

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತು ಹಲವು ವರ್ಷಗಳೇ ಕಳೆದಿವೆ. ಆದರೆ, ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಆಗಬೇಕಾದ ಕಾರ್ಯಗಳು ಆಗಿಲ್ಲ. ಹೀಗಾಗಿ ಸೌಲಭ್ಯ ಪಡೆಯಲು ಬೇಕಿರುವ ನಿಯಮಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ವೆಂಕಟಾಚಲಶಾಸ್ತ್ರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಶೀಘ್ರದಲ್ಲೇ ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ. ಮಂಡ್ಯದಲ್ಲಿ ನಡೆಯಲಿರುವ 87ನೇ ಆಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ವಿಜಯವಾಣಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಪಾಲ್ಗೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ, ಕನ್ನಡ ಭಾಷಾ ಶಾಸ್ತ್ರೀಯ ಸ್ಥಾನಮಾನ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ದೇಶಗಳ ಕುರಿತು ಮಾಹಿತಿ ಹಂಚಿಕೊಂಡರು.
ಭಾಷಾಭಿಮಾನದ ಕೊರತೆ: ತಮಿಳು ಭಾಷಿಕರಿಗೆ ಇರುವಷ್ಟು ಭಾಷಾಭಿಮಾನ ರಾಜ್ಯಾಭಿಮಾನ ಬೇರೆಯವರಿಗೆ ಇಲ್ಲ. ಹಾಗಾಗಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತು ವರ್ಷಗಳೇ ಕಳೆದರೂ, ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ದೇಶದಲ್ಲಿ ಈಗ 10 ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ಆದರೆ ತಮಿಳಿನಲ್ಲಿ ಬಿಟ್ಟರೆ ಬೇರಾವುದೇ ಭಾಷೆಗಳಲ್ಲಿ ಅದಕ್ಕೆ ಪೂರಕವಾದ ಕಾರ್ಯಗಳು ನಡೆದಿಲ್ಲ.
ಅಸ್ಮಿತೆ ಎತ್ತಿಹಿಡಿಯುವ ಸಮ್ಮೇಳನ: ಮಂಡ್ಯದಲ್ಲಿ ನಡೆಯಲಿರುವ ಸಮ್ಮೇಳನ ಈ ಹಿಂದಿನ ಎಲ್ಲ ಸಮ್ಮೇಳನಗಳಿಗಿಂತ ವಿಶೇಷ ಹಾಗೂ ವಿಭಿನ್ನವಾಗಿರಲಿದೆ. ಕರ್ನಾಟಕ ಮಾತ್ರವಲ್ಲದೆ ದೇಶ-ವಿದೇಶಗಳ ಕನ್ನಡಿಗರು ಪಾಲ್ಗೊಳ್ಳಲಿದ್ದು, 10 ಲಕ್ಷಕ್ಕೂ ಅಧಿಕ ಸಾಹಿತ್ಯಾಸಕ್ತರು ಸೇರುವ ನಿರೀಕ್ಷೆ ಇದೆ. ಕನ್ನಡ ನಾಡು ನುಡಿ ಅಸ್ಮಿತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಸಮ್ಮೇಳನ ಆಯೋಜನೆಗೊಂಡಿದೆ. ಮಂಡ್ಯ ಜಿಲ್ಲೆ ಅಪ್ಪಟ ಕನ್ನಡಿಗರ ಪ್ರದೇಶವಾಗಿದ್ದು, ಭಾಷೆ, ಸಂಸ್ಕೃತಿ ಸೇರಿ ಐತಿಹಾಸಿಕ, ಸಾಹಿತ್ಯ, ರಾಜಕೀಯ ಒಳಗೊಂಡಂತೆ ಎಲ್ಲ ರಂಗಗಳಲ್ಲೂ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಂಡಿರುವ ತಾಣ. ಇಂತಹ ಸ್ಥಳದಲ್ಲಿ ಕನ್ನಡ ಬಾವುಟ ಹಾರಿಸುವ ಮೂಲಕ ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಕನ್ನಡ ಕಹಳೆ ಮೊಳಗಲಿದೆ. ಸಮ್ಮೇಳನದಲ್ಲಿ ‘ಕನ್ನಡ-ಕನ್ನಡಿಗ-ಕರ್ನಾಟಕ’ ಎಂಬ ವಿಷಯಗಳಿಗೆ ಒತ್ತು ನೀಡಲಾಗಿದೆ.
ಸವಾಲುಗಳಿವೆ: ಹಿಂದೆಲ್ಲ ‘ಕನ್ನಡವನ್ನು ಬೆಳೆಸೋಣ’ ಎಂಬ ಘೋಷಣೆ ಮೊಳಗುತ್ತಿತ್ತು. ಆದರೆ ಇಂದು ‘ಕನ್ನಡವನ್ನು ಉಳಿಸೋಣ’ ಎನ್ನುವ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮ ಮನೆಯಲ್ಲಿ ನಮ್ಮ ತಾಯಿಗೆ ಸ್ಥಾನ ಇಲ್ಲದ ಸ್ಥಿತಿ ನಿರ್ವಣವಾಗಿದೆ. ಈ ಸ್ಥಿತಿಯಲ್ಲಿ ಇಂದು ನಮ್ಮ ಕನ್ನಡ ಇದೆ. ನಮ್ಮ ಯುವಜನರು ಕನ್ನಡ ಓದುವುದಿರಲಿ ಮಾತನಾಡುವುದಕ್ಕೂ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡದ ಅಸ್ಮಿತೆ ಉಳಿಯುವುದೇ ಎಂಬ ಆತಂಕ ಎದುರಾಗಿದೆ.
ಸಮ್ಮೇಳನದಲ್ಲಿ ಮೂರೇ ನಿರ್ಣಯ: ಹಾವೇರಿ ಜಿಲ್ಲೆಯಲ್ಲಿ ನಡೆದ 86ನೇ ಸಮ್ಮೇಳನದಲ್ಲೂ ಮೂರು ನಿರ್ಣಯಗಳನ್ನು ಮಾತ್ರವೇ ಕೈಗೊಳ್ಳಲಾಗಿತ್ತು. ಅವೆಲ್ಲವೂ ಅನುಷ್ಠಾನಗೊಂಡಿವೆ. ಮೊದಲಿಗೆ, ‘ಸಮಗ್ರ ಕನ್ನಡ ಭಾಷಾ ಆಭಿವೃದ್ಧಿ ವಿಧೇಯಕ’ ಕಾನೂನಾಗಿ ಅನುಷ್ಠಾನಗೊಳ್ಳಬೇಕು ಎಂಬ ನಿರ್ಣಯದ ಜಾರಿಗೆ ಸರ್ಕಾರ ಕ್ರಮ ವಹಿಸಿದ್ದು, ಅಧಿವೇಶನದಲ್ಲಿ ಚರ್ಚೆಯಾಗಿ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಎರಡನೆಯದಾಗಿ, ಮೈಸೂರು ಮತ್ತು ಬೆಳಗಾವಿ ನಂತರ ಈವರೆಗೂ ವಿಶ್ವ ಕನ್ನಡ ಸಮ್ಮೇಳನ ನಡೆದಿಲ್ಲ. ವಿಶ್ವ ಕನ್ನಡ ಸಮ್ಮೇಳನ ನಡೆಸಲು ಸರ್ಕಾರ ಬಜೆಟ್ನಲ್ಲಿ ಹಣ ಸಹ ಮೀಸಲಿಟ್ಟಿತ್ತು. ಈಗಿನ ಸರ್ಕಾರವೂ ಸಮ್ಮೇಳನ ನಡೆಸಲು ಆಸಕ್ತಿ ವಹಿಸಿದ್ದು, ಮುಂದಿನ ವರ್ಷ ನಡೆಯಲಿದೆ. ಮೂರನೆಯದಾಗಿ, ಕನ್ನಡಕ್ಕಾಗಿ ಹೋರಾಟ ನಡೆಸಿದವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದುಪಡಿಸಬೇಕು ಎಂಬುದು. ಅದಕ್ಕೂ ಸರ್ಕಾರ ಕ್ರಮ ವಹಿಸಿದೆ. ಹಾಗಾಗಿ ಈ ಬಾರಿಯೂ ಮೂರು ನಿರ್ಣಯಗಳನ್ನು ಕೈಗೊಳ್ಳಲಿದ್ದು, ನಂತರ ಅದರ ಹಿಂದೆ ಬಿದ್ದು ಅನುಷ್ಠಾನಗೊಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಸಹ ಕನ್ನಡ ಸಾಹಿತ್ಯ ಪರಿಷತ್ತು ಮಾಡಲಿದೆ.
ಊಟಕ್ಕೂ ಪರಿಷತ್ತಿಗೂ ಸಂಬಂಧವಿಲ್ಲ: ಸಮ್ಮೇಳನದಲ್ಲಿ ಸುಮಾರು 52 ಸಮಿತಿಗಳಿದ್ದು, ಪ್ರತಿಯೊಂದಕ್ಕೂ ಆಯಾ ಸಮಿತಿ ಸದಸ್ಯರು ರ್ಚಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಹಾಗಾಗಿ ಪರಿಷತ್ತಿಗೂ ಹಾಗೂ ಆಹಾರ ವ್ಯವಸ್ಥೆಗೂ ಯಾವುದೇ ಸಂಬಂಧವಿಲ್ಲ. ಊಟದ ವ್ಯವಸ್ಥೆಗೆ ಸಂಬಂಧಿಸಿ ಕಳೆದ ಜೂನ್ನಲ್ಲಿ ಎ.ಬಿ.ರಮೇಶ್ ಬಾಬು ಬಂಡಿಸಿದ್ದೇಗೌಡರ ಅಧ್ಯಕ್ಷತೆಯಲ್ಲಿ 35 ಜನರ ಆಹಾರ ಸಮಿತಿ ರಚಿಸಲಾಗಿದೆ. ಮೂರು ದಿನಗಳ ಊಟೋಪಚಾರಗಳ ವ್ಯವಸ್ಥೆಯನ್ನು ಈ ಸಮಿತಿ ನೋಡಿಕೊಳ್ಳಲಿದೆ. ಈಗಾಗಲೇ ಸಮಿತಿ ಸಭೆ ನಡೆಸಿ ಸಮ್ಮೇಳನದಲ್ಲಿ ಮುದ್ದೆ, ಸೊಪ್ಪಿನ ಸಾಂಬಾರ್ ವಿಶೇಷ ತಿನಿಸಾಗಿದ್ದು, ಉತ್ತರ, ದಕ್ಷಿಣ ಕರ್ನಾಟಕ ಶೈಲಿಯ ಊಟವನ್ನು 300 ಕೌಂಟರ್ಗಳಲ್ಲಿ ವ್ಯವಸ್ಥೆ ಮಾಡುವ ನಿರ್ಣಯ ಕೈಗೊಂಡಿದೆ ಎಂದು ತಿಳಿಸಿದರು.
ಕನ್ನಡ ಶಾಲೆಗಳ ಸ್ಥಿತಿ ಆತಂಕಕಾರಿ: ಕನ್ನಡ ಭಾಷೆಯಲ್ಲಿ ಕಲಿಯುವುದರಿಂದ ಸ್ಪಷ್ಟವಾಗಿ ಯೋಚಿಸುವ ಸಾಮರ್ಥ್ಯ ಹೊಂದುತ್ತೇವೆ. ಆದರೆ ಕನ್ನಡ ಮಾಧ್ಯಮದಲ್ಲಿ ಕಲಿಯುವವರೇ ಇಲ್ಲದೆ, ಶಿಕ್ಷಕರು, ಸುಸಜ್ಜಿತ ಕಟ್ಟಡ ಸೇರಿ ಮೂಲಸೌಕರ್ಯಗಳನ್ನು ಹೊಂದಿರುವ ಕನ್ನಡ ಶಾಲೆಗಳೂ ವಿದ್ಯಾರ್ಥಿಗಳಿಲ್ಲದೆ ಮುಚ್ಚುತ್ತಿವೆ. ಮತ್ತೊಂದೆಡೆ ಸರ್ಕಾರವೇ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಭಾಷಾ ಮಾಧ್ಯಮ ಆರಂಭಿಸಿ ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಮಾರ್ಪಡಿಸುತ್ತಿದೆ. ಅವರಿಗೆ ಆಂಗ್ಲ ಭಾಷೆ ಅನಿವಾರ್ಯತೆ ಎನ್ನಿಸಿರಬೇಕು. ಇದಕ್ಕೆ ಕಾರಣ ಇನ್ನೂ ಕನ್ನಡ ಅನ್ನದ ಭಾಷೆ ಆಗಿಲ್ಲ ಎಂಬುದು. ಹಾಗಾಗಿಯೇ ಸಾಮಾನ್ಯರೂ ತಮ್ಮ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಕಲಿಯಬೇಕು ಎಂದು ಬಯಸುತ್ತಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಕನ್ನಡ ಶಾಲೆ ತೆರೆಯಲು ನೂರಾರು ಕಾನೂನು ಮಾಡಿರುವ ಸರ್ಕಾರ ಆಂಗ್ಲ ಶಾಲೆಗಳಿಗೆ ಸುಲಭ ದಾರಿ ಮಾಡಿಕೊಟ್ಟಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಮ್ಮೇಳನದ ಸಂದೇಶ: ಅನ್ಯಭಾಷೆ ಮತ್ತು ಅನ್ಯ ಸಂಸ್ಕೃತಿಯ ಹೊಡೆತ ಬಿದ್ದಿದ್ದರೂ, ಜಗ್ಗದೆ ಮಂಡ್ಯದ ಜನರು ಅವನ್ನೆಲ್ಲ ಮೆಟ್ಟಿ ನಿಂತಿದ್ದಾರೆ. ಉದಾಹರಣೆಗೆ ಮಂಡ್ಯ ಜಿಲ್ಲೆ ಪಕ್ಕದಲ್ಲೇ ಮೈಸೂರು ಇದೆ. ಸಮೀಪದಲ್ಲೇ ಗಡಿ ಪ್ರದೇಶವಿದ್ದು, ಅಲ್ಲಿ ತಮಿಳು ಮಾತನಾಡುವವರು ಬಹಳ ಮಂದಿ ಸಿಗುತ್ತಾರೆ. ಆದರೆ ಮಂಡ್ಯದ ಜನರು ಮಾತ್ರ ಅಪ್ಪಟ ಕನ್ನಡ ಮಾತನಾಡುವುದನ್ನು ಬಿಟ್ಟಿಲ್ಲ. ಮನಸ್ಸು ಮಾಡಿದರೆ ತಮ್ಮತನವನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ಸಾಧ್ಯ ಎಂಬುದನ್ನು ಮಂಡ್ಯದ ಜನರು ತೋರಿಸಿಕೊಟ್ಟಿದ್ದಾರೆ. ಅದನ್ನು ಇತರ ಜಿಲ್ಲೆಯವರೂ ಅನುಕರಿಸಬೇಕು ಎಂಬ ಸ್ಪಷ್ಟ ಸಂದೇಶ ಈ ಸಮ್ಮೇಳನದ ಮೂಲಕ ದೊರೆಯಲಿದೆ.
ಪ್ರಸ್ತುತತೆಗೆ ಪೂರಕ ಗೋಷ್ಠಿಗಳು: ಈ ಬಾರಿ ಸಮ್ಮೇಳನದಲ್ಲಿ ಮಂಡ್ಯದ ಹಿನ್ನೆಲೆ ಇಟ್ಟುಕೊಂಡು ನಾಡು ಎದುರಿಸುತ್ತಿರುವ ಕನ್ನಡದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರಸ್ತುತತೆ ಮತ್ತು ಪ್ರಾದೇಶಿಕತೆಗೆ ಪೂರಕವಾಗಿ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಗೋಷ್ಠಿಗಳನ್ನು ನಿರ್ಧರಿಸುವ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿನ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳು ಸೇರಿ 22 ಸಂಸ್ಥೆಗಳ ಅಧ್ಯಕ್ಷರು, ಸಾಹಿತ್ಯ-ಸಾಂಸ್ಕೃತಿಕ ಚಿಂತಕರು, ಕನ್ನಡ ಪತ್ರಿಕೆಗಳ ಸಂಪಾದಕರು, ವಿಶ್ವವಿದ್ಯಾಲಯಗಳ ಕುಲಸಚಿವರುಗಳು ಸೇರಿ 104 ಪ್ರಮುಖರಿಗೆ ಪತ್ರ ಬರೆದು, ಅವರೊಂದಿಗೆ 4-5 ಸುತ್ತಿನ ಸಭೆ ನಡೆಸಲಾಗಿದೆ.
ಕೋಟಿ ಸದಸ್ಯತ್ವ: ಕನ್ನಡ ಸಾಹಿತ್ಯ ಪರಿಷತ್ತನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಲು ಒಂದು ಕೋಟಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಪೂರಕವಾಗಿ ಸರ್ಕಾರವೂ ‘ಸರ್ಕಾರಿ ನೌಕರರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಲು ಸರ್ಕಾರದ ಅನುಮತಿಯ ಅಗತ್ಯವಿಲ್ಲ’ ಎಂದು ಆದೇಶ ಮಾಡಿದೆ. ಸದ್ಯ ಪರಿಷತ್ತಿನ ಸದಸ್ಯರ ಸಂಖ್ಯೆ 5 ಲಕ್ಷ ದಾಟಿದ್ದು, ನನ್ನ ಅಧಿಕಾರಾವಧಿಯಲ್ಲಿ ಒಂದು ಕೋಟಿ ತಲುಪಲಿದೆ. ಐಟಿ ಕಂಪನಿಗಳು, ಕಾರ್ವಿುಕರು, ರೈತರು, ಉದ್ಯಮಿಗಳು ಎಲ್ಲರನ್ನೂ ಭೇಟಿ ಮಾಡಿ ರ್ಚಚಿಸಲಾಗಿದೆ. ಶೀಘ್ರ ಸದಸ್ಯತ್ವ ಅಭಿಯಾನ ಅರಂಭಿಸಲಾಗುವುದು.