

ಬೆಂಗಳೂರು: ಶಕ್ತಿಸೌಧ ವಿಧಾನಸೌದ, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೈಕೋರ್ಟ್ ಆವರಣ, ಮಂಗಳೂರಿನ ತಣ್ಣೀರುಬಾವಿ ಕಡಲ ಕಿನಾರೆ, ತುಮಕೂರಿನ ಸಿದ್ಧಗಂಗಾ ಮಠದ ಆವರಣ ಸೇರಿದಂತೆ 447 ಸ್ಥಳಗಳಲ್ಲಿ ಗುರುವಾರ ಕನ್ನಡದ ಕಹಳೆ ಮೊಳಗಿತು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ ಮಾತಾಡ್ ಮಾತಾಡ್ ಕನ್ನಡ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಸುಮಾರು 20,49,743 ಜನರು ಏಕಕಾಲದಲ್ಲಿ ಕನ್ನಡ ಗೀತೆಗಳನ್ನು ಹಾಡುವ ಮೂಲಕ ದಶದಿಕ್ಕುಗಳಲ್ಲೂ ಕನ್ನಡದ ಕಂಪು ಹರಿಸಿದರು. ರಾಜ್ಯಾದ್ಯಂತ ಬೆಳಗ್ಗೆ 11 ಗಂಟೆಗೆ ಸರಿಯಾಗಿ ನಾಡಗೀತೆಯೊಂದಿಗೆ ಆರಂಭವಾದ ಗೀತಗಾಯನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’ ಕೆ.ಎಸ್. ನಿಸಾರ್ ಅಹಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಹಂಸಲೇಖ ರಚಿತ ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಮೂರು ಕನ್ನಡ ಗೀತೆಗಳನ್ನು ಹಾಡಲಾಯಿತು.
ಇತಿಹಾಸ ನಿರ್ವಿುಸಿದ ಶಕ್ತಿಕೇಂದ್ರ: ಬೆಂಗಳೂರಿನಲ್ಲಿ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೆಲೆ ನೆರೆದಿದ್ದ ಸಾವಿರಾರು ಮಂದಿ ಕನ್ನಡ ಗೀತೆಗಳಿಗೆ ಧ್ವನಿಯಾದರು. ಅಧಿಕಾರಿಗಳು, ಸಿಬ್ಬಂದಿ, ಅರಕ್ಷಕರು ಸೇರಿದಂತೆ ಎಲ್ಲ ವಲಯಗಳಲ್ಲಿ ಕಾರ್ಯನಿರ್ವಹಿಸುವವರು ಒಂದೇ ವೇದಿಕೆಯಲ್ಲಿ ಒಟ್ಟಾಗಿ ನಿಂತು ಹಾಡುವ ಮೂಲಕ ಇತಿಹಾಸ ನಿರ್ವಿುಸಿದರು. ಆ ಮೂಲಕ ‘ಕನ್ನಡಕ್ಕಾಗಿ ನಾವು’ ಅಭಿಯಾನ ಚರಿತ್ರಾರ್ಹ ದಾಖಲೆ ನಿರ್ವಿುಸಿತು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್, ಭಾರತೀಯ ಆಡಳಿತ ಸೇವೆ, ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳು ಗೀತೆಗಳಿಗೆ ಧ್ವನಿ ನೀಡಿದರು. ಇದೇ ರೀತಿ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಪ್ರತಿಜ್ಞಾವಿಧಿ ಸ್ವೀಕಾರ: ಗಾಯನ ನಂತರ ಎಲ್ಲರೂ ‘ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರ ದಲ್ಲಿ ಕನ್ನಡವನ್ನೇ ಬಳಸುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ, ಕನ್ನಡ ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಕಟಿಬದ್ಧನಾಗಿರುತ್ತೇನೆ’ ಎಂದು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ತಂತ್ರಜ್ಞಾನದ ಈ ಕಾಲಘಟ್ಟದಲ್ಲಿ ಕನ್ನಡ ಉಳಿದರೆ ನಾವು ಉಳಿ ದೇವು ಎಂಬ ಭಾವನೆಯಿಂದ ಪ್ರತಿಯೊಬ್ಬರೂ ಕನ್ನಡ ಬಳಕೆ ಮಾಡಬೇಕು, ಮಾತನಾಡಬೇಕು, ಓದಬೇಕು, ಬರೆಯಬೇಕು. ಕನ್ನಡ ಭಾಷೆ ಬಹಳ ಶ್ರೀಮಂತ. ಅದನ್ನು ಉಳಿಸಿ ಬೆಳೆಸುವ ಕೆಲಸವನ್ನು ಎಲ್ಲರೂ ಮಾಡಬೇಕು. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಎಲ್ಲೆಲ್ಲಿ ಅನುರಣನ?: ಬೆಂಗಳೂರಿನ ವಿಧಾನಸೌಧದ ಜತೆಗೆ ಬೆಳಗಾವಿಯ ಸುವರ್ಣಸೌಧ, ಹೈಕೋರ್ಟ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿ, ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ, ರವೀಂದ್ರ ಕಲಾಕ್ಷೇತ್ರ, ಪುರಭವನ, ಬೆಂಗಳೂರಿನ ಬನಶಂಕರಿ ದೇವಾಲಯ, ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ ಡಿಪೋಗಳಲ್ಲಿ, ಶಾಲಾ ಕಾಲೇಜುಗಳು, ಪೊಲೀಸ್ ಠಾಣೆಗಳಲ್ಲಿ, ದೇವಾಲಯಗಳು, ರಂಗ ಮಂದಿರಗಳಲ್ಲಿ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ, ಬಿಇಎಲ್, ಎಚ್ಎಎಲ್, ಬಿಎಸ್ಎನ್ಎಲ್, ಐಟಿಐ ಸೇರಿದಂತೆ ಬೃಹತ್ ಖಾಸಗಿ ಕಂಪನಿಗಳು ಸೇರಿದಂತೆ ರಾಜಧಾನಿ ಬೆಂಗಳೂರಿನಿಂದ ಹಿಡಿದು ಗ್ರಾಮಮಟ್ಟದ ವರೆಗೂ ಸಾವಿರಾರು ಕೇಂದ್ರಗಳಿಂದ ಲಕ್ಷಾಂತರ ಮಂದಿ ಭಾಗವಹಿಸಿದರು.
ರಾಜ್ಯಾದ್ಯಂತ ನೂರಾರು ಕೇಂದ್ರಗಳಲ್ಲಿ ಲಕ್ಷಾಂತರ ಜನರು ಕನ್ನಡ ಗೀತೆಗಳಿಗೆ ದನಿಯಾಗಿದ್ದಾರೆ. ಮಕ್ಕಳಿಗೆ ಮನೆಗಳಲ್ಲಿ ಕನ್ನಡ ಗೀತೆ ಹಾಡಿಸಬೇಕು, ಕನ್ನಡ ಪುಸ್ತಕಗಳನ್ನು ಓದಿಸಬೇಕು, ಅನ್ಯ ಭಾಷಾ ವ್ಯಾಮೋಹದಲ್ಲಿ ಕನ್ನಡ ಭಾಷಾಪ್ರೇಮ ಕಡಿಮೆಯಾಗದಂತೆ ಕಾಳಜಿ ವಹಿಸಬೇಕು. ಆ ಮೂಲಕ ಭವ್ಯಭಾಷೆ ಕನ್ನಡವನ್ನು ಉಳಿಸಿ ಬೆಳೆಸಬೇಕು. | ಸುನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ
ಹುಬ್ಬಳ್ಳಿ: ‘ಕನ್ನಡಕ್ಕಾಗಿ ನಾವು’ ಅಭಿಯಾನದ ಅಂಗವಾಗಿ ನಗರದ ಕನ್ನಡ ಭವನದಲ್ಲಿ ಗುರುವಾರ ಆಯೋಜಿಸಿದ ಲಕ್ಷ ಕಂಠಗಳ ಗೀತ ಗಾಯನ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ಮೇಲಿನ ಪ್ರೀತಿ, ಅಭಿಮಾನ ಕಾಣಸಿಕ್ಕಿತು. ಸಿಎಂ ಬಸವರಾಜ ಬೊಮ್ಮಾಯಿ ಉಪಸ್ಥಿತಿಯಲ್ಲಿ ಕನ್ನಡಿಗರು ಸಂಭ್ರಮಿಸಿದರು. ಬೊಮ್ಮಾಯಿ ಕೈಯಲ್ಲಿ ಕೆಂಪು ಮತ್ತು ಹಳದಿ ವರ್ಣದ ಕನ್ನಡ ಬಾವುಟ ಹಿಡಿದು ಹಾಡಿಗೆ ಧ್ವನಿಗೂಡಿಸಿದರು. ಅವರ ಕೋರಿಕೆ ಮೇರೆಗೆ 2ನೇ ಬಾರಿ ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಹಾಡನ್ನು ಹೇಳಲಾಯಿತು. ಹಲವು ಸವಾಲುಗಳ ನಡುವೆಯೂ ಕನ್ನಡ ಭಾಷೆಯ ಬೆಳವಣಿಗೆಗೆ ಏನೆಲ್ಲ ಮಾಡಲು ಸಾಧ್ಯವೋ ಅವೆಲ್ಲವನ್ನು ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಬೊಮ್ಮಾಯಿ ಹೇಳಿದರು. ಯಾವ ಭಾಷೆಯ ಬೇರು ಗಟ್ಟಿಯಾಗಿರುತ್ತದೋ ಆ ಭಾಷೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಕನ್ನಡ ಅತ್ಯಂತ ಪುರಾತನ ಹಾಗೂ ಶ್ರೀಮಂತ ಭಾಷೆಯಾಗಿದೆ. ಇದನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗಲು ಸರ್ಕಾರ ಸದಾ ಪ್ರಯತ್ನಿಸಲಿದೆ ಎಂದರು.
ಜೋಶಿ ಕನ್ನಡ ಹಾಡು: ಮಾತಾಡ್ ಮಾತಾಡ್ ಕನ್ನಡ -ಕನ್ನಡಕ್ಕಾಗಿ ನಾವು, ಕರ್ನಾಟಕ ರಾಜ್ಯೋತ್ಸವ ಅಭಿಯಾನದ ಅಂಗವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಷ್ಟ್ರಕವಿ ಕುವೆಂಪು ರಚಿಸಿರುವ ಬಾರಿಸು ಕನ್ನಡ ಡಿಂಡಿಮವ ಹಾಡನ್ನು ಹಾಡಿ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.