ಆಡಳಿತದಲ್ಲೂ ಕನ್ನಡ ಕಡ್ಡಾಯ ಅನುಷ್ಠಾನವಾಗಲಿ

sgr kannada
ಸಾಗರದಲ್ಲಿ ತಾಲೂಕು ಆಡಳಿತ, ನಗರಸಭೆ, ಕಸಾಪದಿಂದ ಆಯೋಜಿಸಿದ್ದ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಆರ್.ಯತೀಶ್, ಎಚ್.ಕೆ.ನಾಗಪ್ಪ, ಚಂದ್ರಶೇಖರ್ ನಾಯ್ಕ, ಗುರುಕೃಷ್ಣ ಶೆಣೈ ಇತರರಿದ್ದರು.
Published on

ಸಾಗರ: ಮಲೆನಾಡು ಭಾಗದಲ್ಲಿ ಭಾಷೆ, ಸಾಹಿತ್ಯ, ಸಂಸ್ಕೃತಿ ಮೂಲಕ ಕನ್ನಡ ಕಟ್ಟುವ ಕೆಲಸ ನಿರಂತರವಾಗಿ ನಡೆದುಕೊಂಡು ಬರುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ತಾಲೂಕು ಆಡಳಿತ, ನಗರಸಭೆ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಶನಿವಾರ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಾಗರಕ್ಕೆ ಆಗಮಿಸಿದ್ದ ಕನ್ನಡ ರಥವನ್ನು ಗಣಪತಿ ದೇವಸ್ಥಾನದ ಆವರಣದಲ್ಲಿ ಸ್ವಾಗತಿಸಿ, ನಗರಸಭೆ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಿಗರು ಸುವರ್ಣ ಕರ್ನಾಟಕ ವರ್ಷಾಚರಣೆ ಸಂಭ್ರಮದಲ್ಲಿದ್ದಾರೆ. ಕರ್ನಾಟಕವೆಂದು ನಾಮಕರಣ ಮಾಡಿ ಐದು ದಶಕ ಸಂದಿರುವ ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಅನೇಕ ಕನ್ನಡಪರ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಂಡ್ಯದಲ್ಲಿ ಡಿಸೆಂಬರ್‌ನಲ್ಲಿ ನಡೆಯುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ರಥವನ್ನು ಸಡಗರ, ಸಂಭ್ರಮದಿಂದ ಬರಮಾಡಿಕೊಂಡಿದ್ದೇವೆ. ಕರ್ನಾಟಕ ಸರ್ಕಾರ ನಾಡು-ನುಡಿ, ನೆಲ-ಜಲ ಸಂರಕ್ಷಣೆಗೆ ಮೊದಲ ಆದ್ಯತೆ ನೀಡುತ್ತದೆ. ಕೇವಲ ಭಾಷಣ, ಘೋಷಣೆಗಳಿಂದ ಭಾಷೆ ಉಳಿಯುವುದಿಲ್ಲ. ಆಡಳಿತದಲ್ಲಿಯೂ ಕನ್ನಡ ಭಾಷೆ ವ್ಯವಸ್ಥಿತವಾಗಿ ಅನುಷ್ಠಾನವಾಗಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಸಾಗರ ಸಾಂಸ್ಕೃತಿಕವಾಗಿ ಅತ್ಯಂತ ಭದ್ರ ನೆಲೆಗಟ್ಟು ಹೊಂದಿದೆ. ಕನ್ನಡಜ್ಯೋತಿ ರಥವನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ನಗರಸಭೆಯಿಂದ ವೈಭವದ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿರುವುದು ಜಿಲ್ಲೆಯಲ್ಲೇ ಮೊದಲು ಎನ್ನುವಂತಾಗಿದೆ. ಕನ್ನಡ ನಾಡು-ನುಡಿ ಬಗ್ಗೆ ಯುವಪೀಳಿಗೆ ವಿಮುಖರಾಗುತ್ತಿದ್ದು, ಆಂಗ್ಲ ವ್ಯಾಮೋಹ ಹೆಚ್ಚುತ್ತಿದೆ. ಕನ್ನಡಿಗರು ಕನ್ನಡತನ ಉಳಿಸಿಕೊಳ್ಳಲು ದೃಢಸಂಕಲ್ಪ ಮಾಡಬೇಕು ಎಂದು ಹೇಳಿದರು.

ಉಪವಿಭಾಗಾಧಿಕಾರಿ ಆರ್.ಯತೀಶ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ, ತಾಪ ಇಒ ಗುರುಕೃಷ್ಣ ಶೆಣೈ, ತಾಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ಲೋಕೇಶ್‌ಕುಮಾರ್, ಡಾ. ಪ್ರಸನ್ನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net