ಕನ್ನಡಿಗರು ನಂದಿನಿ ಉತ್ಪನ್ನಗಳನ್ನೇ ಖರೀದಿಸಿ, ಅಮುಲ್​ಗೆ ತಕ್ಕ ಉತ್ತರ ನೀಡಿ: ಕಸಾಪ ಅಧ್ಯಕ್ಷ ಮಹೇಶ ಜೋಶಿ

Nandini Joshi KaSaPa
Published on

ಬೆಂಗಳೂರು: ಕನ್ನಡ ನಾಡು ನುಡಿಯ ಮೇಲೆ ಪರ ಭಾಷೆಯವರು ಒಂದಿಲ್ಲೊಂದು ರೀತಿಯಲ್ಲಿ ದಬ್ಬಾಳಿಕೆ ನಡೆಸುತ್ತಲೇ ಬಂದಿದ್ದಾರೆ. ಕನ್ನಡಿಗ ರೈತರಿಂದಲೇ ಆರಂಭವಾದ 'ನಂದಿನಿ' ನಾಡಿನ ಹೆಮ್ಮೆಯ ಸಂಸ್ಥೆ, ಇದರ ರಕ್ಷಣೆ ಪ್ರತಿ ಕನ್ನಡಿಗನ ಜವಾಬ್ದಾರಿ. ಕೆಎಂಎಫ್ ಉಳಿಸಿ ಬೆಳೆಸಲು ಎಲ್ಲ ಕನ್ನಡಿಗರು ಒಂದಾಗಬೇಕು ಎಂದು ಕನ್ನಡ‌ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಕರ್ನಾಟಕದಲ್ಲಿ ಅಮುಲ್‌ ಉತ್ಪನ್ನಗಳ ಮಾರಾಟದ ವಿಚಾರ ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಅಮುಲ್‌ ಹಾಗೂ ನಂದಿನಿ ವಿಲೀನದ ಆತಂಕ ಹುಟ್ಟಿಕೊಂಡಿದೆ. ನಮ್ಮ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ನುಂಗಿಹಾಕುವ ಸಂಚು ನಡೆಯುತ್ತಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಇದರಿಂದ ಕನ್ನಡಿಗರ ಹೆಮ್ಮೆಯ ಕೆಎಂಎಫ್​ ತಲೆಯ ಮೇಲೆ ಅಪಾಯದ ತೂಗುಗತ್ತಿ ತೂಗುತ್ತಿದೆ ಎನ್ಮುವ ಸಂಗತಿ ವ್ಯಕ್ತವಾಗುತ್ತಿದೆ. ಇದರಿಂದ ರೈತರನ್ನು, ನಂದಿನಿ ಬಳಕೆದಾರರನ್ನು ಗೊಂದಲಕ್ಕೆ ನೂಕಿದಂತಾಗುತ್ತದೆ ಎಂದು ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯ ಪಟ್ಟರು.

ಕರ್ನಾಟಕದಲ್ಲಿ ನಮ್ಮ ಕನ್ನಡಿಗರೇ ಕಟ್ಟಿ ಬೆಳೆಸಿ, ನಾಡಿನಲ್ಲಿ ಶ್ವೇತ ಕ್ರಾಂತಿಗೆ ನಾಂದಿ ಹಾಡುವುದರ ಜೊತೆಗೆ ರಾಜ್ಯದಲ್ಲಿ ಹೆಸರು ಮಾಡಿದ ನಂದಿನಿ ಉತ್ಪನ್ನಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಕನ್ನಡಿಗರದ್ದಾಗಿದೆ. ಈಗ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಯಾವುದೋ ಅನ್ಯಭಾಷಿಕ ಕಂಪನಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಸಹಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಕೆಎಂಎಫ್ ಮತ್ತು ಅಮುಲ್ ಸಂಸ್ಥೆಗಳ ವಿಲೀನವನ್ನು ಕನ್ನಡ ಸಾಹಿತ್ಯ ಪರಿಷತ್ತು ವಿರೋಧಿಸುತ್ತದೆ. ಈ ವಿಲೀನದ ಪ್ರಸ್ತಾವಕ್ಕೆ ಕನ್ನಡಿಗರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ಜತೆ ಪರಿಷತ್ತು ಮಾತನಾಡಿ ನಂದಿನಿಯೊಂದಿಗೆ ಕನ್ನಡಿಗರು ಹೊಂದಿದ ಅವಿನಾಭಾವ ಸಂಬಂಧದ ಕುರಿತು ಎಚ್ಚರಿಸಲಿದೆ. ನಮ್ಮ ದಿನದ ಆರಂಭ ನಂದಿನಿ ಹಾಲಿನಿಂದ, ತಾಯಿಯ ಹಾಲಿಗೆ ಸರಿಸಾಟಿಯಾಗಿದ್ದ ನಂದಿನಿ ಹಾಲು ಮತ್ತು ಅದರ ಉತ್ಪನ್ನಗಳನ್ನು ನಾವೆಲ್ಲ ಸೇರಿ ಉಳಿಸಿಕೊಳ್ಳುವ ಅನಿವಾರ್ಯ ಕಾಲ ಬಂದಿದೆ ಎಂದು ನಾಡೋಜ ಡಾ.ಮಹೇಶ ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ.

ಗುಜರಾತ್ ಮೂಲದ ಅಮುಲ್ ಸಂಸ್ಥೆ ತನ್ನ ಉತ್ಪನ್ನಗಳಾದ ಹಾಲು ಮತ್ತು ಮೊಸರು, ತುಪ್ಪ ಇತ್ಯಾದಿ ಉತ್ಪನ್ನಗಳ ಮಾರಾಟದ ಮೂಲಕ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸುತ್ತಿದೆ. ಇದಕ್ಕೆ ಕನ್ನಡಿಗರು ನಮ್ಮ ಅಭಿಮಾನದ ನಂದಿನಿ ಉತ್ಪನ್ನಗಳನ್ನೇ ಖರೀದಿ ಮಾಡುವ ಮೂಲಕ ತಕ್ಕ ಉತ್ತರ ನೀಡಬೇಕಿದೆ. ಕೆಎಂಎಎಫ್​ನವರು ರೈತರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಮೂಲಕ ನಾಡಿನ ರೈತರ ಜೀವನದಲ್ಲಿ ನಿರಂತರ ಸಂತಸ ತರುವ ಅವಶ್ಯಕತೆಯೂ ಸಾಕಷ್ಟಿದೆ ಎನ್ನುವ ಮಾತನ್ನು ನಾಡಿನ ರೈತರು ಆಡಿಕೊಳ್ಳುತ್ತಿದ್ದಾರೆ. ರೈತರ ಹಿತರಕ್ಷಣೆಗಾಗಿ ಕಟ್ಟಿರುವ ಕೆಎಂಎಫ್​ನ ರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರನ್ನು ಎಚ್ಚರಿಸಲಿದೆ ಎಂದು ಜೋಶಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net