ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ; ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ

Govt School
Published on

ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ ಮಾಡಿದೆ.

ಹಲವು ಸರ್ಕಾರಿ ಶಾಲೆಗಳ ಕೊಠಡಿಗಳು ದುರಸ್ತಿಯಲ್ಲಿದ್ದು, ಮಳೆ ನೀರಿನ ಸೋರಿಕೆಯಿಂದ ತರಗತಿ ನಡೆಸುವುದು ಕಷ್ಟವಾಗಿದೆ. ಇಂತಹ ಶಾಲೆಗಳನ್ನು ಗುರುತಿಸಿ, ದುರಸ್ತಿ ಕಾರ್ಯಕ್ಕೆ ಶಿಕ್ಷಣ ಇಲಾಖೆ ಕೂಡಲೇ ಅಗತ್ಯ ಹಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದೆ.

ಶೈಕ್ಷಣಿಕ ವರ್ಷ ಪ್ರಾರಂಭವಾದ ನಂತರ ಶಿಕ್ಷಕರ ವರ್ಗಾವಣೆ ನಡೆಸುತ್ತಿದ್ದರೆ, ಯಾವ ಶಾಲೆಯಲ್ಲಿ ಯಾವ ಹುದ್ದೆ ಖಾಲಿಯಾಗುತ್ತದೆ ಎಂಬುದರ ಸ್ಪಷ್ಟ ಮಾಹಿತಿ ಇರುವುದಿಲ್ಲ. ಇದರಿಂದ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಕಷ್ಟವಾಗುತ್ತದೆ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಖಾಲಿ ಇರುವ ಗಣಿತ, ಇಂಗ್ಲಿಷ್​, ಹಿಂದಿ ಇತ್ಯಾದಿ ವಿಷಯಗಳಿಗೆ ಅತಿಥಿ ಶಿಕ್ಷಕರು ಸಿಗುವುದು ಕಷ್ಟ ಎಂದಿದೆ.

ಸರ್ಕಾರ ಹೊಲಿಸಿದ ಸಮವಸ್ತ್ರ ವಿತರಣೆ ನಿಲ್ಲಿಸಿದ್ದರಿಂದ ಸಾಕಷ್ಟು ತೊಂದರೆಯಾಗಿದೆ. ಸಮವಸ್ತ್ರ ನೀಡುವ ಬದಲು ಕೇವಲ ಬಟ್ಟೆ ನೀಡಲಾಗಿದೆ. ಆರ್ಥಿಕ ಸಮಸ್ಯೆಯಿಂದಾಗಿ ಹಲವು ವಿದ್ಯಾರ್ಥಿಗಳು ಇನ್ನೂ ಸಮವಸ ಹೊಲಿಸಿಲ್ಲ. ಆದ್ದರಿಂದ ವಿದ್ಯಾರ್ಥಿಗಳ ಖಾತೆಗೆ ಸರ್ಕಾರ ಹೊಲಿಗೆ ಹಣ ಹಾಕಬೇಕು. ವಿದ್ಯಾರ್ಥಿಗಳಿಗೆ ನೀಡಬೇಕಾದ ಶೂ ಮತ್ತು ಸಾಕ್ಸ್​ಗಳಿಗೆ ಈವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಐ.ಎಸ್​.ಓ ಬ್ರ್ಯಾಂಡ್​ನ ಕಂಪನಿಯಿಂದಲೇ ಶೂ ಖರೀದಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ಆದರೆ ಇದಕ್ಕೆ ಅಗತ್ಯವಿರುಷ್ಟ ಹಣ ಬಿಡುಗಡೆಯಾಗಿಲ್ಲ.

ಸರ್ಕಾರ ಅತಿಥಿ ಶಿಕ್ಷಕರಿಗೆ ಕೇವಲ 10-15 ಸಾವಿರ ರೂ.ಗಳಷ್ಟು ಗೌರವ ಧನ ನೀಡುತ್ತದೆ. ಆದರೆ ವೃತ್ತಿ ನೈಪುಣ್ಯತೆ ಹೊಂದಿರುವ ಶಿಕ್ಷಕರಿಗೆ ತಾಲೂಕಿನಲ್ಲಿರುವ ಖಾಸಗಿ ಶಾಲೆಗಳು 20-25 ಸಾವಿರ ರೂ. ವೇತನ ನೀಡುತ್ತಿದೆ. ಇದರಿಂದಾಗಿ ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರು ದೊರೆಯುವುದು ಕಷ್ಟವಾಗುತ್ತಿದೆ.

ಸರ್ಕಾರಿ ಶಾಲೆಗಳಲ್ಲಿ ಬಹುವರ್ಗ ಬೋಧನೆಯನ್ನು ಸಮರ್ಥಿಸುವ ರೀತಿಯಲ್ಲಿ ನಲಿಕಲಿ ವ್ಯವಸ್ಥೆ ರೂಢಿಯಲ್ಲಿದೆ. ಆದರೆ ನಲಿಕಲಿ ತರಬೇತಿ ಪಡೆದ ಬಹುತೇಕ ಶಿಕರು ನಿವೃತ್ತರಾಗಿರುವುದರಿಂದ ನಲಿಕಲಿ ನಿರೀತ ಪ್ರಮಾಣದ ಪರಿಣಾಮ ಬೀರುತ್ತಿಲ್ಲ. ಅತಿಥಿ ಶಿಕ್ಷಕರಿಗೆ ನಲಿಕಲಿಯ ತರಬೇತಿ ಇರುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಅನುಮತಿ ನೀಡಿರುವುದರಿಂದ 10 ಮಕ್ಕಳು ಆಂಗ್ಲ ಮಾಧ್ಯಮಕ್ಕೆ 5 ಮಕ್ಕಳು ಕನ್ನಡ ಮಾಧ್ಯಮಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಇಂಗ್ಲಿಷ್​ ಮಾಧ್ಯಮದಲ್ಲಿ ಬೋಧಿಸುವ ಶಿಕ್ಷಕರಿಗೆ ವಿಶೇಷವಾದ ತರಬೇತಿ ನೀಡಬೇಕಿದೆ. ಈ ಎಲ್ಲ ಸಮಸ್ಯೆಗಳನ್ನು ಕೂಡಲೇ ಪರಿಹರಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net