ಜಾಗತಿಕ ಮಟ್ಟದಲ್ಲಿ ಹರಡಬೇಕು ಕನ್ನಡದ ಕಂಪು

ka sa pa
ಕಸಾಪ ಸಂಸ್ಥಾಪನಾ ದಿನಾಚರಣೆಯನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್.ರಾಜು ಉದ್ಘಾಟಿಸಿದರು. ಸೋಮಶೇಖರ್ ಶಿಮೊಗ್ಗಿ, ಎಚ್.ಎಸ್.ರಘು, ಕಾಶೀಬಾಯಿ, ನಂದಾ ಪ್ರೇಮ್ಕುಮಾರ್ ಇತರರಿದ್ದರು.
Published on

ಶಿಕಾರಿಪುರ: ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಮೇಲೆ ಪಾಶ್ಚಿಮಾತ್ಯ ಭಾಷೆಗಳ ಆಕ್ರಮಣ ಆಗಿದೆ. ಆದರೆ ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವು ಸಂಘ ಸಂಸ್ಥೆಗಳು ಅವಿರತವಾಗಿ ಶ್ರಮಿಸುತ್ತಿವೆ ಎಂದು ಶಿಕಾರಿಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಉಪನ್ಯಾಸಕ ಡಾ. ಸೋಮಶೇಖರ್ ಶಿಮೊಗ್ಗಿ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ 109ನೇ ವರ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.
1915ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ನಾಡು ಹಾಗೂ ಭಾಷೆ ಕಟ್ಟುವಲ್ಲಿ ಕೊಡುಗೆ ನೀಡಿದೆ. ಹಲವು ಕೃತಿಗಳನ್ನು ಹೊರ ತಂದಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳ ಮೂಲಕ ಭಾಷೆಯನ್ನು ಬೆಳೆಸುವ ಕೆಲಸ ಮಾಡಿದೆ ಎಂದರು.
ಜಾಗತಿಕ ಮಟ್ಟದಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಕಂಪು ಹರಡಬೇಕು. ಆದರೆ ನಮ್ಮ ಕೃತಿಗಳನ್ನು ಅನ್ಯಭಾಷೆಗೆ ತರ್ಜುಮೆ ಮಾಡುವಲ್ಲಿ ವಿಫಲರಾಗಿದ್ದೇವೆ. ಅಲ್ಲಮಪ್ರಭು ಇಂಗ್ಲಿಷ್ ಕವಿ ಆಗಿದ್ದಿದ್ದರೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಪ್ರಸ್ತುತ ಭಾಷೆ ಕಲಿಸುವುದು ಸವಾಲಾಗಿದೆ. ಪಾಲಕರು ಲಾಭದ ಭಾಷೆ ಕಲಿಸಲು ಮುಂದಾಗಿದ್ದಾರೆ. ಆದರೆ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಕಲಿಸುವ ಅಗತ್ಯತೆ ಇದೆ. ಕನ್ನಡ ಭಾಷೆ ಕರುಳಿನ ಭಾಷೆಯಾಗಬೇಕು. ಭಾಷಾ ಸಾಹಿತ್ಯ ಬೆಳೆಸಲು ಹೆಚ್ಚು ಅಧ್ಯಯನ ಕೇಂದ್ರಗಳು ಆರಂಭವಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್.ರಾಜು, ಕನ್ನಡಿಗರಾದ ನಾವು ಸಹೃದಯಿಗಳು, ಸ್ವಾಭಿಮಾನಿಗಳು, ಪರಭಾಷಾ ಸಹಿಷ್ಣುಗಳು. ಆದರೆ ನಾಡು, ನುಡಿಗೆ ಧಕ್ಕೆ ಬಂದರೆ ಸುಮ್ಮನೆ ಕೂರುವುದಿಲ್ಲ. ಕನ್ನಡ ನಮ್ಮ ಉಸಿರು, ನಮ್ಮ ಹೆಮ್ಮೆ. ಕಸಾಪ ಪ್ರಸ್ತುತ ಲಕ್ಷಾಂತರ ಸದಸ್ಯರನ್ನು ಹೊಂದಿ ಹೆಮ್ಮರವಾಗಿ ಬೆಳೆದಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಹಲ್ಮೀಡಿ ಶಾಸನಕ್ಕಿಂತ ಪುರಾತನ ಶಾಸನ ತಾಲೂಕಿನ ತಾಳಗುಂದ ಗ್ರಾಮದಲ್ಲಿ ದೊರೆತಿರುವುದು ಹೆಮ್ಮೆಯ ಸಂಗತಿ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ರಘು ಮಾತನಾಡಿ, ಕಸಾಪ ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭಾಷೆಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿದೆ. ಹಾಗೆಯೇ ಕನ್ನಡ ಭಾಷೆಯನ್ನು ಬಳಸುವ ಮೂಲಕ ಉಳಿಸಿ ಬೆಳೆಸಬೇಕು. ಕಾರ್ಯಕ್ರಮಗಳಲ್ಲಿ ಸದಸ್ಯರು ಹಾಗೂ ಕನ್ನಡಾಭಿಮಾನಿಗಳು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಕಸಾಪ ಪದಾಧಿಕಾರಿಗಳಾದ ಪಾರಿವಾಳ ಶಿವಲಿಂಗಪ್ಪ, ಕಾಶೀಬಾಯಿ, ನಂದಾ ಪ್ರೇಮ್ಕುಮಾರ್, ಮೋಹನ್ ರಾಜ್, ಲೋಕೇಶ್ ಮಕರಿ, ಪ್ರಕಾಶ್, ಜಿಯಾವುಲ್ಲಾ, ಸದಸ್ಯರಾದ ಬಂಗಾರಪ್ಪ, ಶಿವಾನಂದಪ್ಪ, ದಿನೇಶ್ ಆಚಾರ್, ಸಂದೀಪ್, ಬಸವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net