

ಬೆಂಗಳೂರು: ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ಬೇಡಿಕೆ ನಡುವೆಯೇ ಇಂಧನ ಇಲಾಖೆಯ ವಿವಿಧ ಹುದ್ದೆಗಳ ನೇಮಕ ಪರೀಕ್ಷೆಯಲ್ಲಿ ‘ಕನ್ನಡದ ಕಂಪು’ ಪಸರಿಸಿದೆ. ಕನ್ನಡ ಭಾಷಾ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದು ತೇರ್ಗಡೆ ಹೊಂದಿದರಷ್ಟೇ ಅರ್ಹತಾ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್)ದ ಐದು ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿಯಿರುವ ಸಹಾಯಕ, ಕಿರಿಯ ಇಂಜಿನಿಯರ್ ಹಾಗೂ ಕಿರಿಯ ಸಹಾಯಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಗ್ರೂಪ್ ಬಿ ಮತ್ತು ಸಿ ಪದವೃಂದದ ಈ ಹುದ್ದೆಗಳಿಗೆ ಕನ್ನಡ ಭಾಷೆ ಪರೀಕ್ಷೆ ಕಡ್ಡಾಯಗೊಳಿಸಿದೆ. ಆ ಮೂಲಕ ಬಹು ದಿನಗಳ ನಂತರ ಕನ್ನಡಿಗರ ಬೇಡಿಕೆ ಈಡೇರಿದೆ. ಇಂಜಿನಿಯರ್ ಇನ್ನಿತರ ಹುದ್ದೆಗಳು ತಾಂತ್ರಿಕ ಆಗಿದ್ದರೂ ಕನ್ನಡಿಗರ ಮಧ್ಯೆ ಕೆಲಸ ಮಾಡಬೇಕಾಗಿದೆ ಎಂಬುದನ್ನು ಸರ್ಕಾರ ಮನಗಂಡು ಮತ್ತೆ ಕನ್ನಡಕ್ಕೆ ಪ್ರಾಮುಖ್ಯತೆ ನೀಡಿದೆ.
ಬದಲಾವಣೆ ಹಾದಿ: ಕಾಂಗ್ರೆಸ್ ಆಡಳಿತಾವಧಿಯಲ್ಲಿ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಸಹಾಯಕ, ಕಿರಿಯ ಇಂಜಿನಿಯರ್ ಇನ್ನಿತರ ತಾಂತ್ರಿಕ ಹುದ್ದೆಗಳ ನೇಮಕದಲ್ಲಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿತ್ತು. ಇದರಿಂದ ಅನ್ಯರಾಜ್ಯಗಳ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗಿತ್ತು. ಈ ನಿರ್ಧಾರದ ವಿರುದ್ಧ ಕನ್ನಡಪರ ಸಂಘಟನೆಗಳು ಧ್ವನಿ ಎತ್ತಿ, ವಿದ್ಯಾರ್ಥಿ ಒಕ್ಕೂಟಗಳು ವಿರೋಧ ವ್ಯಕ್ತಪಡಿಸಿದರೂ ಪ್ರಯೋಜನವಾಗಿರಲಿಲ್ಲ. ವಿನಾಯಿತಿ ಲಾಭ ಪಡೆದ ಅನ್ಯರಾಜ್ಯಗಳ ಅದರಲ್ಲೂ ವಿಶೇಷವಾಗಿ ಆಂಧ್ರಪ್ರದೇಶದ ಅಭ್ಯರ್ಥಿಗಳು 60ಕ್ಕೂ ಹುದ್ದೆ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದರು. ಗ್ರೂಪ್ ಬಿ ಮತ್ತು ಸಿ ವೃಂದ ಹುದ್ದೆಗಳಲ್ಲಿ ಅನ್ಯರಾಜ್ಯದವರನ್ನು ತಂದು ಕೂಡಿಸಿದ ನಡೆ ಕೆಂಗಣ್ಣಿಗೆ ಗುರಿಯಾಗಿತ್ತು.
ಸಂಘಟನೆಗಳ ಧ್ವನಿಗೆ ಸ್ಪಂದನೆ: ಕೆಪಿಟಿಸಿಎಲ್ ನೇಮಕದಲ್ಲಿ ಮತ್ತೆ ಕನ್ನಡ ಭಾಷಾ ಪರೀಕ್ಷಾ ಕಡ್ಡಾಯಗೊಳಿಸುವ ಮೂಲಕ ಕನ್ನಡಪರ ಸಂಘಟನೆಗಳ ಧ್ವನಿಗೂ ಸರ್ಕಾರ ಸ್ಪಂದಿಸಿದೆ. ದೀರ್ಘಾವಧಿ ನಂತರ ತುಂಬುತ್ತಿರುವ ಹುದ್ದೆಗಳು ಕನ್ನಡಿಗರು, ಕನ್ನಡ ಬಲ್ಲ ಅರ್ಹರಿಗೆ ದಕ್ಕುವ ರೀತಿಯಲ್ಲಿ ಕ್ರಮ ಕೈಗೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನೂ ಹೊಂದಿರುವ ಇಂಧನ ಸಚಿವ ವಿ.ಸುನಿಲ್ಕುಮಾರ್ ಇಲಾಖೆಯಲ್ಲಿ ಹಿಂದೆ ನಡೆದ ನೇಮಕದಲ್ಲಿನ ವಿದ್ಯಮಾನದ ಮಾಹಿತಿ ಪಡೆದಿದ್ದರು. ಮತ್ತದೇ ಲೋಪ, ಅನ್ಯಾಯದ ಅಪಸ್ವರ ಮರುಕಳಿಸಬಾರದು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಎಷ್ಟು ಹುದ್ದೆಗಳು ಖಾಲಿ?
ಸಹಾಯಕ ಇಂಜಿನಿಯರ್ (ವಿದ್ಯುತ್)- 393, ಕಲ್ಯಾಣ ಕರ್ನಾಟಕ- 106. ಸಹಾಯಕ ಇಂಜಿನಿಯರ್ (ಸಿವಿಲ್)- 21, ಕಲ್ಯಾಣ ಕರ್ನಾಟಕ- 7, ಕಿರಿಯ ಇಂಜಿನಿಯರ್ (ವಿದ್ಯುತ್)- 477, ಕಲ್ಯಾಣ ಕರ್ನಾಟಕ- 82, ಕಿರಿಯ ಇಂಜಿನಿಯರ್ (ಸಿವಿಲ್)- 21, ಕಲ್ಯಾಣ ಕರ್ನಾಟಕ- 8, ಕಿರಿಯ ಸಹಾಯಕ- 357
ರಾಜ್ಯದ ಯುವ ಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಇಲಾಖೆ ನೇಮಕದಲ್ಲಿ ಕನ್ನಡ ಭಾಷಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ಸೂಕ್ತ ನಿಬಂಧನೆ ಗಳನ್ನು ವಿಧಿಸಿ ಕಾನೂನು ತೊಡಕುಗಳು ಎದುರಾಗದಂತೆ ಎಚ್ಚರ ವಹಿಸಲಾಗಿದೆ. | ವಿ.ಸುನಿಲ್ಕುಮಾರ್ ಇಂಧನ ಸಚಿವ