ಟ್ವಿಟರ್​ನಲ್ಲಿ ಇಂದು ಇಂಡಿಯಾ ಟ್ರೆಂಡಿಂಗ್​ನಲ್ಲಿ ಕನ್ನಡ; ಸೋಷಿಯಲ್ ಮೀಡಿಯಾದಲ್ಲಿ ಕರಜೋಡಿಸಿದ ಕನ್ನಡಿಗರು...

kannada 2
Published on

ಬೆಂಗಳೂರು: ಟ್ವಿಟರ್​​ನಲ್ಲಿ ಇಂದು ಕನ್ನಡ ಇಂಡಿಯಾ ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಂಡಿದೆ. ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಬಹಳಷ್ಟು ಕನ್ನಡಿಗರು ಕರಜೋಡಿಸಿದ್ದರಿಂದ ಇಂದು #Kannada ಇಂಡಿಯಾ ಟ್ರೆಂಡಿಂಗ್​ನಲ್ಲಿ ಕಂಡುಬಂದಿದೆ.

ರಾಜ್ಯ ಸರ್ಕಾರ ರಾಮನಗರದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಮುಂದಾಗಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಇಂದು ಟ್ವಿಟರ್​ನಲ್ಲಿ ಅಭಿಯಾನವನ್ನು ಕೈಗೊಂಡಿತ್ತು. ಸರ್ಕಾರ ರಾಜ್ಯದಲ್ಲಿ ಕನ್ನಡಿಗರ ತೆರಿಗೆ ಹಣದಲ್ಲಿ ಸಂಸ್ಕೃತ ವಿವಿ ಸ್ಥಾಪಿಸಲು ಮುಂದಾಗಿದ್ದು, ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಲು ಈ ಅಭಿಯಾನ ಹಮ್ಮಿಕೊಂಡಿದ್ದಾಗಿ ಕರವೇ ಹೇಳಿಕೊಂಡಿದೆ.

ಸರ್ಕಾರ ಏನೇ ಬಲಪ್ರಯೋಗ ಮಾಡಿದರೂ ಸಂಸ್ಕೃತ ವಿವಿ ಸ್ಥಾಪನೆಗೆ ಅವಕಾಶ ಕೊಡುವುದಿಲ್ಲ. ಸಂಸ್ಕೃತ ವಿವಿ ಸ್ಥಾಪನೆ ಹಿನ್ನೆಲೆಯ ಹುನ್ನಾರಗಳನ್ನು ಬಯಲಿಗೆಳೆದು ಜನಜಾಗೃತಿ ನಡೆಸಲು ಅಭಿಯಾನ ನಡೆಸಲಾಗಿದೆ. ಅದಾಗ್ಯೂ ಸರ್ಕಾರ ಮಣಿಯದಿದ್ದರೆ ಮುಂದೆ ರಾಜ್ಯಾದ್ಯಂತ ಬೀದಿಗಿಳಿದು ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net