಾಣಿಕೆ ಹುಂಡಿ ಮೇಲೆಯೂ ಕನ್ನಡ ಬರಹವಿದೆ. ಅರ್ಚಕರು ಕೂಡ ಕರ್ನಾಟಕ ಮೂಲದವರು. ಕೇದಾರನಾಥನ ಪ್ರಧಾನ ಅರ್ಚಕರು ಸೇರಿದಂತೆ ಓಂಕಾರೇಶ್ವರ ಮಂದಿರ, ಗುಪ್ತಕಾಶಿ ವಿಶ್ವನಾಥ ಮಂದಿರ, ಪಂಚಕೇದಾರಗಳಲ್ಲೊಂದಾದ ಮಧ್ಯ ಮಹೇಶ್ವರ ಮಂದಿರಕ್ಕೆ ನೇಮಕಗೊಂಡಿರುವ ಸದ್ಯದ ಅರ್ಚಕರೆಲ್ಲರೂ ಕನ್ನಡಿಗರೇ. ಇವರೆಲ್ಲರೂ ಕರ್ನಾಟಕದಲ್ಲಿಯೇ ವೇದಾಗಮ ಅಧ್ಯಯನ ನಡೆಸಿರುವುದು ವಿಶೇಷ. ‘ಈ ಹಿಂದೆ ಹಿಮಾಲಯ ವ್ಯಾಪ್ತಿಯಲ್ಲಿದ್ದ ಸುಮಾರು 200 ದೇವಾಲಯಗಳ ಅರ್ಚಕರು ಕರ್ನಾಟಕ ಮೂಲದ ವೀರಶೈವ ಜಂಗಮರಿದ್ದರು’ ಎನ್ನುತ್ತಾರೆ ಓರ್ವ ಅರ್ಚಕರು.

ವೈರಾಗ್ಯ ಪೀಠದ ಇತಿಹಾಸ: ಸನಾತನ ವೀರಶೈವ ಪಂಚಪೀಠಗಳು ದೇಶದ ಉದ್ದಗಲಕ್ಕೂ ಇದ್ದು, ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಹಿಮಾಲಯದ ತಪ್ಪಲಿನಲ್ಲಿ ಶ್ರೀಮದ್ ಹಿಮವದ್ಕೇದಾರ ವೈರಾಗ್ಯ ಸಿಂಹಾಸನ ಮಹಾಪೀಠ ವಿರಾಜಮಾನವಾಗಿದೆ. ಜಗದ್ಗುರು ಘಂಟಾಕರ್ಣ ಭಗವತ್ಪಾದರಿಂದ ಸ್ಥಾಪಿತವಾದ ಕೇದಾರ ಪೀಠದ ಕಲಿಯುಗದ ಆದಿ ಆಚಾರ್ಯರಾದ ಜಗದ್ಗುರು ಏಕೋರಾಮಾರಾಧ್ಯರಿಂದ ಇಲ್ಲಿಯವರೆಗೆ 324 ಜಗದ್ಗುರುಗಳು ಪೀಠವನ್ನಲಂಕರಿಸಿದ್ದಾರೆ.

ಯುಗ ಯುಗಗಳ ನಂಟು ಹೊಂದಿರುವ ಕೇದಾರ ಪೀಠಕ್ಕೆ ಅಭಿಮನ್ಯುವಿನ ಮೊಮ್ಮಗ ಜನಮೇಜಯ ರಾಜ ನೀಡಿದ ಭೂದಾನದ ಶಾಸನ ಇಂದಿಗೂ ಪೀಠದಲ್ಲಿದೆ. ಅಖಂಡ ಶಿವಭಕ್ತನಾಗಿದ್ದ ಬಾಣಾಸುರನ ಮಗಳು ಉಷಾದೇವಿಗೆ ಜಗದ್ಗುರು ಆನಂದಲಿಂಗ ಭಗವತ್ಪಾದರು ವಿದ್ಯೆಯನ್ನು ನೀಡಿದ್ದಕ್ಕೆ ಗುರುದಕ್ಷಿಣೆಯಾಗಿ ಮಠವನ್ನು ಕಟ್ಟಿಸಿಕೊಟ್ಟಿದ್ದಾಳೆ. ಆ ಕಾರಣಕ್ಕಾಗಿಯೇ ಕೇದಾರ ಪೀಠಕ್ಕೆ ಉಷಾಮಠ ಎಂಬ ಹೆಸರು ಬಂದಿದ್ದು, ಮುಂದೆ ಅದು ಊಖಿಮಠ ಎಂದು ಜನಜನಿತವಾಗಿದೆ. ಇಂದು ಊಖಿಮಠ ಎಂಬುದು ಪೀಠದ ಹೆಸರು ಮಾತ್ರವಲ್ಲ, ವಿಧಾನಸಭಾ ಕ್ಷೇತ್ರವೊಂದರ ಹೆಸರಾಗಿದೆ.

ಊಖಿಮಠ ಉತ್ತರಾಖಂಡ ಧಾರ್ವಿುಕ ಇತಿಹಾಸದಲ್ಲಿ ಬಹುಮಹತ್ವದ ಸ್ಥಳ. ಚಳಿಗಾಲದಲ್ಲಿ ಕೇದಾರನಾಥ ದೇವಾಲಯ ಮುಚ್ಚಲ್ಪಟ್ಟಾಗ ಉತ್ಸವ ಮೂರ್ತಿ ಆರು ತಿಂಗಳ ಕಾಲ ಪೂಜೆ ಪಡೆಯುವುದು ಇದೇ ಊಖಿಮಠದ ಗದ್ದಿಸ್ಥಾನದಲ್ಲಿ. ಕೇದಾರನಾಥನ ಶಿರದ ಮೇಲೆ ಆರು ತಿಂಗಳು ಪೂಜೆಗೊಳ್ಳುವ ಸುವರ್ಣ ಕಿರೀಟ, ಇನ್ನಾರು ತಿಂಗಳು ಕೇದಾರ ಜಗದ್ಗುರುಗಳ ಶಿರದ ಮೇಲೆ ಶೋಭಿಸುತ್ತದೆ.

ಇದೇ ನ. 15ಕ್ಕೆ ಕೇದಾರನಾಥ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಅದರ ಕೀಲಿಯನ್ನು ಮಂದಿರ ಸಮಿತಿಯವರು ಕೇದಾರ ಜಗದ್ಗುರುಗಳಿಗೆ ಸಮರ್ಪಿಸುತ್ತಾರೆ. 2024ರ ಮೇ ತಿಂಗಳ ಅಕ್ಷಯ ತೃತೀಯದವರೆಗೆ ಉತ್ಸವ ಮೂರ್ತಿಗೆ ಕೇದಾರ ಪೀಠದಲ್ಲಿ ಪೂಜೆ ನೆರವೇರಿಸಲಾಗುತ್ತದೆ. ಆ ನಿಗದಿತ ಮುಹೂರ್ತದಂದು ಕೇದಾರ ಜಗದ್ಗುರುಗಳೇ ಸ್ವತಃ ಬಾಗಿಲು ತೆರೆಯುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net