

ತರೀಕೆರೆ: ಮೌಢ್ಯದ ವಿರುದ್ಧ ಸಮರ ಸಾರಿ ಮಹಿಳೆಯರಿಗೆ ಶಿಕ್ಷಣದ ಅಗತ್ಯ ತೋರಿಸಿಕೊಟ್ಟ ಸಾವಿತ್ರಿಬಾಯಿ ಫುಲೆ ಆದರ್ಶ ಸರ್ವರಿಗೂ ಮಾದರಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಹೇಳಿದರು.
ಲಕ್ಕವಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನೋತ್ಸವದ ನಿಮಿತ್ತ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಶಿಕ್ಷಕಿ ಉಮಾ ಅವರನ್ನು ಸನ್ಮಾನಿಸಿ ಮಾತನಾಡಿದರು.
ಮಹಿಳೆ ಮನೆಯಿಂದ ಹೊರಬರುವುದೇ ಅಪರಾಧ ಎನ್ನುವ ಕಾಲಘಟ್ಟದಲ್ಲಿ ಮದುವೆ ಬಳಿಕ ಗಂಡನಿಂದಲೇ ಶಿಕ್ಷಣ ಪಡೆದು ಶಿಕ್ಷಕಿ ಹುದ್ದೆಯನ್ನು ಸಾವಿತ್ರಿಬಾಯಿ ಫುಲೆ ಅಲಂಕರಿಸಿದರು. ಮುಂದೆ ಶಿಕ್ಷಣ ಕ್ರಾಂತಿ ಮಾಡಿದ್ದು ಇತಿಹಾಸ. ಅಂತಹ ಮಹಿಳೆಯ ಜನ್ಮದಿನದಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಉತ್ತಮ ಶಿಕ್ಷಕಿಯೊಬ್ಬರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.
ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಆರ್.ನಾಗೇಶ್, ತಾಲೂಕು ಕಸಾಪ ಮಹಿಳಾ ಘಟಕದ ಕಾರ್ಯದರ್ಶಿ ಲತಾ, ಶಾರದಾ ಭಜನಾ ಮಂಡಳಿಯ ಸಂಧ್ಯಾ ದತ್ತಾತ್ರಿ, ಮುಖ್ಯ ಶಿಕ್ಷಕಿ ನಾಗರತ್ನಾ ಮತ್ತಿತರರಿದ್ದರು.