

ಮುಂಬೈ: ಬಾಲಿವುಡ್ ಸ್ಟಾರ್ಗಳ ಪೈಕಿ ತಮ್ಮ ವಿವಾದಾತ್ಮಕ ಹೇಳಿಕೆಯಿಂದಲೇ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುವ ಸ್ಟಾರ್ ನಟಿ, ಸಂಸದೆ ಕಂಗನಾ ರಣಾವತ್, ಇದೀಗ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದು, ಈ ಬಾರಿ ತಮ್ಮ ಹೇಳಿಕೆಗಲ್ಲ! ಬದಲಿಗೆ ಹೊಸ ಸಿನಿಮಾದ ಬಿಡುಗಡೆ ವಿಷಯಕ್ಕೆ. ಇಂದಿರಾ ಗಾಂಧಿ ಅವರ ಕಥೆಯನ್ನು ಒಳಗೊಂಡಿರುವ 'ಎಮರ್ಜೆನ್ಸಿ' ಚಿತ್ರದಲ್ಲಿ ಕಂಗನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಈ ಚಿತ್ರವು ಇದೇ ಸೆ.06ರಂದು ಜಾಗತಿಕವಾಗಿ ರಿಲೀಸ್ ಆಗಲು ಸಜ್ಜಾಗಿದೆ. ಸದ್ಯ ವಿವಾದಕ್ಕೀಡಾಗಿರುವ ಈ ಸಿನಿಮಾ ಯಾವುದೇ ಕಾರಣಕ್ಕೂ ಬಿಡುಗಡೆಯಾಗಬಾರದು ಎಂದು ಕೆಲವರು ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಇತ್ತೀಚೆಗಷ್ಟೇ ಕಿಡಿಗೇಡಿಗಳ ಗುಂಪೊಂದು ನಟಿಗೆ ಕೊಲೆ ಬೆದರಿಕೆ ಹಾಕಿತ್ತು. ಇದೆಲ್ಲದರ ಮಧ್ಯೆ ನಟಿಯ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.
ಇಂದಿರಾ ಗಾಂಧಿ ಅವರ ಜೀವನ ಆಧರಿತ ಚಿತ್ರ ಇದಾಗಿದ್ದು, ಸ್ವತಃ ತಾವೇ ನಿರ್ದೇಶನಕ್ಕಿಳಿಯುವ ಮೂಲಕ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಈ ಪ್ರಯತ್ನ ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ. ಇನ್ನು ಚಿತ್ರದ ಪ್ರಚಾರ ಕೆಲಸಗಳಲ್ಲಿ ಭಾಗಿಯಾಗಿರುವ ಕಂಗನಾ, ತಾವು ಮೂವರು ಸ್ಟಾರ್ ನಟರ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದೆ ಎಂಬ ಶಾಕಿಂಗ್ ಸಂಗತಿಯೊಂದನ್ನು ಬಹಿರಂಗವಾಗಿ ತಿಳಿಸಿದ್ದಾರೆ. ಅಸಲಿಗೆ ಆ ಚಿತ್ರಗಳನ್ನು ತಿರಸ್ಕರಿಸಲು ಕಾರಣವೇನು ಎಂಬುದನ್ನು ಕೂಡ ನಟಿ ಹೇಳಿದ್ದಾರೆ.
"ನಾನು ಒಂದಲ್ಲ ಮೂರು ಬಿಗ್ ಆಫರ್ಗಳನ್ನು ರಿಜೆಕ್ಟ್ ಮಾಡಿದ್ದೇನೆ. ರಣಬೀರ್ ಕಪೂರ್ ನಟನೆಯ 'ಸಂಜು', ಸಂಜಯ್ ಬನ್ಸಾಲಿ ಅವರ 'ರಾಮ್ ಲೀಲಾ' ಮತ್ತು ಅಕ್ಷಯ್ ಕುಮಾರ್ ಅಭಿನಯದ 'ಸಿಂಗ್ ಈಸ್ ಬ್ಲಿಂಗ್' ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೆ. ನನಗೆ ಆ ಸಿನಿಮಾಗಳಲ್ಲಿ ರೂಪಿಸಿದ್ದ ಪಾತ್ರಗಳು ಇಷ್ಟವಾಗಲಿಲ್ಲ. ಹೀಗಾಗಿ ಪ್ರಾಜೆಕ್ಟ್ನ ಕೈಬಿಟ್ಟೆ" ಎಂದು ಕಂಗನಾ ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).