

ಮೈಸೂರು: ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ‘ರಾಜ್ಯೋತ್ಸವ ಪ್ರಶಸ್ತಿ’ಗೆ ಪ್ರಸಕ್ತ ವರ್ಷ ನಗರದ ಹಿರಿಯ ಪತ್ರಿಕಾ ವಿತರಕ ಜವರಪ್ಪ ಭಾಜನರಾಗಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ, ಸಾಧನೆ ಮಾಡಿರುವ ಗಣ್ಯರನ್ನು ಗುರುತಿಸಿ ಪ್ರತಿವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಪತ್ರಿಕಾ ವಿತರಕರ ವಿಭಾಗದಿಂದಲೂ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ವಿಶೇಷವೆನಿಸಿದೆ. ಅಂತೆಯೆ, 2023ರ ಸಾಲಿನಲ್ಲಿ ಪತ್ರಿಕಾ ವಿತರಕರ ವಿಭಾಗದಿಂದ ಜವರಪ್ಪ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
‘ಇಳಿ ವಯಸ್ಸಿನಲ್ಲಿಯೂ ಮನೆ ಮನೆಗೆ ಸೈಕಲ್ನಲ್ಲಿ ಪತ್ರಿಕೆ ಹಂಚುವ ನನ್ನನ್ನು ಗುರುತಿಸಿ ‘ರಾಜ್ಯೋತ್ಸವ’ ಪ್ರಶಸ್ತಿ ನೀಡಿರುವುದಕ್ಕೆ ತುಂಬ ಸಂತಸವಾಗುತ್ತಿದೆ’ ಎಂದು ಜವರಪ್ಪ ಪ್ರತಿಕ್ರಿಯಿಸಿದ್ದಾರೆ.
‘15 ವರ್ಷದವನಾಗಿದ್ದಾಗಲೇ ನಾನು ಪತ್ರಿಕೆ ವಿತರಿಸುವ ಕೆಲಸ ಆರಂಭಿಸಿದೆ. ಸತತ 56 ವರ್ಷಗಳಿಂದ ಪತ್ರಿಕೆ ವಿತರಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದು, ನನಗೆ ಈಗ 71 ವರ್ಷ ವಯಸ್ಸು. ಮುಂಜಾನೆಯೇ ಗಾಳಿ, ಮಳೆ, ಚಳಿ ಎನ್ನದೆ ಎದ್ದುಹೋಗಿ 250ಕ್ಕೂ ಹೆಚ್ಚು ಮನೆಗಳಿಗೆ 300ಕ್ಕೂ ಹೆಚ್ಚು ಪತ್ರಿಕೆ ಹಂಚುವ ಕೆಲಸ ಮಾಡುತ್ತೇನೆ. ಬಳಿಕ ಬೇರೆ ಕಡೆಯೂ ಸೇಲ್ಸ್ ಕೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದೇನೆ. ಆದರೆ ಇದುವರೆಗೂ ಸರ್ಕಾರ ಅಥವಾ ಸಂಘ-ಸಂಸ್ಥೆಗಳಿಂದ ನಾನು ಯಾವುದೇ ಸೌಲಭ್ಯ ಪಡೆದಿರಲಿಲ್ಲ. ಸಿದ್ದರಾಮಯ್ಯ ಸರ್ಕಾರ ನನ್ನನ್ನು ಗುರುತಿಸಿರುವುದರಿಂದ ಸಂತೋಷವಾಗಿದೆ’ ಎಂದು ಅವರು ಹೇಳಿದರು.