20 ರಂದು ಕನ್ನಡ ಸಂಭ್ರಮ

Published on

ಹುಣಸೂರು: ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ನೇತೃತ್ವ)ಯ ಹುಣಸೂರು ಘಟಕದ ವತಿಯಿಂದ ಜ.20 ರಂದು ‘ಕನ್ನಡ ಸಂಭ್ರಮ’ ದ ಅಂಗವಾಗಿ ತಾಯಿ ಕನ್ನಡಾಂಬೆಯ ಮೆರವಣಿಗೆ, ಆರೋಗ್ಯ ಉಚಿತ ಶಿಬಿರ ಮತ್ತು ಶತಮಾನಗಳ ಇತಿಹಾಸ ಹೊಂದಿರುವ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದತ್ತು ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ಪುರುಷೋತ್ತಮ್ ತಿಳಿಸಿದರು.


ಅಂದು ಬೆಳಗ್ಗೆ 830ಕ್ಕೆ ನಗರದ ಕಲ್ಪತರು ವೃತ್ತದಿಂದ ಕನ್ನಡಾಂಬೆಯ ಮೆರವಣಿಗೆ ಹೊರಟು ಸಂವಿಧಾನ ವೃತ್ತದ ಮೂಲಕ ಎಸ್‌ಜೆ ರಸ್ತೆಯನ್ನು ಹಾದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ತಲುಪಲಿದೆ. ಮೆರವಣಿಗೆಯಲ್ಲಿ ವೇದಿಕೆ ಅಧ್ಯಕ್ಷ ಶಿವರಾಮೇಗೌಡ ಭಾಗವಹಿಸಲಿದ್ದಾರೆ. ನಂತರ ಸರ್ಕಾರಿ ಶಾಲೆಯ ಆವರಣದಲ್ಲಿ ನಗರದ ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ಉಚಿತ ಶಿಬಿರ ಆಯೋಜಿಸಲಾಗಿದೆ. ಇದೇ ವೇಳೆ ಕರವೇ ವತಿಯಿಂದ ಸರ್ಕಾರಿ ಶಾಲೆಯ ದತ್ತು ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಶತಮಾನಗಳ ಶಾಲೆ: ಕನ್ನಡ ಶಾಲೆಯನ್ನು ಉಳಿಸಿಕೊಳ್ಳುವ ಸದುದ್ದೇಶದಿಂದ ಹಳೆಯ ವಿದ್ಯಾರ್ಥಿಗಳು, ಕರವೇ ಮತ್ತಿತರ ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮವಹಿಸಲಾಗಿದೆ. ಇದೀಗ ಶಾಲೆಯನ್ನು ದತ್ತು ಪಡೆಯುವ ಮೂಲಕ ಶಾಲೆಗೆ ಅಗತ್ಯ ಮೂಲಸೌಕರ್ಯ, ಸ್ಮಾರ್ಟ್ ಕ್ಲಾಸ್, ಬಯೋಮೆಟ್ರಿಕ್ ಅಳವಡಿಸುವಂತಹ ವಿನೂತನ ಯೋಜನೆ ರೂಪಿಸಲಾಗಿದೆ. 4 ವರ್ಷಗಳ ಹಿಂದೆ ಕೇವಲ ಬೆರಳಣಿಕೆಯಷ್ಟು ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 300ರ ಗಡಿ ದಾಟಿದೆ. ಕನ್ನಡ ಶಾಲೆಗಳನ್ನು ಉಳಿಸುವತ್ತ ಕನ್ನಡಿಗರೆಲ್ಲರೂ ಸಹಕರಿಸಬೇಕೆಂದು ಕೋರಿದರು.


ಸಂಘದ ಉಪಾಧ್ಯಕ್ಷ ಬಲರಾಮ, ನಗರಾಧ್ಯಕ್ಷ ಮುನಾವರ್ ಪಾಷಾ, ಖಜಾಂಚಿ ರಮೇಶ್, ಸಂಚಾಲಕ ಮಹೇಂದ್ರ ಹೆಗ್ಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net