

ನವದೆಹಲಿ: ಹಿಂದೂ ದೇವರನ್ನು ಹೀಯಾಳಿಸಿದವರ ವಿರುದ್ಧ ಕಿಡಿಕಾರಿ ಪ್ರವಾದಿ ಮೊಹಮ್ಮದ್ ವಿರುದ್ಧ ಮಾತನಾಡಿ ಭಾರಿ ವಿವಾದಕ್ಕೆ ಒಳಗಾಗಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯಾಲಾಲ್ ರುಂಡ ಕಡಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ವಿಶೇಷ ನ್ಯಾಯಾಲಯ ಆರೋಪಿಯೊಬ್ಬನಿಗೆ ಜಾಮೀನು ನೀಡಿದೆ. ಫರ್ಹಾದ್ ಮೊಹಮ್ಮದ್ ಅಲಿಯಾಸ್ ಬಬ್ಲಾ ಎಂಬಾತನಿಗೆ ಜಾಮೀನು ಮಂಜೂರಾಗಿದೆ. ಈ ಆರೋಪಿ ವಿರುದ್ಧ ಈ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ಯಾವುದೇ ಆರೋಪವಿಲ್ಲ ಎಂದು ಜಾಮೀನು ಮಂಜೂರು ಮಾಡಿದ್ದ ನ್ಯಾಯಾಧೀಶ ರವೀಂದ್ರ ಕುಮಾರ್ ತಿಳಿಸಿದ್ದಾರೆ.
ಶಸ್ತ್ರಾಸ್ತ್ರ ಕಾಯ್ದೆಯಡಿ ಮಾತ್ರ ಆತನ ಮೇಲೆ ಆರೋಪ ಹೊರಿಸಲಾಗಿತ್ತು. ಆರೋಪಿ ಜುಲೈ 2022ರಿಂದ ಜೈಲಿನಲ್ಲಿದ್ದು, ಅಂತಹ ಪರಿಸ್ಥಿತಿಯಲ್ಲಿ ಅವರಿಗೆ ಜಾಮೀನು ಪ್ರಯೋಜನ ನೀಡಲಾಗುತ್ತದೆ ಎಂದು ನ್ಯಾಯಾಧೀಶರು ಹೇಳಿದರು.
ಕಳೆದ ವರ್ಷ ಜೂ. 28ರಂದು ರಾಜಸ್ಥಾನದ ಉದಯಪುರದ ಮಲ್ಡಾಸ್ ಸ್ಟ್ರೀಟ್ನಲ್ಲಿರುವ ಟೈಲರಿಂಗ್ ಅಂಗಡಿಯೊಳಕ್ಕೆ ಬಂದಿದ್ದ ದುಷ್ಕರ್ಮಿಗಳು ಕನ್ಹಯ್ಯಾಲಾಲ್ ಮೇಲೆ ದಾಳಿ ಮಾಡಿ ಹಲ್ಲೆಗೈದು, ರುಂಡ ಕತ್ತರಿಸಿ ಕೊಲೆ ಮಾಡಿ ಪರಾರಿಯಾಗಿದ್ದರು.