ಟೀಕೆ, ನೆಗೆಟಿವ್ ಟ್ರೋಲ್​ ಎದುರಿಸಿದ್ದ 'ಕಂಗುವ' ಈಗ ಆಸ್ಕರ್​ ರೇಸ್​ನಲ್ಲಿ! ನಟ ಸೂರ್ಯ ಫ್ಯಾನ್ಸ್​ ಫುಲ್​ ಖುಷ್​ | Oscars 2025

ವಿಜಯವಾಣಿ (59)
Published on

Kanguva Oscars: 2024ರ ನವೆಂಬರ್​ನಲ್ಲಿ ರಿಲೀಸ್​ ಆಗಿ ಬಾಕ್ಸ್​ ಆಫೀಸ್​ನಲ್ಲಿ ಮುಗ್ಗರಿಸಿದ ತಮಿಳು ಸೂಪರ್​ಸ್ಟಾರ್ ಸೂರ್ಯ ಅಭಿನಯದ 'ಕಂಗುವಾ' ಚಿತ್ರ ಇದೀಗ ಆಸ್ಕರ್​ ರೇಸ್​ನಲ್ಲಿರುವುದು ಸದ್ಯ ಸಿನಿಪ್ರಿಯರನ್ನು ಭಾರೀ ಅಚ್ಚರಿಗೆ ದೂಡಿದೆ. ಬಿಗ್​ ಬಜೆಟ್‌ನಲ್ಲಿ ತಯಾರಾದ ಸಿರುತೈ ಶಿವ ನಿರ್ದೇಶನದ ಹಾಗೂ ಸ್ಟುಡಿಯೋ ಗ್ರೀನ್ ಜ್ಞಾನವೇಲ್ ರಾಜ ನಿರ್ಮಿಸಿದ ಈ ಚಿತ್ರ, ಬಾಕ್ಸ್​​ ಆಫೀಸ್​ನಲ್ಲಿ ಲಾಭ ಗಳಿಸದೆ, ಬಿಡುಗಡೆಗೊಂಡ ಕೆಲವೇ ವಾರಗಳಲ್ಲಿ ಚಿತ್ರಮಂದಿರದಿಂದ ಎತ್ತಂಗಡಿಯಾಯಿತು. ಇಷ್ಟಾದರೂ ಸಹ ಚಿತ್ರವು ಆಸ್ಕರ್​ಗೆ ನಾಮನಿರ್ದೇಶನಗೊಂಡಿರುವುದು ಸದ್ಯ ಹಲವರ ಗೊಂದಲಕ್ಕೆ ಕಾರಣವಾಗಿದೆ.

ಭಾರತೀಯ ಸಿನಿ ಟ್ರ್ಯಾಕರ್ ಮನೋಬಾಲಾ ವಿಜಯಬಾಲನ್ ಅವರು, "ಬ್ರೇಕಿಂಗ್: ಕಂಗುವಾ 2025ರ ಆಸ್ಕರ್‌ಗೆ ಪ್ರವೇಶಿಸಿದೆ" ಎಂದು ಬರೆದು, ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್ ಹೊರಬೀಳುತ್ತಿದ್ದಂತೆ ಪೋಸ್ಟ್​ ಕ್ಷಣ ಮಾತ್ರದಲ್ಲಿ ವೈರಲ್ ಆಗಿದ್ದು, ಸೂರ್ಯ ಅಭಿಮಾನಿಗಳಲ್ಲಿ ಭಾರೀ ಖುಷಿ ತಂದಿದೆ. ಒಂದೆಡೆ ನಟನ ಫ್ಯಾನ್ಸ್​ಗೆ ಈ ಸಂಗತಿ ಸಂತಸ ನೀಡಿದರೆ, ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆಯದೆ ಸೋಲುಂಡ ಚಿತ್ರ ಹೇಗೆ ಆಸ್ಕರ್ ರೇಸ್‌ಗೆ ಕಾಲಿಟ್ಟಿತು ಎಂಬ ಚರ್ಚೆಗಳು ಮತ್ತೊಂದೆಡೆ.

ಈ ಹಿಂದೆ 'ಕಂಗುವ' ವಿರುದ್ಧ ಜಾಲತಾಣಗಳಲ್ಲಿ ನೆಗೆಟಿವ್​ ಪ್ರಚಾರವನ್ನು ಖಂಡಿಸಿ ನಟಿ ಹಾಗೂ ಸೂರ್ಯ ಪತ್ನಿ ಜ್ಯೋತಿಕಾ ಪೋಸ್ಟ್ ಹಂಚಿಕೊಂಡಿದ್ದರು. ಉದ್ದೇಶಪೂರ್ವಕವಾಗಿ ಚಿತ್ರದ ಬಗ್ಗೆ ನಕಾರಾತ್ಮಕ ವಿಮರ್ಶೆಗಳನ್ನು ಹಾಕಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದರು. ಆದರೆ, ಜ್ಯೋತಿಕಾರನ್ನು ಸಹ ಜಾಲತಾಣದಲ್ಲಿ ಟ್ರೋಲ್​ ಮಾಡಲಾಗಿತ್ತು. ಕೆಲವರು ನೆಗೆಟಿವ್​ ಪ್ರಚಾರ ಮಾಡಿದರೆ, ಇನ್ನು ಕೆಲವರು ಸಿನಿಮಾ ಚೆನ್ನಾಗಿದೆ ಎಂದು ಅಭಿಪ್ರಾಯಿಸಿದ್ದರು. ಒಟ್ಟಾರೆ ಫ್ಯಾಮಿಲಿ ಆಡಿಯನ್ಸ್​ ನೋಡುವಂತಹ 'ಕಂಗುವ' ಇದೀಗ ಆಸ್ಕರ್​ ಓಟದಲ್ಲಿ ಹೆಜ್ಜೆಯಿಟ್ಟಿರುವುದು ನಟ ಸೂರ್ಯ ಹಾಗೂ ಚಿತ್ರತಂಡಕ್ಕೆ ಖುಷಿ ವಿಷಯವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net